ರಾಜ್ಯದ ನೂತನ ಸರ್ಕಾರದ ವಿಧಾನಸಭೆ- ಪರಿಷತ್ತುಗಳ ಮೊದಲ ಅಧಿವೇಶನ ಮುಕ್ತಾಯಗೊಂಡಿದೆ. ಹತ್ತು ದಿನಗಳ ಕಾಲ ನಡೆದ ಬಜೆಟ್ ಅಧಿವೇಶನಕ್ಕೆ ತೆರೆ ಬಿದ್ದಿದೆ. ಮೂರೂ ಪ್ರಮುಖ ಪಕ್ಷಗಳ ನೂತನ ಶಾಸಕರೂ ಇದರಲ್ಲಿ ಪಾಲ್ಗೊಂಡಿದ್ದಾರಾದರೂ, ಯಾವುದೇ ಅರ್ಥಪೂರ್ಣ ಚರ್ಚೆ ನಡೆದಿಲ್ಲ. ಮೂರೂ ಪಕ್ಷಗಳಿಗೂ ಸ್ವಹಿತಾಸಕ್ತಿಯೇ ಮುಖ್ಯವಾಗಿಬಿಟ್ಟಿದೆ ಎನ್ನುವುದು ಸ್ಪಷ್ಟ. ಮೊದಲು ಕಾಂಗ್ರೆಸ್ ನೀಡಿದ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಗದ್ದಲ ನಡೆಯಿತು. ನಂತರ ಹತ್ಯೆಗಳನ್ನು ಪ್ರಸ್ತಾಪಿಸಿ ವಿಪಕ್ಷ ಗದ್ದಲ ಎಬ್ಬಿಸಿತು. ವಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳನ್ನು ಪ್ರೊಟೊಕಾಲ್ ಉಲ್ಲಂಘಿಸಿ ಬಳಸಿಕೊಂಡ ಕ್ರಮವನ್ನು ವಿರೋಧಿಸಿ ಬಿಜೆಪಿ ಗದ್ದಲ ಎಬ್ಬಿಸಿತು. ಇದರಿಂದ ಹತ್ತು ಜನ ಬಿಜೆಪಿ ಶಾಸಕರು ಅಮಾನತಾಗುವಂತಾಯಿತು. ಶಾಸಕರ ಅಮಾನತು ಆದೇಶ ವಿರೋಧ ಮಾಡಿ ಬಿಜೆಪಿ, ಜೆಡಿಎಸ್ ಶಾಸಕರು ಸದನದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು. ಬಜೆಟ್ ಅಧಿವೇಶನದ ಕಡೆಯ ದಿನದಂದು ರಾಜ್ಯಪಾಲರಿಗೆ ದೂರು ಕೊಟ್ಟು ಶಾಸಕರು ಸದನ ಬಾಯ್ಕಾಟ್ ಮಾಡಿದರು. ಅಂತೂ ಇಂತೂ ಸ್ವಹಿತಾಸಕ್ತಿ ಮುಂದೆ ಸಾರ್ವಜನಿಕ ಹಿತಾಸಕ್ತಿ ನಗಣ್ಯವಾಗಿದ್ದು, ರಾಜಕೀಯ ಪ್ರತಿಷ್ಠಯ ಮುಂದೆ ಜನರ ಸಮಸ್ಯೆ ಶಾಸಕರಿಗೆ ಕಾಣಲಿಲ್ಲ. ಮುಖ್ಯವಾಗಿ ನಾಡನ್ನು ಆವರಿಸಿಕೊಂಡ ಬರದ ಬಗ್ಗೆ ಎಲ್ಲರೂ ಕುರುಡಾಗಿದ್ದರು.
ಸಣ್ಣಪುಟ್ಟ ವಿಷಯಗಳಿಗೆ ಆರೋಪ ಪ್ರತ್ಯಾರೋಪ ಮಾಡಿಕೊಂಡು ಸದನವನ್ನ ಬಲಿ ಪಡೆದ ಶಾಸಕರಿಗೆ ರಾಜ್ಯದಲ್ಲಿ ಆವರಿಸುತ್ತಿರುವ ಬರದ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೊಳೆಯಲಿಲ್ಲ. ಮುಂಗಾರು ಮಂಕಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭಾವ್ಯ. ಉತ್ತರ ಕರ್ನಾಟಕದಲ್ಲಿ ಈ ಬಾರಿ ಮಳೆಯಾಗಿಲ್ಲ. ಹೀಗಾಗಿ ಇಲ್ಲಿ ಭೂಜಲ ಹಾಗೂ ಅಂತರ್ಜಲವಿಲ್ಲದೇ, ಬೆಳೆಯಾಗದೇ ಬರ ಪರಿಸ್ಥಿತಿ ಕಾಡಲಿರುವುದು ಖಚಿತ. ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿ ವಿದ್ಯುತ್ ಉತ್ಪಾದನೆಯೂ ಸ್ಥಗಿತಗೊಳ್ಳುವ ಆತಂಕವಿದೆ. ಜೂನ್ ತಿಂಗಳು ಪೂರ್ತಿ ಮುಗಿದರೂ ಮಳೆ ಬಂದಿರಲಿಲ್ಲ. ಜುಲೈನಲ್ಲಿ ತಡವಾಗಿ ಮಳೆಯಾದುದರಿಂದ ಒಂದು ಹಂಗಾಮದ ಬಿತ್ತನೆಯನ್ನೇ ರೈತರು ಬಿಟ್ಟ ವರದಿ ಬಂದಿದೆ. ಹೀಗಾಗಿ, ಬರ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ.
ರಾಜ್ಯದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಜೂ. 1ರಿಂದ 17ರ ವರೆಗೆ ವಾಡಿಕೆಗಿಂತ ಶೇ. 72ರಷ್ಟು ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣ ಕೇಂದ್ರ ತಿಳಿಸಿದೆ. ಒಟ್ಟಾರೆ ಶೇ. 72ರಲ್ಲಿ ಮಲೆನಾಡು ಭಾಗದಲ್ಲಿ ಅತೀ ಹೆಚ್ಚು, ಶೇ. 83ರಷ್ಟು ಮಳೆ ಖೋತಾ ಆಗಿದೆ. ಕರಾವಳಿಯಲ್ಲಿ ಶೇ. 77, ದಕ್ಷಿಣ ಒಳನಾಡಿನಲ್ಲಿ ಶೇ. 55, ಉತ್ತರ ಒಳನಾಡಿನಲ್ಲಿ ಶೇ. 69ರಷ್ಟು ಮಳೆ ಕೊರತೆಯಾಗಿದೆ. ಬಿತ್ತನೆ ಆಗಬೇಕಾದ ಸೂಕ್ತ ಕಾಲದಲ್ಲಿ ಆಗಿಲ್ಲ. ಇದರಿಂದ ಬೆಳೆ ಕೊರತೆಯೂ, ಬೆಲೆ ಏರಿಕೆಯೂ ಉಂಟಾಗಬಹುದಾಗಿದೆ. ರೈತರು ಸಂತ್ರಸ್ತರಾಗಬಹುದು. ಪ್ರಸ್ತುತ 806ಕ್ಕೂ ಹೆಚ್ಚು ವಸತಿ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಲ್ಲೆಲ್ಲ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹಲವೆಡೆ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ ಎಂದು ಸಚಿವರೇ ಇತ್ತೀಚೆಗೆ ಹೇಳಿದ್ದರು. ಅಂದರೆ ರಾಜಧಾನಿಗೂ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ. ಇದೆಲ್ಲವನ್ನೂ ಮನದಲ್ಲಿ ಇಟ್ಟುಕೊಂಡು ಸರ್ಕಾರ ಕಾರ್ಯ ಪ್ರವೃತ್ತವಾಗಬೇಕಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಯುರ್‌ಕೇರ್ ವಂಚನೆ ಪ್ರಕರಣ, ಇಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ
ಗ್ಯಾರಂಟಿಗಳ ಚಿಂತೆಯಲ್ಲಿ ಇತರ ಕಾರ್ಯಗಳನ್ನು ಸರ್ಕಾರ ಮರೆತಿದೆಯೇ ಎಂಬ ಭಾವವೂ ಮೂಡುವಂತಿದೆ. ಹಾಗೇ ಗ್ಯಾರಂಟಿಗಳ ಅನುಷ್ಠಾನವನ್ನು ಖಂಡಿಸುವ ಭರದಲ್ಲಿ ವಿಪಕ್ಷಗಳೂ ಆಗಬೇಕಾದ ಕಾರ್ಯಗಳ ಕಡೆ ಗಮನ ಹರಿಸುತ್ತಿಲ್ಲ. ಹಲವು ಕಡೆ ಡೆಂಗೆ ಜ್ವರ ತಲೆದೋರಿದೆ; ಹಲವು ಕಡೆ ಕಲುಷಿತ ನೀರು ಕುಡಿದು ಜನ ಸತ್ತಿದ್ದಾರೆ; ದಿನಸಿ ಹಾಗೂ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇವೆಲ್ಲವನ್ನೂ ನೂತನ ಸರ್ಕಾರ, ಶಾಸಕರು, ವಿಪಕ್ಷಗಳು ಗಮನಿಸಬೇಕಿದ್ದು, ಅಧಿವೇಶನಗಳನ್ನು ಅರ್ಥಪೂರ್ಣ ಚರ್ಚೆಯಿಂದ ನಡೆಸಬೇಕಿವೆ.