ಕೋಲ್ಕೊತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಐಪಿಎಲ್ ಪಂದ್ಯವು (IPL 2024) ಫಲಿತಾಂಶಕ್ಕಿಂತ ಹೆಚ್ಚಾಗಿ ಕಳಪೆ ಅಂಪೈರಿಂಗ್ ಕಾರಣಕ್ಕೆ ಸುದ್ದಿಯಾಗಿದೆ. ಆರ್ಸಿಬಿ ಈ ಪಂದ್ಯದಲ್ಲಿ ವೀರೋಚಿತ 1 ರನ್ ಸೋಲು ಕಂಡಿರುವುದು ಶ್ರೀಮಂತ ಕ್ರಿಕೆಟ್ ಲೀಗ್ನ ರೋಚಕತೆಗೆ ಸಾಕ್ಷಿ ಎಂದು ಹೇಳಲಾಗುತ್ತಿದ್ದರೂ ಅಂಪೈರ್ಗಳು ಮಾಡಿರುವ ಎಡವಟ್ಟು ಈ ಫಲಿತಾಂಶವನ್ನೇ ಉಲ್ಟಾ ಮಾಡಿದೆ ಎಂಬ ಅಸಮಾಧಾನ ಹುಟ್ಟು ಹಾಕಿದೆ. ಕೆಕೆಆರ್ ಬೌಲರ್ ನಿತೀಶ್ ರಾಣಾ ಎಸೆದ ಬೀಮರ್ ಎಸೆತ (ಬ್ಯಾಟರ್ನ ಸೊಂಟ ಮಟ್ಟಕ್ಕಿಂತ ಮೇಲೆ ಎಸೆಯುವ ಹೈ ಫುಲ್ಟಾಸ್ ) ವಿರಾಟ್ ಕೊಹ್ಲಿಯ ಬ್ಯಾಟ್ಗೆ ಬಡಿದು ರಿಟರ್ನ್ ಕ್ಯಾಚ್ ಆಯಿತು. ರಾಣಾ ಚೆಂಡನ್ನು ಹಿಡಿದ ತಕ್ಷಣ ಅಂಪೈರ್ ಬೆರಳೆತ್ತಿ ಔಟ್ ಎಂದರು. ವಿರಾಟ್ ಕೊಹ್ಲಿ ಡಿಆರ್ಎಸ್ ತೆಗೆದುಕೊಂಡರೆ, ಮೂರನೇ ಅಂಪೈರ್ ಕೂಡ ಲೆಕ್ಕಾಚಾರ ಹಾಕಿ ಫೀಲ್ಡ್ ನಿರ್ಧಾರವನ್ನು ಎತ್ತಿ ಹಿಡಿದರು. ಕೊಹ್ಲಿ ಕ್ರೀಸ್ಗಿಂತ ಮುಂದಿದ್ದರು. ಹೀಗಾಗಿ ನಿಯಮ ಅನ್ವಯಿಸುವುದಿಲ್ಲ ಎಂಬುದೇ ಮೂರನೇ ಅಂಪೈರ್ ಸಮರ್ಥನೆ. ಈ ವಿಚಾರಕ್ಕೆ ಕೊಹ್ಲಿ ಮತ್ತು ಅಂಪೈರ್ಗಳ ನಡುವೆ ವಾಗ್ವಾದವೇ ಆಯಿತು. ಆಟದ ಅಧಿಕಾರಿಗಳ ಜತೆ ಮಾತು ಬೆಳೆಸಿದ ತಪ್ಪಿಗಾಗಿ ಬಿಸಿಸಿಐ ಕೊಹ್ಲಿಗೆ ಸಂಭಾವನೆಯ ಶೇಕಡಾ 50ರಷ್ಟು ಮೊತ್ತವನ್ನು ದಂಡ ವಿಧಿಸಲಾಗಿದೆ.
ಇದೇ ಪಂದ್ಯದ 17ನೇ ಓವರ್ನಲ್ಲಿ ಆರ್ಸಿಬಿಯ ಇಂಪ್ಯಾಕ್ಟ್ ಪ್ಲೇಯರ್ ಸುಯಾಶ್ ಪ್ರಭುದೇಸಾಯಿ, ಕೆಕೆಆರ್ ಬೌಲರ್ ವರುಣ್ ಚಕ್ರವರ್ತಿಯ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದರು. ಅದರು ಬೌಂಡರಿ ಗೆರೆಯ ಪಕ್ಕದಲ್ಲೇ ಬಿದ್ದಿತ್ತು. ಇಂಥ ಗೊಂದಲಕಾರಿ ಸಂದರ್ಭದಲ್ಲಿ ಅಂಪೈರ್ಗಳು ಟಿವಿ ಅಂಪೈರ್ಗಳ ನೆರವು ಪಡೆಬೇಕು. ಇಲ್ಲಿ ಹಾಗೆ ಮಾಡಲಿಲ್ಲ. ತಮಗೆ ಅನಿಸಿದ ಹಾಗೆ ಫೋರ್ ಎಂದು ಕೈಬೀಸಿದರು. ಪಂದ್ಯದಲ್ಲಿ ಆರ್ಸಿಬಿ ಸೋತಿದ್ದು ಒಂದು ರನ್ನಿಂದ. ಅಂಪೈರ್ ಫೋರ್ ಬದಲು ಸಿಕ್ಸರ್ ಘೋಷಿಸಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು. ಇವೆರಡು ಹತ್ತಿರದ ಉದಾಹರಣೆಗಳಷ್ಟೇ. ಐಪಿಎಲ್ 17ನೇ ಆವೃತ್ತಿಯಲ್ಲಿ ಇಂಥ ಹಲವಾರು ಯಡವಟ್ಟುಗಳುಗಳು ನಡೆಯುತ್ತಲೇ ಇವೆ.
ಅದಕ್ಕಿಂತ ಹಿಂದೆ ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಡಗ್ಔಟ್ನಲ್ಲಿದ್ದ ಆಟಗಾರ ಟಿಮ್ ಡೇವಿಡ್ ಹಾಗೂ ಕೋಚ್ ಕೀರನ್ ಪೊಲಾರ್ಡ್ ಸೂಚನೆ ಮೇರೆಗೆ ಮುಂಬೈ ಬ್ಯಾಟರ್ ಸೂರ್ಯಕುಮಾರ್ ವೈಡ್ ಪರಿಶೀಲಿಸಲು ಡಿಆರ್ಎಸ್ ತೆಗೆದುಕೊಂಡಿದ್ದರು. ಇದು ಅಕ್ರಮ. ಪಂಜಾಬ್ ತಂಡದ ನಾಯಕ ಸ್ಯಾಮ್ ಕರ್ರನ್ ತಕ್ಷಣವೇ ಅಂಪೈರ್ ಗಮನಕ್ಕೆ ತಂದಿದ್ದರು. ಅಂಪೈರ್ಗಳು ಸೂರ್ಯನ ಮನವಿ ತಿರಸ್ಕರಿಸಬಹುದಾಗಿತ್ತು. ಆದರೆ, ಹಾಗೆ ಮಾಡದೇ ಪರಿಶೀಲನೆ ನಡೆಸಿ ವೈಡ್ ಎಂದರು. ಸಿಎಸ್ಕೆ ಮಾಜಿ ನಾಯಕ ಧೋನಿ ಬ್ಯಾಟ್ ಮಾಡುವಾಗ ಬ್ಯಾಟ್ ಕೆಳಗಿನಿಂದ ಚೆಂಡು ಹೋದರೂ ವೈಡ್ ಎಂದು ಡಿಆರ್ಎಸ್ ಪರಿಶೀಲನೆಯ ಬಳಿಕವೂ ಹೇಳಿದ್ದು, ಬುಮ್ರಾ ವೈಡ್ ಹಾಕಿದಾಗಲೂ ವೈಡ್ ಕೊಡದೇ ಇರುವುದು. ಮುಂಬೈ ತಂಡದ ಡಿಆರ್ಎಸ್ ಆಯ್ಕೆ (ಒಟ್ಟು 2) ಮುಗಿದ ಬಳಿಕವೂ ಅಂಪೈರ್ಗಳೇ ಸ್ವತಃ ಪರಿಶೀಲನೆ ನೆಪದಲ್ಲಿ ವೈಡ್ ಸ್ಕೋರ್ ಕೊಟ್ಟಿರುವುದು. ಇವೆಲ್ಲವೂ ಅಂಪೈರಿಂಗ್ ಎಡವಟ್ಟುಗಳಿಗೆ ಉದಾಹರಣೆಗಳು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ
ಕ್ರಿಕೆಟ್ ಅಂಪೈರಿಂಗ್ಗಾಗಿ ಹಲವಾರು ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಸ್ಮಾರ್ಟ್ ರಿಪ್ಲೆ ಟಿವಿ ರಿಪ್ಲೈ ದೊಡ್ಡ ಕೊಡುಗೆ. ಉಳಿದಂತೆ ಹಾಟ್ಸ್ಪಾಟ್, ಲೈಟ್ ಮೀಟರ್, ಸ್ನಿಕ್-ಒ ಮೀಟರ್, ಐ ಸ್ಪೀಡ್ ಹಾಕ್-ಐ ನಿಖರತೆಗೆ ನೆರವು ಕೊಡುತ್ತವೆ ಅಂಪೈರ್ಗಳಿಗೆ, ಆಟಗಾರರಿಗೆ ಇದನ್ನು ಅಗತ್ಯ ಸಂದರ್ಭಗಳಲ್ಲಿ ಬಳಸುವ ಅನುಕೂಲವಿದೆ. ಇವೆಲ್ಲ ಇದ್ದ ಮೇಲೆಯೂ ಅಂಪೈರ್ಗಳು ತಪ್ಪು ಮಾಡುವುದು ಯಾಕೆ ಎಂಬುದೇ ಕ್ರಿಕೆಟ್ ಪಂಡಿತರ ಪ್ರಶ್ನೆ.
ದಶಕಗಳ ಹಿಂದೆ ಕ್ರಿಕೆಟ್ ಅಂಪೈರ್ಗಳಿಗೆ ಯಾವುದೇ ಆಧುನಿಕ ತಂತ್ರಜ್ಞಾನಗಳ ನೆರವು ಇರಲಿಲ್ಲ. ಆದರೆ, ಅವರ ಅಂಪೈರಿಂಗ್ ನಿರ್ಧಾರಗಳಲ್ಲಿ ಸ್ಪಷ್ಟತೆಯಿತ್ತು. ಹೀಗಾಗಿ ಪ್ರಸ್ತುತ ದಿನಗಳಲ್ಲಿ ಎಲ್ಲವೂ ಇದ್ದು ಅಂಪೈರ್ಗಳು ತಪ್ಪು ಮಾಡುತ್ತಿರುವುದಕ್ಕೆ ಅಂಪೈರ್ಗಳ ಸೋಂಬೇರಿತನ ಅಥವಾ ನಿರ್ಲಕ್ಷ್ಯ ಕಾರಣವಾಗಿರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ಹೊಸ ಹೊಸ ತಾಂತ್ರಿಕತೆಗಳು ಸ್ಪರ್ಧೆಯ ಮೌಲ್ಯ ಹೆಚ್ಚಿಸುತ್ತದೆ ಎಂದು ಅಂದುಕೊಳ್ಳುವ ವೇಳೆಯಲ್ಲಿ ತಪ್ಪುಗಳೇ ಹೆಚ್ಚಾಗುತ್ತಿರುವುದು ವಿಪರ್ಯಾಸ.
ಕ್ರಿಕೆಟ್ ನಿಯಮಗಳು ಕಾಲಕಾಲಕ್ಕೆ ಬದಲಾಗುತ್ತಿರುವುದು ಸಹಜ ಮತ್ತು ಅನಿವಾರ್ಯ. ಜತೆಗೆ ಕ್ರಿಕೆಟ್ ಬ್ಯಾಟ್ಸ್ಮನ್ಗಳ ಕ್ರೀಡೆಯಾಗುತ್ತಿರುವ ಕಾರಣಕ್ಕೆ ನಿಯಮಗಳ ನೆರವು ಬೇಕೇ ಬೇಕು. ಇದರ ಜತೆಗೆ ಅಂಪೈರ್ಗಳಿಗೂ ಹೊಸ ನಿಯಮಗಳ ಬಗ್ಗೆ ಕಾಲಕಾಲಕ್ಕೆ ತರಬೇತಿ ಸಿಗುತ್ತಿವೆ. ಅವರಿಗೆ ಕೊಡಲಾಗುವ ಸೌಕರ್ಯಗಳು ಸಾಕಷ್ಟಿವೆ. ಅಂಪೈರ್ಗಳ ವೇತನ ಗಣನೀಯವಾಗಿ ಹೆಚ್ಚಾಗಿದೆ. ಅವರ ತಲೆ ಮೇಲೆಯೇ ಕ್ಯಾಮೆರಾ ಅಳವಡಿಸುವುದರಿಂದ ಹಿಡಿದು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಒತ್ತಡ ಕಡಿಮೆ ಮಾಡಲಾಗಿದೆ. ಆದಾಗ್ಯೂ ತಪ್ಪು ನಡೆಯುತ್ತಿರುವುದು ಪ್ರಶ್ನಾರ್ಹ ವಿಷಯ
ಅಂಪೈರ್ಗಳ ತಪ್ಪುಗಳು ಕ್ರಿಕೆಟ್ ಫಲಿತಾಂಶವನ್ನು ಮಾತ್ರ ಬದಲಿಸುವುದಿಲ್ಲ. ಅಭಿಮಾನಿಗಳ ಮನಸ್ಸಿಗೂ ಘಾಸಿ ಮಾಡುತ್ತವೆ. ಅವರು ಕ್ರಿಕೆಟ್ ನ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನಕ್ಕೆ ಧಕ್ಕೆ ತರುತ್ತದೆ. ಐಪಿಎಲ್ನಂಥ ನಗದು ಶ್ರೀಮಂತ ಟೂರ್ನಿಯ ವಿಶ್ವಾಸರ್ಹತೆಯೂ ಕುಂದುತ್ತದೆ. ತಾಂತ್ರಿಕತೆಯ ನೆರವಿನೊಂದಿಗೆ ಐಪಿಎಲ್ನ ಅಂಪೈರಿಂಗ್ನಲ್ಲಿ ನಿಖರತೆ ಹೆಚ್ಚಬೇಕು. ‘ಜಂಟಲ್ಮ್ಯಾನ್ಸ್ ಗೇಮ್ನ ಮರ್ಯಾದೆ ಹೆಚ್ಚಬೇಕು.