Site icon Vistara News

ವಿಸ್ತಾರ ಸಂಪಾದಕೀಯ: ಆಸ್ಕರ್‌ ಗೆಲುವು ಆರೋಗ್ಯಕರ ಸ್ಪರ್ಧೆಗೆ ನಾಂದಿಯಾಗಲಿ

Let the Oscar win be the beginning of healthy competition

Oscars 2023

ಚಲನಚಿತ್ರಗಳಿಗೆ ನೀಡಲಾಗುವ ಪ್ರತಿಷ್ಠಿತ ಜಾಗತಿಕ ಅಕಾಡೆಮಿ (ಆಸ್ಕರ್)‌ ಪ್ರಶಸ್ತಿ ಭಾರತದ ಎರಡು ಚಿತ್ರಗಳಿಗೆ ದೊರೆತಿದೆ. ತೆಲುಗು ಚಲನಚಿತ್ರ ʼಆರ್‌ಆರ್‌ಆರ್‌ʼನ ʼನಾಟು ನಾಟುʼ ಹಾಡಿಗೆ ʼಬೆಸ್ಟ್‌ ಒರಿಜಿನಲ್‌ ಸಾಂಗ್‌ʼ ಪ್ರಶಸ್ತಿ ಹಾಗೂ ʼದಿ ಎಲಿಫೆಂಟ್‌ ವ್ಹಿಸ್ಪರರ್‌ʼ ಡಾಕ್ಯುಮೆಂಟರಿಗೆ ʼಅತ್ಯುತ್ತಮ ಕಿರು ಸಾಕ್ಷ್ಯಚಿತ್ರʼ ಪುರಸ್ಕಾರ ದೊರೆತಿದೆ. ಇವೆರಡೂ ಭಾರತದ ಪಾಲಿಗೆ ಮಹತ್ವದ ಸಾಧನೆಗಳು ಎಂಬುದನ್ನು ಮತ್ತೆ ಹೇಳಬೇಕಾದ್ದಿಲ್ಲ. ಇದರಿಂದ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಯುಗವೇ ಆರಂಭವಾಗಬಹುದು ಎಂದು ಊಹಿಸಿದರೆ ತಪ್ಪೇನಿಲ್ಲ.

ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರವೆನಿಸಿದ ಆಸ್ಕರ್‌, ಅದು ಜನಿಸಿ 95 ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ದೊರೆತಿದೆ. ಇದುವರೆಗೂ ಭಾರತದ 5 ಸಾಧಕರಿಗೆ ವೈಯಕ್ತಿಕ ಪ್ರಶಸ್ತಿ ಮಾತ್ರ ಲಭಿಸಿದೆ. 1992ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸತ್ಯಜಿತ್ ರೇ ಪಡೆದುಕೊಂಡದ್ದು ಹೊರತುಪಡಿಸಿದರೆ ಇತರ ಯಾವುದೂ ಭಾರತೀಯರ ಸಿನಿಮಾಗಳಿಗಲ್ಲ. ಆದರೆ ಭಾರತದ ಹಿನ್ನೆಲೆ ಹೊಂದಿದ್ದ ಚಿತ್ರಗಳಾಗಿದ್ದವು. ʼಗಾಂಧಿʼ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡಿದ ಭಾನು ಅಥೈಯ್ಯಾ ಅವರಿಗೆ 1982ರಲ್ಲಿ, ʼಸ್ಲಮ್‌ಡಾಗ್‌ ಮಿಲಿಯನೇರ್ʼ ಚಿತ್ರದ ಮೂಲ ಗೀತೆಗಾಗಿ ಎ.ಆರ್ ರೆಹಮಾನ್ ಮತ್ತು ಗುಲ್ಜಾರ್‌ಗೆ 2008ರಲ್ಲಿ, ಅದರದೇ ಅತ್ಯುತ್ತಮ ಧ್ವನಿ ಮಿಶ್ರಣಕ್ಕೆ ರಸೂಲ್ ಪೂಕುಟ್ಟಿ ಆಸ್ಕರ್ ಪಡೆದಿದ್ದಾರೆ. ಇವೇನೂ ಸಣ್ಣ ಸಾಧನೆಗಳಲ್ಲ. ಈ ಹಿಂದೆ ಮೂರು ಚಿತ್ರಗಳು ʼಅತ್ಯುತ್ತಮ ವಿದೇಶಿ ಚಿತ್ರʼ ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದರೂ (ಮದರ್‌ ಇಂಡಿಯಾ, ಸಲಾಂ ಬಾಂಬೆ, ಲಗಾನ್‌) ಪುರಸ್ಕಾರ ಪಡೆದಿರಲಿಲ್ಲ. ಮುಂದಿನ ವರ್ಷ ಅದನ್ನೂ ಪಡೆಯಲಿ ಎಂದು ಆಶಿಸೋಣ.

ಇಂಥ ಬೆಳವಣಿಗೆಗಳು ಮನರಂಜನಾ ಕ್ಷೇತ್ರದಲ್ಲಿ ಆದಾಗ ಮಹತ್ವದ ಸಂಚಲನವೇ ಉಂಟಾಗುತ್ತದೆ. ಇದೇ ಹೊತ್ತಿನಲ್ಲಿ ಆನುಷಂಗಿಕವಾಗಿ ಇನ್ನೊಂದು ಬೆಳವಣಿಗೆಯನ್ನು ನೋಡಬಹುದು. ದಕ್ಷಿಣ ಭಾರತದಲ್ಲಿ ಇದೇ ಎಸ್‌.ಎಸ್‌.ರಾಜಮೌಳಿ ಅವರ ನಿರ್ದೇಶನದ ʼಬಾಹುಬಲಿʼ ಚಲನಚಿತ್ರಗಳು ಪ್ಯಾನ್‌ ಇಂಡಿಯಾ ಎನಿಸಿಕೊಂಡು ಭರ್ಜರಿಯಾಗಿ ಹಿಟ್‌ ಆದ ಬಳಿಕ, ದಕ್ಷಿಣ ಭಾರತದಲ್ಲಿ ಪ್ಯಾನ್‌ ಇಂಡಿಯಾ ಮೂವಿಗಳ ಹೊಸ ಯುಗವೇ ಆರಂಭವಾಯಿತು. ಇದು ದಕ್ಷಿಣ ಭಾರತದ ಚಿತ್ರಗಳು ದೇಶಾದ್ಯಂತ ಮಾತ್ರವಲ್ಲ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುವ, ಜನತೆ ಅದಕ್ಕಾಗಿ ಕಾದು ಕುಳಿತು ನೋಡುವ ಹೊಸ ರೂಢಿಯನ್ನೇ ಹುಟ್ಟುಹಾಕಿತು. ಇಂದು ದೊಡ್ಡದೊಂದು ಪ್ಯಾನ್‌ ಇಂಡಿಯಾ ಚಿತ್ರ ಬರುತ್ತದೆ ಎಂದರೆ ಅದು ಕನಿಷ್ಠ 500- 600 ಕೋಟಿಗಳ ಬಜೆಟ್ಟನ್ನಾದರೂ ಹೊಂದಿರುತ್ತದೆ. ಇದು ನೂರಾರು ಕಲಾವಿದರಿಗೆ, ತಂತ್ರಜ್ಞರಿಗೆ, ಸಾವಿರಾರು ಜನರಿಗೆ ನಾನಾ ಬಗೆಯ ಉದ್ಯೋಗ ನೀಡಿ ಎಷ್ಟೋ ಕುಟುಂಬಗಳಿಗೆ ಆಶ್ರಯವಾಗುತ್ತದೆ. ಒಂದು ಉದ್ಯಮ ಬೆಳೆಯುವುದು ಹೀಗೆ.

ಆಸ್ಕರ್‌ ಪ್ರಶಸ್ತಿಯ ಘೋಷಣೆ ನಮ್ಮಲ್ಲೂ ಇಂಥದೇ ಸಂಚಲನೆ ಉಂಟುಮಾಡಬಹುದು. ಆಸ್ಕರ್‌ ಪಡೆಯುವ ಗುಣಮಟ್ಟದ ಚಿತ್ರಗಳನ್ನು ತಯಾರಿಸುವ ಛಲ ನಮ್ಮ ಚಿತ್ರ ನಿರ್ಮಾಪಕರಲ್ಲೂ ನಿರ್ದೇಶಕರಲ್ಲೂ ಉಂಟಾಗಬಹುದು. ಹಿಂದೊಂದು ಕಾಲವಿತ್ತು. ಸ್ವರ್ಣಕಮಲ ಪ್ರಶಸ್ತಿಗಳು ಭಾರತದಲ್ಲಿ ಶ್ರೇಷ್ಠ ಚಿತ್ರಗಳಿಗೆ ಮಾನದಂಡವೆನಿಸಿದ್ದವು. ಈಗಲೂ ಸ್ವರ್ಣಕಮಲಕ್ಕೆ ಅದರದೇ ಘನತೆ ಇದೆ; ಆದರೆ ಕಲಾತ್ಮಕ- ವಾಣಿಜ್ಯ ಚಿತ್ರ ಎಂಬ ಭೇದ ಅಳಿದಿದೆ. ಜನತೆ ಅತ್ಯುತ್ತಮ ಚಿತ್ರಗಳ ಮೌಲ್ಯಗ್ರಹಣ ಮಾಡುವ ರೀತಿಯನ್ನು ಕಲಿತಿದ್ದಾರೆ. ಇಲ್ಲವಾದರೆ ಕಡಿಮೆ ಬಜೆಟ್‌ನಲ್ಲಿ ತಯಾರಾದ ʼಕಾಂತಾರʼದಂಥ ಚಿತ್ರ ಇಡೀ ಜಗತ್ತೇ ಮೆಚ್ಚುವಂತೆ ಹಿಟ್‌ ಆಗುತ್ತಿರಲಿಲ್ಲ. ʼಕಾಂತಾರʼ ʼಆರ್‌ಆರ್‌ಆರ್‌ʼ ಚಿತ್ರಗಳ ಯಶಸ್ಸು ನಮಗೆ ಹೇಳುವುದೇನೆಂದರೆ, ಸ್ಥಳೀಯ ಕತೆಯನ್ನು ಹೊಂದಿರುವ ಚಿತ್ರಗಳು ಜಾಗತಿಕವಾಗಿಯೂ ಶ್ರೇಷ್ಠ ಎನಿಸಿಕೊಳ್ಳಬಲ್ಲವು ಎಂಬ ಸಂಗತಿ.

ಇದನ್ನೂ ಓದಿ: Oscars 2023: ಆಸ್ಕರ್‌ ಗೆದ್ದ ಸಿನಿಮಾಗಳನ್ನು ಮನೆಯಲ್ಲೇ ನೋಡಿ! ಇವೆಲ್ಲ ಯಾವುದರಲ್ಲಿ ಲಭ್ಯ? ಇಲ್ಲಿದೆ ಮಾಹಿತಿ

ಹಾಗೆಯೇ ಮುಖ್ಯವೆನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ಹೆಚ್ಚಿನ ಹಣ ಹಾಕದೆ, ಕಲಾತ್ಮಕತೆ ಹಾಗೂ ಪ್ರತಿಭೆಯ ಬಲದಿಂದಲೇ ಗೆದ್ದು ʼದಿ ಎಲಿಫೆಂಟ್‌ ವ್ಹಿಸ್ಪರರ್ಸ್ʼ ಗೆಲುವು ಕೂಡ ನಮ್ಮ ಕಣ್ತೆರಸಬೇಕು. ಗುಣಮಟ್ಟ ಅಥವಾ ಶ್ರೇಷ್ಠತೆ ಎಂಬುದು ಕೇವಲ ಬಜೆಟ್‌ನಲ್ಲಿ ಇಲ್ಲ ಎಂಬುದನ್ನು ಕೂಡ ಈ ಬೆಳವಣಿಗೆ ನಮಗೆ ಅರ್ಥ ಮಾಡಿಸಬೇಕು. ಇಂಥ ಕಿರುಚಿತ್ರಗಳನ್ನು, ಡಾಕ್ಯುಮೆಂಟರಿಗಳನ್ನು ತಯಾರಿಸಿದ, ತಯಾರಿಸಬಲ್ಲ ಪ್ರತಿಭಾವಂತರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಈ ಗೆಲವು ಅವರಿಗೂ ಸ್ಫೂರ್ತಿಯಾಗಲಿ. ಒಂದು ಕಾಲದಲ್ಲಿ ಕನ್ನಡದ ಚಿತ್ರಗಳು ಜಾಗತಿಕವಾಗಿ ಹೊಸ ಅಲೆಯ ಚಿತ್ರಗಳೊಂದಿಗೆ ಸ್ಪರ್ಧಿಸಿದ್ದವು. ಇಂದು ಆಸ್ಕರ್‌ ಪುರಸ್ಕಾರ ಅಂಥ ಇನ್ನೊಂದು ಆರೋಗ್ಯಕರ ಸ್ಪರ್ಧೆಗೆ ಕಾರಣವಾಗಲಿ. ಜಾಗತಿಕ ರಂಗದಲ್ಲಿ ಕನ್ನಡ ಚಿತ್ರಗಳೂ ಸೇರಿದಂತೆ ಭಾರತೀಯ ಚಿತ್ರಗಳು ಮಿಂಚುವಂತಾಗಲಿ.

Exit mobile version