Site icon Vistara News

ಸಂಪಾದಕೀಯ l ಕೆಲವೇ ಕೆಲವು ನೀತಿಗೆಟ್ಟ ಶಿಕ್ಷಕರಿಂದ ಇಡೀ ಶಿಕ್ಷಕ ವರ್ಗಕ್ಕೆ ಕಳಂಕ‌ ತಟ್ಟದಿರಲಿ

Yenne party

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಊರೊಂದರಲ್ಲಿ ತರಗತಿಗೆ ಚಕ್ಕರ್ ಹಾಕಿ ಕೆಲವು ಶಿಕ್ಷಕರು ಮದ್ಯ ಸೇವಿಸುತ್ತಿದ್ದ ದೃಶ್ಯ ಬಯಲಾಗಿದೆ. ಶಿಕ್ಷಕರ ನಡತೆಗೆ ಬೇಸತ್ತು ಪೋಷಕರೇ ವಿಡಿಯೊ ಚಿತ್ರೀಕರಣ ಮಾಡಿ ಇದನ್ನು ಪ್ರಸಾರ ಮಾಡಿದ್ದಾರೆ. ಇದು ಶಿಕ್ಷಕ ವರ್ಗಕ್ಕೇ ಕಳಂಕ. ಶಾಲೆ ಅವಧಿಯಲ್ಲಿ ಮದ್ಯದಂಗಡಿಯ ಕದ ತಟ್ಟುವ ಶಿಕ್ಷಕರ ಮಾನ ಹೀಗೆ ಸಾರ್ವಜನಿಕರ ಎದುರು ಹರಾಜಾದ ಬಳಿಕ ಇನ್ನು ಮುಂದೆ ಅವರನ್ನು ವಿದ್ಯಾರ್ಥಿಗಳು ಹೇಗೆ ನೋಡಬಹುದು? ಮದ್ಯ ಸೇವಿಸಿ ವಿದ್ಯಾರ್ಥಿಗಳ ಮುಂದೆ ಹೋಗಿ ಪಾಠ ಮಾಡುವ ಇಂಥವರನ್ನು ವಿದ್ಯಾರ್ಥಿಗಳಾದರೂ ಗಂಭೀರವಾಗಿ ಪರಿಗಣಿಸುತ್ತಾರೆಯೇ? ಇಂಥ ಘಟನೆಗಳನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು.

ʼವಿಸ್ತಾರ ನ್ಯೂಸ್‌ʼ ಪ್ರತಿದಿನವೂ ನಿಮ್ಮ ಮುಂದೆ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನವನ್ನು ನಡೆಸುತ್ತಿದೆ. ತಮ್ಮೂರ ಶಾಲೆಗಳನ್ನು ಪೋಷಿಸಲು ದತ್ತು ತೆಗೆದುಕೊಂಡಿರುವ, ನೆರವು ನೀಡುತ್ತಿರುವ ಎಲ್ಲ ಮಹನೀಯರಿಗೆ ಗೌರವ ಸಲ್ಲುವಂತೆ, ಅಲ್ಲಿನ ಶಾಲೆಗಳನ್ನು ಅಷ್ಟೇ ಘನತೆಯಿಂದ ಕಾಪಾಡಿಕೊಂಡಿರುವ ಶಿಕ್ಷಕರ ವರ್ಗಕ್ಕೂ ನಮ್ಮ ಗೌರವಗಳು ಸಲ್ಲುತ್ತವೆ. ಉತ್ತಮ ಮೂಲಸೌಲಭ್ಯಗಳಿರುವ ಶಾಲೆಗಳು ಜನರನ್ನೇನೋ ಆಕರ್ಷಿಸಬಹುದು, ಆದರೆ ಆ ಶಾಲೆಗಳು ಮಾಡುವ ಫಲಿತಾಂಶದ ಸಾಧನೆಯಲ್ಲಿ ಅಲ್ಲಿನ ಶಿಕ್ಷಕವೃಂದದ ಪಾತ್ರವೇ ಮಹತ್ವದ್ದಾಗಿರುತ್ತದೆ. ಉತ್ತಮ ಶಿಕ್ಷಕರಿಲ್ಲದೇ ಉತ್ತಮ ಫಲಿತಾಂಶ ಬರುವುದೆಂತು? ಹಾಗೆಯೇ ನಮ್ಮ ಯುವಜನತೆಯಲ್ಲಿ ಬಹಳಷ್ಟು ಮಂದಿ ಜ್ಞಾನದಾಹಿಗಳಾಗಿರುವುದು, ಸನ್ನಡತೆಯವರಾಗಿರುವುದೂ ಶ್ರೇಷ್ಠ ಶಿಕ್ಷಕರ ಮಾದರಿಯನ್ನು ಅನುಸರಿಸಿಯೇ. ಬಹುಪಾಲು ಶಿಕ್ಷಕರು ಶ್ರದ್ಧೆ ಮತ್ತು ಶಿಸ್ತಿನಿಂದ ಪಾಠ ಮಾಡುತ್ತ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಚೆಲ್ಲುತ್ತಿದ್ದಾರೆ. ಆದರ್ಶ, ಮಾದರಿ ಶಿಕ್ಷಕರು ನಮ್ಮ ನಡುವೆಯೇ ಹಲವರಿದ್ದಾರೆ. ಶಾಲಾ ಅವಧಿ ನಂತರವೂ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅವರು ಹೆಚ್ಚು ಅಂಕ ಗಳಿಸುವಲ್ಲಿ ನೆರವಾಗುವ ಇಂಥವರು ಶಿಕ್ಷಕ ಕುಲದ ಶ್ರೇಷ್ಠ ಮಾದರಿಗಳು.

ಆದರೆ ಬೆರಳೆಣಿಕೆಯಷ್ಟು ನೀತಿಗೆಟ್ಟ ಶಿಕ್ಷಕರಿಂದ ಇಡೀ ಶಿಕ್ಷಕ ವರ್ಗಕ್ಕೇ ಕಳಂಕ ಎದುರಾಗುವಂತಾಗಿದೆ. ಇತ್ತೀಚೆಗೆ ಇಂಥ ಕೆಟ್ಟ, ಋಣಾತ್ಮಕ ಕಾರಣಗಳಿಗಾಗಿ ಶಿಕ್ಷಕರು ದಿನವೂ ಒಂದಲ್ಲ ಕಡೆ ಸುದ್ದಿಯಲ್ಲಿರುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಅತಿಥಿ ಶಿಕ್ಷಕನೊಬ್ಬ ಶಾಲೆಯಲ್ಲೇ ಸಹ ಶಿಕ್ಷಕಿ ಮತ್ತು ಅವರ ಮಗನನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಮಂಡ್ಯದಲ್ಲಿ ಶಿಕ್ಷಕನೊಬ್ಬ ಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದ. ವಸತಿ ಶಾಲೆಯ ಪ್ರಾಂಶುಪಾಲ ಅತ್ಯಾಚಾರ ಮಾಡಿದ, ಶಾಲಾ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಗಳು ವರದಿಯಾಗಿವೆ. ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕರೇ ಈ ರೀತಿ ಕ್ರೂರವಾಗಿ ವರ್ತಿಸುತ್ತಿರುವುದು ಆಘಾತಕಾರಿ. ಹಾಗೆಯೇ, ಇಷ್ಟು ಕ್ರೂರರಲ್ಲದೇ ಹೋದರೂ, ತಮ್ಮ ಕರ್ತವ್ಯವನ್ನು ಮರೆತು ಅಮಲಿನ ಸ್ಥಿತಿಯಲ್ಲಿ ತೇಲುವ ಶಿಕ್ಷಕರೂ ಅಪಾಯಕಾರಿಯೆ! ಇವರು ಮಕ್ಕಳಿಗೆ ಕೆಟ್ಟ ಮಾದರಿ ಹಾಕಿಕೊಡುವುದು ಮಾತ್ರವಲ್ಲ, ಪಾಠವನ್ನೂ ಸರಿಯಾಗಿ ಮಾಡದೆ ಮಕ್ಕಳ ಬೌದ್ಧಿಕ ಬೆಳವಣಿಗೆ ಕುಂಠಿತವಾಗಲು ಕಾರಣರಾಗುತ್ತಿರುತ್ತಾರೆ. ಇಂತಹ ಶಿಕ್ಷಕರ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷಣ ರಂಗದ ಘನತೆ, ಗೌರವ ಉಳಿಸಲು ಸರ್ಕಾರ, ಶಿಕ್ಷಣ ಇಲಾಖೆ ಮುಂದಾಗಬೇಕು. ಶಾಲಾಭಿವೃದ್ಧಿ ಸಮಿತಿ ಕೂಡ ಉಡಾಳ ಶಿಕ್ಷಕರ ಮೇಲೆ ನಿಗಾ ಇಟ್ಟಿರಬೇಕು. ಕೆಲವೇ ಕೆಲವು ಶಿಕ್ಷಕರ ಮಾನಗೇಡಿ ಕೃತ್ಯಗಳಿಂದ ಇಡೀ ಶಿಕ್ಷಕ ವರ್ಗಕ್ಕೆ ಕಳಂಕ ಬರುವುದನ್ನು ತಪ್ಪಿಸಬೇಕು. ಶಿಕ್ಷಕರ ನೀತಿಗೇಡಿ ನಡವಳಿಕೆಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕು.

ಇದನ್ನೂ ಓದಿ | ಸಂಪಾದಕೀಯ| ಒಗ್ಗಟ್ಟಿನಿಂದ ವೈರಸ್ ಎದುರಿಸೋಣ, ಬೇಡ ಕೊರೊನಾ ಪಾಲಿಟಿಕ್ಸ್

Exit mobile version