Site icon Vistara News

ವಿಸ್ತಾರ ಸಂಪಾದಕೀಯ : ಅಧಿಕಾರಿಗಳು ಮಾದರಿಯಾಗಿರಲಿ, ಹುದ್ದೆಯ ಘನತೆ ಕಾಪಾಡಲಿ

Sindhuri Vs Roopa

ರಾಜ್ಯದ ಹಿರಿಯ ಮಹಿಳಾ ಅಧಿಕಾರಿಗಳಿಬ್ಬರ (senior officer) ಗುದ್ದಾಟ ಇದೀಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಐಎಎಸ್‌ ಅಧಿಕಾರಿಯೊಬ್ಬರ ವೈಯಕ್ತಿಕವೆನಿಸಬಹುದಾದ ವಿಷಯವನ್ನು ಇನ್ನೊಬ್ಬ ಐಪಿಎಸ್‌ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದರ ಮೂಲಕ ಆರಂಭವಾದ ಈ ವಿಚಾರ, ಐಎಎಸ್‌ ಅಧಿಕಾರಿಯ ಹಿಂದಿನ ಹಲವು ಪ್ರಕರಣಗಳಿಗೆ ತಳುಕು ಹಾಕಿಕೊಂಡು ವಿಭಿನ್ನ ಆಯಾಮ ಪಡೆದಿದೆ. ಇದೀಗ ಈ ಪ್ರಕರಣ, ಅಧಿಕಾರಿಗಳ ಮೇಲಿನ ನಿಯಂತ್ರಣವನ್ನು ಹೊಂದಿರುವ ಮುಖ್ಯ ಕಾರ್ಯದರ್ಶಿಯವರೆಗೆ ತಲುಪಿದ್ದು, ಕರ್ತವ್ಯಚ್ಯುತಿ ತೋರದಂತೆ ಹಾಗೂ ಸಾರ್ವಜನಿಕ ನಡವಳಿಕೆಯ ಘನತೆ ಕಾಪಾಡಿಕೊಳ್ಳುವಂತೆ ಸಚಿವರುಗಳಿಂದಲೂ ಪಾಠ ಹೇಳಿಸಿಕೊಳ್ಳುವವರೆಗೆ ಹೋಗಿದೆ. ಇಬ್ಬರೂ ಹಿರಿಯ ಅಧಿಕಾರಿಗಳು, ತಮ್ಮ ಕರ್ತವ್ಯ, ಹೊಣೆಗಾರಿಕೆ, ಸ್ಥಾನಮಾನಗಳ ಸಂಪೂರ್ಣ ಅರಿವು ಹೊಂದಿರುವವರು. ಇಂಥವವರು ಹೀಗೆ ಜನತೆಯ ಮುಂದೆ ಕ್ಷುಲ್ಲಕವೆನಿಸುವಂತೆ ನಡೆದುಕೊಂಡಿರುವುದು ಸರಿಯಲ್ಲ.

ಇಲ್ಲಿ ಬಂದಿರುವ ಆರೋಪಗಳು, ಅವು ನಿಜವೋ ಅಲ್ಲವೋ, ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಾದರೂ ಇದೆಯೇ ಇಲ್ಲವೇ, ಎಂಬುದೆಲ್ಲ ಅದಕ್ಕೇ ಸೂಕ್ತವಾದ ಸಾಂವಿಧಾನಿಕ ಸಂಸ್ಥೆಯೊಳಗಡೆ ವಿಚಾರಣೆಯಾಗಬೇಕಾದುದು. ಒಂದೇ ಇಲಾಖೆಯ ಹಲವು ಅಧಿಕಾರಿಗಳ ನಡುವೆ ಸೀನಿಯಾರಿಟಿ, ಬಡ್ತಿ ಮತ್ತಿತರ ವಿಚಾರಗಳಲ್ಲಿ ತಗಾದೆಗಳಿರುವುದೂ, ಅಂಥವರು ಕೋರ್ಟ್‌ ಮೆಟ್ಟಿಲು ಹತ್ತುವುದೂ ಸಾಮಾನ್ಯ. ಆದರೆ ಇದು ಸಾರ್ವಜನಿಕರಿಗೆ ತೊಂದರೆಯಾಗುವಂತೆಯೋ, ಒಟ್ಟು ಕಾರ್ಯಾಂಗದ ಘನತೆಯನ್ನು ಹಾಳುಗೆಡವುವಂತೆಯೂ ಇದ್ದರೆ ಅಂಥದ್ದು ಆಕ್ಷೇಪಾರ್ಹ. ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳು ಮಾದರಿಯಾಗಿರಬೇಕು, ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಡೀ ಜಿಲ್ಲೆಗೇ ಮುಖ್ಯಸ್ಥರು, ಹಿರಿಯ ಅಧಿಕಾರಿಗಳಂತೂ ಒಂದಿಡೀ ಇಲಾಖೆಗೇ ಮುಖ್ಯಸ್ಥರು. ಇವರೇ ಜನಸಾಮಾನ್ಯರ ಎದುರು ನಗೆಪಾಟಲಿಗೀಡಾಗಬಾರದು. ಇದು ಮೇಲ್ನೋಟಕ್ಕೆ ಅಧಿಕಾರಿಗಳ ವೈಯಕ್ತಿಕ ಜಗಳ ಅನಿಸಿದರೂ, ಇದರಿಂದ ಆಡಳಿತ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದನ್ನು ಮರೆಯಬಾರದು.

ಹಾನರಬಲ್ ಈಸ್ಟ್ ಇಂಡಿಯಾ ಕಂಪನೀಸ್ ಸಿವಿಲ್ ಸರ್ವೀಸ್‌ನ (ಎಚ್‍ಇಐಸಿಸಿಎಸ್) ಬಳುವಳಿಯೇ ಆಗಿರುವ ಇಂದಿನ ಐಎಎಸ್ ಎಂಬ ಉನ್ನತ ಸರಕಾರಿ ಹುದ್ದೆ ಸ್ವಾತಂತ್ರ್ಯಪೂರ್ವದಿಂದಲೂ ಪ್ರತಿಭಾವಂತರನ್ನು ಆಕರ್ಷಿಸುತ್ತಿದೆ. ಈಗಲೂ ಅಂಥ ಖದರನ್ನು ಉಳಿಸಿಕೊಂಡಿದೆ. ಜೀವನದಲ್ಲಿ ಒಮ್ಮೆ ಯುಪಿಎಸ್ಸಿ ನಡೆಸುವ ಪರೀಕ್ಷೆ ಬರೆದು ಉತ್ತೀರ್ಣರಾದರೆ, ಮುಂದೆ ಮೂರು ದಶಕ ಯಾವುದೇ ಪರೀಕ್ಷೆ ಬರೆಯದೇ ಸರಕಾರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬಹುದು; ಚುನಾಯಿತ ಸರಕಾರಗಳು, ಆಳುವ ಮಂದಿ ಐದು ವರುಷಕ್ಕೊಮ್ಮೆ ಬದಲಾದರೂ- ತಾವು ಕಾರ್ಯಾಂಗದ ಆಯಕಟ್ಟಿನಲ್ಲಿ ನಿವೃತ್ತಿವರೆಗೆ ಇರಬಹುದು ಎಂಬ ಸಂಗತಿಗಳು ಇದರ ಸೆಳೆತಕ್ಕೆ ಕಾರಣ. ಆದರೆ ಈ ಅನುಕೂಲ, ಐಷಾರಾಮಿಗಳು ಕೆಲವು ಅಧಿಕಾರಿಗಳನ್ನು ಜನರಿಂದ ದೂರ ಸರಿದು ತಮ್ಮದೇ ದಂತದ ಕೋಟೆಗಳಲ್ಲಿ ಇರುವಂತೆಯೂ, ಜನರಿಗೆ ಸ್ಪಂದಿಸದೆ ತಮ್ಮ ಕ್ಷುದ್ರ ತಿಕ್ಕಾಟಗಳನ್ನು ನಡೆಸುವುದಕ್ಕೆ ಹಾಕಿಕೊಟ್ಟ ರಹದಾರಿಯಂತೆಯೂ ಕಾಣಿಸುತ್ತವೆ. ಈ ಪ್ರಕರಣದಲ್ಲಿ ಇಂಥದೊಂದು ಆಯಾಮವೂ ಸೇರಿಕೊಂಡಂತಿದೆ. ಇದನ್ನು ಇವರಿಗಿಂತ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಿಸಿ ತಕ್ಕ ಬುದ್ಧಿ ಹೇಳಬೇಕಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಬಾಹ್ಯಾಕಾಶ ಸೇರಿದ ಮಕ್ಕಳ ಉಪಗ್ರಹಗಳು, ಭಾರತದ ಸಾಧನೆಗೆ ಮತ್ತೊಂದು ಗರಿ

ಭಾರತೀಯ ನಾಗರಿಕ ಸೇವೆ(ಐಎಎಸ್/ಐಪಿಎಸ್) ಅಧಿಕಾರಿಗಳು ಎಂದರೆ ಕಾರ್ಯಾಂಗದ ಪ್ರಮುಖ ಭಾಗ. ಶಾಸಕಾಂಗ ರೂಪಿಸುವ ಎಲ್ಲ ಯೋಜನೆ, ಕಾನೂನು-ಕಟ್ಟಳೆಗಳನ್ನು ಜಾರಿಗೆ ತರುವ ದೊಡ್ಡ ಹೊಣೆಗಾರಿಕೆಯನ್ನು ಕಾರ್ಯಾಂಗದ ಮಂದಿ ಹೊಂದಿದ್ದಾರೆ. ಇದರಿಂದ ಇವರಿಗೆ ಸುಗಮ ಆಡಳಿತ ನಡೆಸಲು, ಜನರ ಸಮಸ್ಯೆಗೆ ಸ್ಪಂದಿಸಲು, ಅವರ ಸಮಸ್ಯೆ ಬಗೆಹರಿಸಲು ದಿನದ 24 ಗಂಟೆಯೂ ಸಾಲದು. ಹೀಗಿರುವಾಗ ಇಂಥ ತುಂಟಾಟ ನಡೆಸಲು ಹಿರಿಯ ಅಧಿಕಾರಿಗಳಿಗೆ ಸಮಯ ಸಿಗುವುದೇ ಅಚ್ಚರಿ! ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಅಧಿಕಾರಿಗಳಿಗೆ ಶಿಸ್ತಿನ ಪಾಠ ಕಲಿಸಬೇಕು. ಯಾಕೆಂದರೆ ಐಎಎಸ್‌ ಅಧಿಕಾರಿವರ್ಗ ಅಪರಿಮಿತ ಅಧಿಕಾರ ಹೊಂದಿದೆಯಾದರೂ ಸಂಪೂರ್ಣ ಸ್ವಾಯತ್ತವೇನಲ್ಲ. ಹಾಗೆಯೇ ಅಧಿಕಾರಿಗಳು ಕರ್ತವ್ಯಭ್ರಷ್ಟತೆ ತೋರಿದರೆ, ತಮ್ಮ ಶಿಸ್ತಿನಿಂದ ವಿಚಲಿತರಾದರೆ, ಜನಪ್ರತಿನಿಧಿಗಳು ಅವರ ಮೇಲೆ ಸವಾರಿ ಮಾಡಲೂ ಸಾಧ್ಯವಾಗುತ್ತದೆ. ಅಂಥ ಬೆಳವಣಿಗೆಯೂ ಆಗಕೂಡದು.

Exit mobile version