ಸಾರ್ವಜನಿಕ ಭದ್ರತೆ, ಪೊಲೀಸ್ (ಕಾನೂನು ಸುವ್ಯವಸ್ಥೆ) ಹಾಗೂ ಭೂಮಿಯ ವಿಷಯಗಳನ್ನು ಹೊರತುಪಡಿಸಿ ದಿಲ್ಲಿ ಸರ್ಕಾರವು ಇತರೆಲ್ಲ ಸೇವೆಗಳಿಗೆ ಸಂಬಂಧಿಸಿದ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಗುರುವಾರ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪಿನಿಂದಾಗಿ, ಕೇಂದ್ರ ಸರ್ಕಾರದ ವಿರುದ್ಧ ದಿಲ್ಲಿ ಸರ್ಕಾರ ಮೇಲುಗೈ ಸಾಧಿಸಿದಂತಾಗಿದೆ. ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರ ಆಡಳಿತಾತ್ಮಕ ವಿಷಯಗಳ ಮೇಲೆ ನಿಯಂತ್ರಣ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವ ಅಂಶ ಮಹತ್ವದ್ದು. ಇದು ದಿಲ್ಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಸದಾ ನಡೆಯುತ್ತಿದ್ದ ಮುಸುಕಿನ ಸಂಘರ್ಷ ಪರಿಹರಿಸುವಲ್ಲಿ ದಿಕ್ಸೂಚಿಯಾಗುವ ಮಾತು.
ಕಾನೂನು ಸುವ್ಯವಸ್ಥೆ ವಿಚಾರವಾಗಿ ದಿಲ್ಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ನೇಮಿಸುವ ಲೆಫ್ಟಿನೆಂಟ್ ಗವರ್ನರ್ ನಡುವೆ ಸದಾ ಒಂದಿಲ್ಲೊಂದು ಸಂಘರ್ಷ ನಡೆಯುತ್ತಲೇ ಇತ್ತು. ಕೇಂದ್ರ ಮತ್ತು ದಿಲ್ಲಿಯಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರ ಹಿಡಿದಿದ್ದಾಗ ಈ ವಿಚಾರವಾಗಿ ರಾಜಕೀಯ ಪ್ರತಿಷ್ಠೆ, ಕಲಹ ಬಿಗಡಾಯಿಸುತ್ತದೆ. ಅಧಿಕಾರಿಗಳ ಮೇಲೆ ಕೇಂದ್ರ ನಿಯಂತ್ರಣ ಸಾಧಿಸುವುದರಿಂದ ತಮ್ಮ ಮಾತನ್ನು ಅವರು ಕೇಳುವುದಿಲ್ಲ ಎನ್ನುವುದು ದಿಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ಅಳಲಾಗಿತ್ತು. ದೇಶದ ರಾಜಧಾನಿಯಾದ ದಿಲ್ಲಿಯ ಅಭಿವೃದ್ಧಿಗೂ ಇದರಿಂದ ಭಾರಿ ಹಿನ್ನಡೆ ಉಂಟಾಗುತ್ತಿದೆ. ಇದೀಗ ಸುಪ್ರೀಂ ಕೋರ್ಟ್, ಆಡಳಿತ ಯಾರ ಹೊಣೆ ಮತ್ತು ಕಾನೂನು ಸುವ್ಯವಸ್ಥೆ ಯಾರ ಹೊಣೆ ಎಂಬುದನ್ನು ಸ್ಪಷ್ಟಪಡಿಸಿದೆ.
ದೆಹಲಿಯ ಆಡಳಿತಾತ್ಮಕ ಸೇವೆಗಳ ವಿಷಯದಲ್ಲಿ (ಅಧಿಕಾರಶಾಹಿಯ ಮೇಲೆ) ಕೇಂದ್ರ ಸರ್ಕಾರಕ್ಕೆ ಮಾತ್ರ ನಿಯಂತ್ರಣ ಇರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ 2015ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ದಿಲ್ಲಿಯ ಎಎಪಿ ಸರ್ಕಾರ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ದಿಲ್ಲಿಯಲ್ಲಿ ಯಾರಿಗೆ ಹೆಚ್ಚು ಅಧಿಕಾರ ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ 2019ರಲ್ಲಿ ಭಿನ್ನ ತೀರ್ಪು ನೀಡಿತ್ತು. ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಸೇರಿದಂತೆ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರದ್ದೇ ಕೊನೆಯ ತೀರ್ಮಾನ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಹೇಳಿದ್ದರೆ, ನ್ಯಾಯಮೂರ್ತಿ ಎ.ಕೆ. ಸಿಕ್ರಿ ಭಿನ್ನ ತೀ ರ್ಪು ನೀಡಿದ್ದರು. ಬಳಿಕ, ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿದ್ದರು. ಈ ತೀರ್ಪಿನೊಂದಿಗೆ ಕಲಹಕ್ಕೆ ಕೊನೆ ಬೀಳಲಿ ಎಂದು ಆಶಿಸೋಣ.
ಭಾರತದಲ್ಲಿರುವುದು ಪ್ರಜಾಪ್ರಭುತ್ವ ಮಾತ್ರವಲ್ಲ, ಒಕ್ಕೂಟ ಆಡಳಿತ ವ್ಯವಸ್ಥೆ. ಇಲ್ಲಿ ಕೇಂದ್ರ ಸರ್ಕಾರವಿದ್ದಂತೆ ಆಯಾ ರಾಜ್ಯಗಳ ಸರ್ಕಾರಗಳೂ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತವೆ. ಯಾರ ಅಧಿಕಾರದ ವ್ಯಾಪ್ತಿ ಏನು ಎಂಬುದನ್ನು ಸಂವಿಧಾನದ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗೂ ಉಭಯರಿಗೂ ಸಲ್ಲುವ ಸಮವರ್ತಿ ಪಟ್ಟಿಗಳ ಮೂಲಕ ದಾಖಲಿಸಿದೆ. ಯಾವುದೇ ಅನುಮಾನ ಮೂಡಿದಾಗ ಸಂವಿಧಾನದ ವ್ಯಾಖ್ಯೆಗಳನ್ನು ಗಮನಿಸುವುದು, ಅದರಂತೆ ನಡೆದುಕೊಳ್ಳುವುದು ಮುಖ್ಯ. ಈ ಹಿನ್ನೆಲೆಯಲ್ಲಿಯೇ, ದೆಹಲಿ ಕೂಡ ಇತರ ರಾಜ್ಯಗಳಿಗೆ ಸಮಾನವಾಗಿದೆ ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಸರ್ಕಾರವನ್ನು ಹೊಂದಿದೆ. ತಮ್ಮನ್ನು ಪ್ರತಿನಿಧಿಸಲು ಹಾಗೂ ಕಾನೂನು ರೂಪಿಸಲು ದಿಲ್ಲಿ ವಿಧಾನಸಭೆಗೆ ಜನ ಅಧಿಕಾರ ನೀಡಿದ್ದಾರೆ. ಅಧಿಕಾರಿಗಳು ಸಚಿವರಿಗೆ ಕೆಲಸದ ವರದಿ ಮಾಡುವುದನ್ನು ಸ್ಥಗಿತಗೊಳಿಸಿದರೆ ಸಾಮೂಹಿಕ ಜವಾಬ್ದಾರಿ ಸಿದ್ಧಾಂತಕ್ಕೆ ಧಕ್ಕೆ ಆಗುತ್ತದೆ. ಪ್ರಜಾಪ್ರಭುತ್ವ ಆಡಳಿತದ ನಿಜವಾದ ಅಧಿಕಾರ ಚುನಾಯಿತ ಸರ್ಕಾರದ ಕೈಯಲ್ಲಿ ಇರಬೇಕು ಎಂದು ಸಿ.ಜೆ. ಅವರ ಜತೆಗೆ ನ್ಯಾಯಮೂರ್ತಿಗಳಾದ ಎಂ.ಆರ್ ಷಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ.ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಹೇಳಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಈ ಬಾರಿ ದಾಖಲೆಯ ಮತದಾನ, ಜನರ ಮತ ಸಂಭ್ರಮ ಆಶಾದಾಯಕ
ಆದರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ ಎಂದರೆ ದಿಲ್ಲಿ ರಾಷ್ಟ್ರದ ರಾಜಧಾನಿ ಎಂಬುದು. ಇಡೀ ದೇಶದ ಆಡಳಿತ ನಿರ್ವಹಿಸುವ ಸಂಸತ್ತು ಇಲ್ಲಿದೆ; ದೇಶವಿದೇಶಗಳ ರಾಯಭಾರಿಗಳು ಕಾರ್ಯ ನಿರ್ವಹಿಸುವುದು, ಗಣ್ಯರು ಭೇಟಿ ನೀಡುವುದು ಇಲ್ಲಿಗೆ. ಸೈನ್ಯವೂ ಸೇರಿದಂತೆ ಎಲ್ಲ ಮಹತ್ವದ ಇಲಾಖೆಗಳ ಕೇಂದ್ರ ಕಚೇರಿಗಳಿರುವುದು ಇಲ್ಲಿ. ಹೀಗಾಗಿ ಇದು ಮಹತ್ವದ ತಾಣವಾಗಿದೆ. ಹೇಗೆ ದೇಶದ ವ್ಯೂಹಾತ್ಮಕ ತಾಣಗಳ ರಹಸ್ಯ ವಿಚಾರಗಳು ಯಾವುದೇ ಒಂದು ರಾಜ್ಯ ಸರ್ಕಾರದಿಂದ ನಿಭಾಯಿಸಲ್ಪಡಲಾಗದೋ, ಅದೇ ರೀತಿ ದಿಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯೂ ಒಟ್ಟಾರೆ ದೇಶದ ಹಿತದೃಷ್ಟಿಯಿಂದಲೇ ನಿಭಾಯಿಸಲ್ಪಡಬೇಕು. ಇದನ್ನು ದಿಲ್ಲಿ ಸರ್ಕಾರಕ್ಕೆ ಒಪ್ಪಿಸಲು ಸಾಧ್ಯವಿಲ್ಲ. ಕೆಲವು ಇಲಾಖೆಗಳ ಕಾರ್ಯವೈಖರಿ ಜಟಿಲವಾಗಿದ್ದು, ಕೆಲವೊಮ್ಮೆ ಇವುಗಳ ಕಾರ್ಯಾಚರಣೆಯನ್ನು ಯಾರು ನಿಭಾಯಿಸಬೇಕು ಎಂಬ ಬಗ್ಗೆ ಗೊಂದಲ ಉಂಟಾಗಬಹುದು. ಇಂಥ ಸನ್ನಿವೇಶಗಳನ್ನು ನಿಭಾಯಿಸುವುದಕ್ಕೆಂದೇ ಲೆಪ್ಟಿನೆಂಟ್ ಗವರ್ನರ್ ನೇಮಕ ಮಾಡಲಾಗುತ್ತದೆ. ಇವರ ಕೆಲಸ ಉಭಯ ಸರ್ಕಾರಗಳ ಮಧ್ಯವರ್ತಿಯಂತೆ ಕೆಲಸ ಮಾಡುವುದು ಹೊರತು ದಿಲ್ಲಿ ಸರ್ಕಾರದ ಮೇಲೆ ಆಡಳಿತ ಚಲಾಯಿಸುವುದಲ್ಲ. ಹಾಗೆಯೇ ದಿಲ್ಲಿಯ ಆಡಳಿತ ನಡೆಸುವವರು ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಕಡೆಗಣಿಸಲಾಗದು. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡಾಗ ಆಡಳಿತ ಸುಗಮವಾಗುತ್ತದೆ. ಇನ್ನು ಮುಂದಾದರೂ ದಿಲ್ಲಿ ಮತ್ತು ಕೇಂದ್ರ ಸರ್ಕಾರದ ನಡುವಿನ ಒಣ ಪ್ರತಿಷ್ಠೆಯ ಗದ್ದಲಕ್ಕೆ ತೆರೆ ಬೀಳಲಿ.