Site icon Vistara News

ವಿಸ್ತಾರ ಸಂಪಾದಕೀಯ: ಬೆಂಗಳೂರಿನಲ್ಲಿ ಐಫೋನ್ ಉತ್ಪಾದನಾ ಘಟಕದ ಕನಸು ನನಸಾಗಲಿ

iphone factory

#image_title

ಮುಂಚೂಣಿ ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ 2024ರ ಏಪ್ರಿಲ್‌ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಉತ್ಪಾದನೆ ಆರಂಭಿಸಲಿದೆ. ಜಾರ್ಜ್‌ ಚು ಅವರ ನೇತೃತ್ವದಲ್ಲಿ ಫಾಕ್ಸ್‌ಕಾನ್‌ ಕಂಪನಿಯ ಉನ್ನತ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ರಾಜ್ಯ ಸರ್ಕಾರದ ಸಚಿವರ ಜತೆ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ. ಈ ಹೊಸ ಘಟಕದಿಂದ ರಾಜ್ಯದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಇದು 13,600 ಕೋಟಿ ರೂ. ಮೊತ್ತದ ಯೋಜನೆ. ತೈವಾನ ಮೂಲದ ಈ ಕಂಪನಿ ಮೂರು ಹಂತಗಳಲ್ಲಿ ಇಲ್ಲಿ ಘಟಕ ಅಂತಿಮಗೊಳಿಸಿ, ವರ್ಷಕ್ಕೆ 2 ಕೋಟಿ ಮೊಬೈಲ್‌ ತಯಾರಿಸುವ ಗುರಿ ಹಾಕಿಕೊಂಡಿದೆ. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಈ ಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ.

ಇಷ್ಟು ದೊಡ್ಡ ಐಫೋನ್‌ ಉತ್ಪಾದನಾ ಘಟಕ ಭಾರತಕ್ಕೆ, ಅದರಲ್ಲೂ ಬೆಂಗಳೂರಿನಲ್ಲಿ ಬರುತ್ತಿರುವುದು ಮಹತ್ವದ ವಿದ್ಯಮಾನ. ಚೀನಾ- ಅಮೆರಿಕ ನಡುವೆ ಉಲ್ಬಣಿಸಿದ ಸಂಘರ್ಷ, ತೈವಾನ್-‌ ಚೀನಾ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ. ಇದರ ಲಾಭ ಕರ್ನಾಟಕಕ್ಕೆ ಆಗುತ್ತಿದೆ. ಇದೇ ರೀತಿ ಹೊಸೂರಿನಲ್ಲಿ ಕೂಡ ಇನ್ನೊಂದು ಐಫೋನ್‌ ಘಟಕ ನಿರ್ಮಾಣವಾಗಲಿದೆ ಎಂದು ಇತ್ತೀಚೆಗೆ ವರ್ತಮಾನ ದೊರೆತಿತ್ತು. ಇದನ್ನು ಟಾಟಾ ಸಂಸ್ಥೆ ನಿರ್ಮಿಸುತ್ತಿದೆ. ಇಲ್ಲಿ 60,000ದಷ್ಟು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಅದರಲ್ಲಿ 6000 ಉದ್ಯೋಗಗಳು ಬುಡಕಟ್ಟು ಸಮುದಾಯಗಳ ಮಹಿಳೆಯರಿಗೆ ಹೋಗಲಿವೆ. ಇದು ಆರ್ಥಿಕ ಬೆಳವಣಿಗೆಯ ಜತೆಗೆ ಸಾಮಾಜಿಕ ಕಳಕಳಿಯೂ ಸೇರಿದ ವಿಶಿಷ್ಟ ಬೆಳವಣಿಗೆ.

ರಾಜ್ಯ ಸರ್ಕಾರ ಈಗ ದೊರೆತಿರುವ ಇಂಥ ಅಪೂರ್ವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಹಿಂದೆ ಕೆಲವು ದೊಡ್ಡ ಕಂಪನಿಗಳು ಮೂಲ ಸೌಕರ್ಯ ಕೊರತೆಯ ಕಾರಣ ನೀಡಿ ಬೆಂಗಳೂರು ತೊರೆದು ನೆರೆಯ ಚೆನ್ನೈ ಮತ್ತು ಹೈದರಾಬಾದ್‌ಗೆ ವಲಸೆ ಹೋಗಿದ್ದವು. ಕಳೆದ ವರ್ಷ ಮಳೆಗಾಲದಲ್ಲಿ ಉಂಟಾದ ಅನಾಹುತದಿಂದ ಬೆಚ್ಚಿದ ಕೆಲವು ದೊಡ್ಡ ಕಂಪನಿಗಳು ಬೆಂಗಳೂರು ತೊರೆಯುವ ಮಾತನಾಡಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ನಂತರ ಅವು ಸ್ಪಷ್ಟನೆ ನೀಡಿ, ಅಂಥ ಉದ್ದೇಶವೇನೂ ತಮಗಿಲ್ಲ ಎಂದವೇನೋ ನಿಜ; ಆದರೆ ಬೆಂಗಳೂರಿನಿಂದ ಎಂಎನ್‌ಸಿಗಳನ್ನು ಸೆಳೆದು ತಮ್ಮಲ್ಲಿ ಹೂಡಿಕೆ ಮಾಡುವಂತೆ ಮಾಡಲು ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇವೆ. ನಮ್ಮ ಪ್ರಮಾದಗಳು ಅವರಿಗೆ ಲಾಭ ಆಗಬಾರದು. ಈ ಬಾರಿ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಯಾವುದೇ ಪ್ರಮಾದ ಆಗದಂತೆ ಎಚ್ಚರ ವಹಿಸಬೇಕು. ಇಂಥ ಇನ್ನಷ್ಟು ಬೃಹತ್ ಉತ್ಪಾದನಾ ಘಟಕಗಳು ರಾಜ್ಯಕ್ಕೆ ಬರುವಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ದೇಶಾದ್ಯಂತ ವ್ಯವಸ್ಥಿತ ಧಾನ್ಯ ಸಂಗ್ರಹ ಕೇಂದ್ರ ಮಹತ್ವದ ನಿರ್ಧಾರ

ಇದರ ಜತೆಗೆ ಸ್ಥಳೀಯರಿಗೆ ಅಂದರೆ ರಾಜ್ಯದ ಯುವ ಜನತೆಗೆ ಹೆಚ್ಚು ಹೆಚ್ಚು ಉದ್ಯೋಗ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಘಟಕಕ್ಕೆ ಸುಮಾರು 50 ಲಕ್ಷ ಲೀಟರ್‌ನಷ್ಟು ನೀರನ್ನು ಸರ್ಕಾರ ಪೂರೈಸಲಿದೆ. ಜತೆಗೆ ಗುಣಮಟ್ಟದ ರಸ್ತೆ ಸಂಪರ್ಕ, ವಿದ್ಯುತ್‌ ಸೌಕರ್ಯಗಳೂ ಸರ್ಕಾರದ ಕಡೆಯಿಂದ ಕಂಪನಿಗೆ ಲಭ್ಯವಾಗಲಿವೆ. ಬೆಂಗಳೂರಿನಲ್ಲಿ ಐಫೋನ್‌ಗೆ ಲಭ್ಯವಾಗಿರುವ ಬೃಹತ್‌ ಮಾರುಕಟ್ಟೆ ಹಾಗೂ ಮೂಲಸೌಕರ್ಯಗಳು ಕಂಪನಿಗೆ ವರವಾಗಲಿವೆ. ಭಾರತದಲ್ಲಿ ಬೆಳೆಯುತ್ತಿರುವ ಐಫೋನ್‌ ಮಾರುಕಟ್ಟೆಯು ಈ ಹೊಸ ಘಟಕಗಳಿಂದಾಗಿ ಇನ್ನಷ್ಟು ಸುಲಭಲಭ್ಯವೂ ಆಗಬಹುದು. ಈ ಹಿನ್ನೆಲೆಯಲ್ಲಿ ಕಂಪನಿಯು ಕೂಡ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಒದಗಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆ ಆಗಬೇಕು. ಈಗಾಗಲೇ ಕಂಒನಿಯ ಸಿಬ್ಬಂದಿಗೆ ಬೇಕಾದ ಕೌಶಲಗಳ ವಿವರ ಕೇಳಲಾಗಿದ್ದು, ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲಗಳ ತರಬೇತಿ ಕೊಡಿಸಿ ಮಾನವ ಸಂಪನ್ಮೂಲ ಲಭ್ಯವಾಗಿಸುವ ಪ್ರಯತ್ನ ಮಾಡುವ ಮಾತನ್ನು ಸರ್ಕಾರ ಆಡಿದೆ. ಇದನ್ನು ಸಾಧ್ಯವಾಗಿಸಬೇಕು.
ಇನ್ನು, ಈ ಯೋಜನೆಯ ಜಾರಿ ಕುರಿತಾಗಿ ರಾಜಕೀಯ ಮೇಲಾಟಗಳು ಬೇಡ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಇದೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಅಸಹಕಾರ ತೋರದೆ ನೆರವು ನೀಡಬೇಕು. ಹಾಗೆಯೇ, ಈ ಬೃಹತ್ ಉತ್ಪಾದನಾ ಘಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶ ಸಿಗುವಂತಾಗಬೇಕು.

Exit mobile version