Site icon Vistara News

ವಿಸ್ತಾರ ಸಂಪಾದಕೀಯ | ಸರ್ಕಾರಗಳ ಡಬಲ್ ಎಂಜಿನ್ ಬರೀ ಸದ್ದಾಗದಿರಲಿ

ವಿಸ್ತಾರ ಸಂಪಾದಕೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೆಂಪೇಗೌಡ ಪ್ರತಿಮೆಯನ್ನು ಅನಾವರಣಗೊಳಿಸಿ ಮೂರು ದೊಡ್ಡ ಸಮುದಾಯಗಳ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಇದು ಆಡಳಿತ ಪಕ್ಷದ ಪರ ರಾಜ್ಯದಲ್ಲಿ ಒಂದು ಹವಾ ಸೃಷ್ಟಿಸುವ, ಮೂರು ಸಮುದಾಯಗಳನ್ನು ಒಲಿಸಿಕೊಳ್ಳುವ ಪ್ರಯತ್ನ ಎಂದು ಸತಾರ್ಕಿಕವಾಗಿ ಊಹಿಸಬಹುದು. ಈ ಸಂದರ್ಭದಲ್ಲಿ ಅವರು ತಮ್ಮ ಸರ್ಕಾರ ಈಡೇರಿಸಿದ ಹಲವಾರು ಸಾಧನೆಗಳು, ನೀಡಿದ ಯೋಜನೆಗಳ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. 2014ರಲ್ಲಿ ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದೇಶದಲ್ಲಿ ದುಪ್ಪಟ್ಟಾಗಿಸಿರುವುದನ್ನು (70ರಿಂದ 140) ಒತ್ತಿ ಹೇಳಿದ್ದಾರೆ. ಐಟಿ ವಲಯ, ಕೋವಿಡ್‌ ನಿರ್ವಹಣೆ, ಬಂಡವಾಳ ಆಕರ್ಷಣೆ ಮುಂತಾದವುಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದನ್ನೂ ಪ್ರಸ್ತಾಪಿಸಿದ್ದಾರೆ. ಇವೆಲ್ಲವೂ ನಿಜವೇ ಆಗಿವೆ.

ಈ ಸಂದರ್ಭದಲ್ಲಿ ಅವರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಯಾನಕ್ಕೆ ಚಾಲನೆ ನೀಡಿರುವುದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ನೊಂದು ಟರ್ಮಿನಲ್‌ ಉದ್ಘಾಟಿಸಿರುವುದು ಮಹತ್ವದ್ದು. ಯಾವುದೇ ಬೆಳೆಯುತ್ತಿರುವ ನಗರವೂ ಸಾರಿಗೆ ಸಂಪರ್ಕದಲ್ಲಿ ಇನ್ನಷ್ಟು ಮತ್ತಷ್ಟು ಉನ್ನತೀಕರಣಗಳನ್ನು ಅಪೇಕ್ಷಿಸುತ್ತಲೇ ಇರುತ್ತದೆ. ನೂತನ ರೈಲುಗಳು, ನೂತನ ವಿಮಾನ ನಿಲ್ದಾಣಗಳು ಹಾಗೂ ಹೆಚ್ಚಿನ ವಿಮಾನ ಸಂಪರ್ಕಗಳು ರಾಜ್ಯಕ್ಕೆ ಹರಿದುಬರುವ ಕಾರ್ಪೊರೇಟ್‌ಗಳ, ಉದ್ಯೋಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಅಭಿವೃದ್ಧಿಯ ವೇಗವನ್ನು ವರ್ಧಿಸುವುದರಲ್ಲಿ ಸಂಶಯವಿಲ್ಲ. ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಅದನ್ನು ಉಳಿಸಿಕೊಳ್ಳುವಲ್ಲಿ ಇವು ನೆರವಾಗಲಿವೆ.

ಈ ಸಂದರ್ಭದಲ್ಲಿ ಅವರು ಎಂದಿನಂತೆ ʼಡಬಲ್ ಎಂಜಿನ್ ಸರ್ಕಾರʼಗಳ ಪವರ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಇದೊಂದು ಆಕರ್ಷಕ ನುಡಿಗಟ್ಟಾಗಿ ಬದಲಾಗಿದೆ. ಡಬಲ್‌ ಎಂಜಿನ್‌ ಇರುವುದರಿಂದ ರೈಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಜನ ಭಾವಿಸುವುದು ಸಹಜ. ಆದರೆ ಇದು ನಿಜವಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಳಿತಾರೂಢ ಪಕ್ಷಗಳು ಪ್ರಗತಿ ಯೋಜನೆಗಳಿಗೆ ಚಾಲನೆ ನೀಡುವುದು ಸಹಜ. ಪ್ರಧಾನಿ ಮೋದಿಯವರಂತೂ ಚುನಾವಣಾ ರಾಜ್ಯಗಳಲ್ಲಿ ಯೋಜನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಇದೀಗ ಕರ್ನಾಟಕದ ಸರದಿ. ಹಾಗೇ ಜನತೆಯನ್ನು ಆಕರ್ಷಿಸಲು ʼಡಬಲ್‌ ಎಂಜಿನ್‌ʼ ಮಂತ್ರವನ್ನೂ ಪಠಿಸುತ್ತಾರೆ. ಡಬಲ್‌ ಎಂಜಿನ್‌ ಇದ್ದಲ್ಲೆಲ್ಲಾ ಪ್ರಗತಿಯಾಗಿದೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ. ಉತ್ತರಪ್ರದೇಶದಲ್ಲಿ ಡಬಲ್‌ ಎಂಜಿನ್‌ ಇದೆ. ಅಲ್ಲಿನ ರಸ್ತೆಗಳು ಅಭಿವೃದ್ಧಿಯಾಗಿವೆ. ಆದರೆ ಬಂಡವಾಳ ಹೂಡಿಕೆ ಮೇಲೆದ್ದಿಲ್ಲ, ಉದ್ಯೋಗ ಸೃಷ್ಟಿ ಹೆಚ್ಚಳವಾಗಿಲ್ಲ. ಬೆಂಗಳೂರಿನಲ್ಲಿ ಪ್ರಗತಿಯ ಸೂಚಿ ಸದಾ ಮೇಲ್ಮುಖವಾಗಿರಲು ಕಾರಣ ಡಬಲ್‌ ಎಂಜಿನ್‌ ಅಲ್ಲ; ಇಲ್ಲಿನ ಜನತೆಯ ಉದಾರತೆ, ಹವಾಮಾನ, ಪ್ರತಿಭೆಗಳ ಲಭ್ಯತೆ, ಸುರಕ್ಷತೆ, ಸ್ಥಳೀಯ ಸರ್ಕಾರಗಳ ಪರಿಣಾಮಕಾರಿ ಕಾರ್ಯವೈಖರಿ, ಕಾರ್ಯಾಂಗ- ಶಾಸಕಾಂಗಗಳ ಸಹಕಾರ, ಉದ್ಯಮಸ್ನೇಹಿ ವಾತಾವರಣ ಇತ್ಯಾದಿ.

ಪ್ರತಿಮೆ ಅನಾವರಣ ಮಾಡುವುದು, ಮಾಲಾರ್ಪಣೆ ಮಾಡುವುದೆಲ್ಲಾ ಸಾಂಕೇತಿಕ ಕ್ರಿಯೆಗಳು. ಸಮುದಾಯಗಳ ಮನ ಗೆಲ್ಲಲು ಇವೂ ಇರಲಿ. ಆದರೆ ನಿಜವಾದ ಕೆಲಸ ಆಗಬೇಕಿರುವುದು ಮೂಲಸೌಕರ್ಯ ವಲಯದಲ್ಲಿ, ಜನೋಪಯೋಗಿ ಕಾರ್ಯಗಳಲ್ಲಿ. ಡಬಲ್ ಎಂಜಿನ್ ಸರ್ಕಾರ ಎನ್ನುವುದು ಕೇವಲ ತೋರಿಕೆಯ ಚುನಾವಣಾ ಅಸ್ತ್ರ ಆಗಬಾರದು. ಕರ್ನಾಟಕ ರಾಜಧಾನಿ ಬೆಂಗಳೂರು ದೇಶದ ಐಟಿ ಬಿಟಿ ರಾಜಧಾನಿ ಎಂದೇ ಪ್ರಸಿದ್ಧಿಯಾಗಿದೆ. ಆದರೆ ಬೆಂಗಳೂರು ತೀವ್ರ ಮೂಲ ಸೌಕರ್ಯ ಸಮಸ್ಯೆ ಎದುರಿಸುತ್ತಿದೆ. ರಸ್ತೆ ಗುಂಡಿ, ಕಳಪೆ ರಸ್ತೆ, ಟ್ರಾಫಿಕ್ ಜಾಮ್ ಇತ್ಯಾದಿಗಳು ಈ ನಗರಕ್ಕೆ ಕಪ್ಪು ಚುಕ್ಕೆಯಾಗಿವೆ. ಕಳೆದೆರಡು ತಿಂಗಳ ಹಿಂದಿನ ಮಳೆಗೆ ಇಡೀ ಬೆಂಗಳೂರು ಬೆಚ್ಚಿಬಿದ್ದಿತ್ತು. ಪ್ರಮುಖ ಉದ್ಯಮಿಗಳೂ ಈ ಬಗ್ಗೆ ದನಿ ಎತ್ತಿದರು. ವಿಮಾನ ನಿಲ್ದಾಣಕ್ಕೆ ಟರ್ಮಿನಲ್‌ ಬರಲಿ; ಆದರೆ ಮೆಜೆಸ್ಟಿಕ್‌ನ ರಸ್ತೆಗಳೂ ಸುಧಾರಿಸಲಿ. ಇಲ್ಲಿನ ಪ್ರಯಾಣ ಹೊರಗಿನವರಿಗೆ ನರಕವೆನ್ನಿಸದಿರಲಿ. ಹಾಗೆಯೇ ಕರ್ನಾಟಕದ ಪ್ರಜೆಗಳನ್ನು ಕಂಗೆಡಿಸುವಂಥ ಇನ್ನಿತರ ಸಮಸ್ಯೆಗಳೂ ಹಲವಿವೆ. ಸ್ಥಳೀಯರಿಗೆ ಉದ್ಯೋಗ ಸಿಗಬೇಕು, ಬ್ಯಾಂಕಿಂಗ್‌ ಮುಂತಾದ ವಲಯಗಳಲ್ಲಿ ಕನ್ನಡಿಗರ ಹಾಗೂ ಕನ್ನಡದ ಕಡೆಗಣನೆ, ಇವೆಲ್ಲ ಸರಿಯಾಬೇಕಿದೆ. ಡಬಲ್‌ ಇಂಜಿನ್‌ ಕೆಲಸ ಮಾಡಬೇಕಿರುವುದು ಇಲ್ಲಿ- ಅಂದರೆ ಪ್ರಾದೇಶಿಕ ಸರ್ಕಾರಗಳು ತಮ್ಮ ಘನತೆ ಗೌರವ ಕಾಪಾಡಿಕೊಂಡು ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವಲ್ಲಿ. ಮೋದಿಯವರು ಹೇಳುವ ಡಬಲ್ ಎಂಜಿನ್ ಸರ್ಕಾರಗಳಿಂದ ನಿಜಕ್ಕೂ ಬೆಂಗಳೂರಿಗೆ, ರಾಜ್ಯಕ್ಕೆ ಪ್ರಯೋಜನ ಆಗಲಿ. ಮೂಲ ಸೌಕರ್ಯ ಕೊರತೆಯ ಕಳಂಕದಿಂದ ರಾಜ್ಯವನ್ನು ಹೊರ ತರಲಿ.

ವಿಸ್ತಾರ ಟಿವಿಯಲ್ಲಿ ಬೆಳಗ್ಗೆ 8.27ಕ್ಕೆ ಪ್ರಸಾರವಾಗುವ ನ್ಯೂಸ್ ಮಾರ್ನಿಂಗ್ ವಿತ್ HPKಯಲ್ಲಿ ‘ವಿಸ್ತಾರ ಸಂಪಾದಕೀಯ’ ವಿಶ್ಲೇಷಣೆ ನೋಡಿ…

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಪ್ರಾಮಾಣಿಕ ಕಾರ್ಯಾಂಗವೇ ಅಭಿವೃದ್ಧಿಗೆ ದಾರಿ

Exit mobile version