Site icon Vistara News

ವಿಸ್ತಾರ ಸಂಪಾದಕೀಯ: ಗಡಿ ವಿಚಾರ ಕೋರ್ಟ್ ನಿರ್ಣಯಿಸಲಿ, ಶಾಂತಿ ಕಾಪಾಡಿಕೊಳ್ಳೋಣ

ಕರ್ನಾಟಕದ ಹಲವು ಪ್ರದೇಶಗಳು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣಾರ್ಹತೆಯ ಪ್ರಶ್ನೆ ಇನ್ನೂ ಇತ್ಯರ್ಥವಾಗದೆ ಸುಪ್ರೀಂ ಕೋರ್ಟ್‌ ಮುಂದಿದೆ. ಈ ನಡುವೆ, ಬೆಳಗಾವಿಯಲ್ಲಿ ಗಡಿ ವಿವಾದವನ್ನು ಕೆರಳಿಸಲು ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ, ಎಂಇಎಸ್ ಮುಂತಾದ ಮಹಾರಾಷ್ಟ್ರದ ಸಂಘಟನೆಗಳು ಪ್ರಯತ್ನಿಸುತ್ತಲೇ ಇವೆ. ದುರಂತವೆಂದರೆ, ಈ ಬೆಂಕಿಗೆ ಗಾಳಿ ಹಾಕುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಸಚಿವರು ಕೂಡ ವರ್ತಿಸುತ್ತಿದ್ದಾರೆ. ವಿವಾದವನ್ನು ಭುಗಿಲೆಬ್ಬಿಸುವ ಉದ್ದೇಶದಿಂದಲೇ, ಬೆಳಗಾವಿಗೆ ಭೇಟಿ ನೀಡುವುದಾಗಿ ಮಹಾರಾಷ್ಟ್ರದ ಸಚಿವರು ಹೇಳಿದ್ದೇ ಕಾರಣವಾಗಿ, ಅದಕ್ಕೆ ಪ್ರತಿಭಟನೆಯೂ ಸೃಷ್ಟಿಯಾಗಿದೆ. ಪುಣೆಯಲ್ಲಿ ಕರ್ನಾಟಕದ ಬಸ್ಸುಗಳಿಗೆ ಮಸಿ ಬಳಿಯಲಾಗಿದೆ. ಶಿವಸೇನೆಯ ತಂಡ ಗಡಿಯೊಳಗೆ ಪ್ರವೇಶಿಸಲು ಮುಂದಾಗಿ ದಾಂಧಲೆ ಎಬ್ಬಿಸಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಗಡಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡರು ದಾಂಧಲೆ ನಡೆಸಿ ಸರ್ಕಾರದ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಗಡಿ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಉಭಯ ರಾಜ್ಯಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಸಲಹೆ ನೀಡಿದ್ದಾರೆ.

ಆಗಾಗ ಕರ್ನಾಟಕ- ಮಹಾರಾಷ್ಟ್ರ ನಡುವೆ ಗಡಿ ವ್ಯಾಜ್ಯ ಅಶಾಂತಿ ಸೃಷ್ಟಿಸುತ್ತಲೇ ಇದೆ. ಮುಖ್ಯವಾಗಿ ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆಗಾಗ ಈ ವಿಷಯ ಕೆದಕುತ್ತಲೇ ಇರುತ್ತವೆ. ಜತೆಗೆ ವಿಧಾನಸಭೆ- ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವಂತೆ ನಾನಾ ರಾಜಕೀಯ ಶಕ್ತಿಗಳು ಇಲ್ಲಿ ಮತರಾಜಕೀಯದ ದುರ್ಲಾಭ ಪಡೆಯಲು ಯತ್ನಿಸುತ್ತಿರುವುದೂ ಕಂಡುಬರುತ್ತಿದೆ. ಆದರೆ ಬೆಳಗಾವಿ ಎಂದಾದರೂ ಮಹಾರಾಷ್ಟ್ರದ ಪಾಲಾಗುವುದು ಸಾಧ್ಯವೆ? 1956ನೇ ಇಸವಿಯಲ್ಲಿ ರಾಜ್ಯಗಳ ಪುನರ್ವಿಂಗಡಣೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು, ಆಗ ಹೊಸದಾಗಿ ಸ್ಥಾಪಿಸಲಾಗಿದ್ದ ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಲಾಯಿತು. ಮಹಾರಾಷ್ಟ್ರ ಸರ್ಕಾರವು ಇದನ್ನು ವಿರೋಧಿಸಿತು. ಮಹಾರಾಷ್ಟ್ರ ಸರಕಾರದ ಒತ್ತಾಯಕ್ಕೆ ಮಣಿದು, ಭಾರತ ಸರ್ಕಾರವು 1960ರಲ್ಲಿ ನಾಲ್ಕು ಸದಸ್ಯರ ಆಯೋಗವನ್ನು ರಚಿಸಿತು. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಹಾಜನ್ ಹಾಗೂ ಇತರ ಪರಿಣಿತರ ತಂಡ ಗಡಿ ಭಾಗದ ಅಧ್ಯಯನ ನಡೆಸಿ, ಸಾವಿರಾರು ಜನರ ಸಂದರ್ಶನ ನಡೆಸಿ, ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ವರದಿಯನ್ನು ನೀಡಿತು. ಅಂದಿಗೂ, ಇಂದಿಗೂ ಹಾಗೂ ಮುಂದಿಗೂ ಈ ಮಹಾಜನ್‌ ವರದಿಯೇ ಅಂತಿಮ. ಇದನ್ನೇ ಗಡಿ ವಿವಾದದ ಮಾತು ಬಂದಾಗಲೆಲ್ಲಾ ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿಯುತ್ತಲೇ ಬಂದಿದೆ. ಹೀಗಿರುವಾಗ, ಬೆಳಗಾವಿ ಯಾರಿಗೆ ಸೇರಬೇಕು ಎಂಬ ವಿಚಾರವನ್ನು ಮರುಪರಿಶೀಲಿಸುವ ಅಗತ್ಯವೇ ಕಾಣಿಸುವುದಿಲ್ಲ.

ಇದರ ಜತೆಗೆ, ಮಹಾರಾಷ್ಟ್ರದ ಕಿಡಿಗೇಡಿ ಶಕ್ತಿಗಳನ್ನು ಅಧೀರಗೊಳಿಸಿರುವ ವಿಷಯವೆಂದರೆ, ತನ್ನೊಳಗಿರುವ ಗಡಿಭಾಗದ ಗ್ರಾಮಗಳಲ್ಲೇ ಎದ್ದಿರುವ ಬಂಡಾಯ. ಜತ್ತ, ಕೊಲ್ಹಾಪುರ ಮುಂತಾದ ಕಡೆಯ ಹಲವು ಗ್ರಾಮಗಳು ಒಟ್ಟಾಗಿ, ನಾವು ಕರ್ನಾಟಕಕ್ಕೆ ಸೇರುತ್ತೇವೆ ಎಂದು ಹೇಳಿರುವುದು ಮಹಾರಾಷ್ಟ್ರ ಸರ್ಕಾರವನ್ನೇ ಅಧೀರಗೊಳಿಸಿದೆ. ಹೀಗಿರುವಾಗ, ಮೊದಲು ತನ್ನ ಸುಪರ್ದಿಯಲ್ಲಿರುವ ಗ್ರಾಮಗಳನ್ನು ಚೆನ್ನಾಗಿ ನೋಡಿಕೊಳ್ಳಲಿ, ನಂತರ ಬೆಳಗಾವಿಯ ಬಗ್ಗೆ ಮಾತಾಡಲಿ ಎಂದು ಯಾರಾದರೂ ಹೇಳುವುದು ಸಹಜವೇ. ಇದನ್ನೇ ಕರ್ನಾಟಕ ಸರ್ಕಾರ ಕೂಡ ಹೇಳಿದೆ. ಯಾವ ಕಾರಣಕ್ಕೂ ಕರ್ನಾಟಕದ ಒಂದಿಂಚು ಭೂಮಿಯೂ ಮಹಾರಾಷ್ಟ್ರದ ಪಾಲಾಗಲು ಸಾಧ್ಯವಿಲ್ಲ. ಈಗಾಗಲೇ ಹಲವು ನ್ಯಾಯಾಲಯಗಳು ಕರ್ನಾಟಕದ ಪರವಾಗಿಯೇ ತೀರ್ಪು ನೀಡಿವೆ. ಹಾಗಾಗಿ ಮಹಾರಾಷ್ಟ್ರದ ಕೆಲವು ಪುಂಡರು ಮಾಡುವ ಕೃತ್ಯಕ್ಕೆ ಕನ್ನಡಿಗರು ವಿಚಲಿತರಾಗುವ ಅವಶ್ಯಕತೆ ಇಲ್ಲ. ಬೆಳಗಾವಿಯಲ್ಲಿ ಶಿವಸೇನೆ ಮತ್ತು ಎಂಇಎಸ್ ಅನ್ನು ಅಲ್ಲಿಯ ಕನ್ನಡಿಗರು ಮತ್ತು ಮರಾಠಿಗರು ಸೇರಿಯೇ ಹೇಳಹೆಸರಿಲ್ಲದಂತೆ ಮಾಡಿದ್ದಾರೆ. ನೆಲೆ ಕಳೆದುಕೊಂಡ ಕಿಡಿಗೇಡಿ ಶಕ್ತಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂಥ ಹೋರಾಟಗಳನ್ನು ಸೃಷ್ಟಿಸುವುಸು ಸಹಜ. ಹಾಗಾಗಿ ಕೆಲವು ಮರಾಠಿ ಪುಂಡರ ಪ್ರಚೋದನೆಗೆ ಒಳಗಾಗದೆ ನಾವು ಶಾಂತಿಯಿಂದ ವರ್ತಿಸೋಣ.

ಗಡಿ ವ್ಯಾಜ್ಯ ಕುರಿತು ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸದ್ಯವೇ ವಿಚಾರಣೆಗೆ ಬರಲಿದೆ. ಕೋರ್ಟ್‌ನಲ್ಲಿ ರಾಜ್ಯದ ಪರ ಸಮರ್ಥ ವಾದ ಮಂಡಿಸಲು ನಾವು ಸಜ್ಜಾಗಿದ್ದೇವೆ ಎಂದು ಸಿಎಂ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ. ರಾಜ್ಯದ ಪರ ವಾದವೂ ಪೂರ್ವ ನಿದರ್ಶನಗಳೊಂದಿಗೆ ಗಟ್ಟಿಯಾಗಿಯೇ ಇದೆ. ಕಾನೂನು ಸಮರದ ಹಾದಿ ಸುಗಮವಾಗಿದ್ದಾಗ, ಬೀದಿಯಲ್ಲಿ ಉತ್ತರ ಕೊಡುವ ಅಗತ್ಯವಿರುವುದಿಲ್ಲ. ಬೆಳಗಾವಿ ಇಂದು, ನಾಳೆ, ಮುಂದೆಂದೂ ಕರ್ನಾಟಕದ್ದೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಎಲ್ಲಕ್ಕಿಂತ ಮುಖ್ಯವಾದುದು ಉಭಯ ರಾಜ್ಯಗಳ ಜನರ ಶಾಂತಿಯುತ ಸಹಬಾಳ್ವೆ ಮತ್ತು ಕಾನೂನು ಸುವ್ಯವಸ್ಥೆ. ಇದನ್ನು ಕಾಪಾಡಿಕೊಳ್ಳೋಣ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಮುಸ್ಲಿಂ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಕಸಿಯಬೇಡಿ

Exit mobile version