Site icon Vistara News

ವಿಸ್ತಾರ ಸಂಪಾದಕೀಯ: ಸಮಾನ ನಾಗರಿಕ ಕಾಯಿದೆ ವ್ಯವಸ್ಥಿತವಾಗಿ ಜಾರಿಯಾಗಲಿ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವ ಕುರಿತ ಮಾತು ನಮ್ಮ ದೇಶದಲ್ಲಿ ಆಗಾಗ ಕೇಳಿಬರುತ್ತದೆ. ಬಿಜೆಪಿ ದೀನ್‌ದಯಾಳ ಉಪಾಧ್ಯಾಯರ ಕಾಲದಿಂದಲೇ ಯುಸಿಸಿ ಬಗ್ಗೆ ಒತ್ತಿ ಹೇಳುತ್ತ ಬಂದಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಈ ಬಗ್ಗೆ ಗಂಭೀರ ಹೆಜ್ಜೆಯಿಡುವ ಸೂಚನೆ ನೀಡಿದೆ. ಗೃಹ ಸಚಿವರು ಇದನ್ನು ಹೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ರಾಜ್ಯ ಸರ್ಕಾರಗಳು ಇದರ ಜಾರಿಗೆ ಉತ್ಸುಕವಾಗಿವೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿಯೂ ಜಾರಿ ಮಾಡುತ್ತೇವೆ ಎಂದಿದ್ದಾರೆ. ಗುಜರಾತ್‌, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳಲ್ಲಿ ಈ ಬಗ್ಗೆ ಸಮಿತಿ ರಚಿಸಿ, ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರ ಪ್ರಸ್ತುತ ಕಾನೂನು ಆಯೋಗದ ಪರಿಶೀಲನೆಯಲ್ಲಿಯೂ ಇದೆ.

ಗೋವಾದಲ್ಲಿ ಭಾಗಶಃ ಜಾರಿಯಲ್ಲಿರುವ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಸ್ವಾತಂತ್ರ್ಯಪೂರ್ವದಿಂದಲೂ ಪರ-ವಿರೋಧ ವಾದಗಳಿವೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಏಕರೂಪ ಕಾನೂನಿಗೆ ಬೆಂಬಲವಾಗಿವೆ. ಕಾಂಗ್ರೆಸ್‌ ಹಾಗೂ ಕೆಲವು ಮುಸ್ಲಿಮ್‌ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಜವಾಹರ್‌ಲಾಲ್‌ ನೆಹರೂ, ಡಾ.ಬಿ.ಆರ್‌.ಅಂಬೇಡ್ಕರ್‌ರಂಥ ದೊಡ್ಡ ನಾಯಕರು ಕೂಡ ಇದನ್ನು ಬೆಂಬಲಿಸಿದ್ದರು. ನಮ್ಮ ದೇಶದಲ್ಲಿ ಎಲ್ಲರಿಗೂ ಅನ್ವಯವಾಗುವ ಒಂದೇ ದಂಡಸಂಹಿತೆ ಇದೆ. ಆದರೆ ಭಾರತದಲ್ಲಿರುವ ಬಹುತೇಕ ಕೌಟುಂಬಿಕ ಕಾನೂನುಗಳು ಆಯಾ ಧರ್ಮಾಚರಣೆಗಳಿಂದ ಪ್ರೇರೇಪಿತವಾಗಿವೆ. ಹಿಂದೂ, ಸಿಖ್‌, ಜೈನ್‌, ಬೌದ್ಧರು ಹಿಂದೂ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಬಂದರೆ, ಮುಸ್ಲಿಂ ಮತ್ತು ಕ್ರೈಸ್ತರು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದಾರೆ. ಮುಸ್ಲಿಮರು ಅನುಸರಿಸುವ ಕಾನೂನುಗಳನ್ನು ಹೊರತಪಡಿಸಿದರೆ ಉಳಿದೆಲ್ಲ ಕಾನೂನುಗಳು ಭಾರತದ ಸಂಸತ್ತಿನಿಂದ ರೂಪಿಸಲ್ಪಟ್ಟಿವೆ. ಮುಸ್ಲಿಮ್‌ ಕಾನೂನುಗಳು ಷರಿಯಾ ಆಧರಿತವಾಗಿವೆ. ಹೀಗಾಗಿ ವಿವಾಹ, ಉತ್ತರಾಧಿಕಾರ, ಆಸ್ತಿ ಹಂಚಿಕೆ, ವಿಚ್ಛೇದನ, ಜೀವನಾಂಶ ಮುಂತಾದ ವಿಚಾರಗಳಲ್ಲಿ ಗಣನೀಯವಾದ ಭೇದಗಳಿವೆ. ಇದು ಒಂದೇ ದೇಶದ ಪ್ರಜೆಗಳಲ್ಲಿ ಭೇದವನ್ನು ಸೃಷ್ಟಿಸಿದೆ. ʼʼಸೆಕ್ಯುಲರ್‌ ಆಗಿರುವ ಒಂದು ದೇಶದಲ್ಲಿ ಕಾನೂನುಗಳು ಬೇರೆ ಬೇರೆಯಾಗಿರಲು ಹೇಗೆ ಸಾಧ್ಯ?ʼʼ ಎಂದು ಗೃಹ ಸಚಿವರು ಪ್ರಶ್ನಿಸಿರುವುದು ಇದನ್ನೇ.

ಯುಸಿಸಿ ಜಾರಿಗೆ ತರುವ ಬಗ್ಗೆ ಸಂವಿಧಾನ ಕೂಡ ಅವಕಾಶ ಕಲ್ಪಿಸಿದೆ. ʼʼಭಾರತದ ಎಲ್ಲ ಪ್ರದೇಶಗಳಲ್ಲಿ ತನ್ನೆಲ್ಲ ಜನರಿಗೆ ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಲು ಸರಕಾರ ಪ್ರಯತ್ನಿಸಬೇಕುʼʼ ಎಂದು ಸಂವಿಧಾನದ 44ನೇ ವಿಧಿ ಹೇಳಿದೆ. ಈ ವಿಧಿಯು ಸಮಾನ ನಾಗರಿಕ ಸಂಹಿತೆಯ ಅನುಷ್ಠಾನವನ್ನು ರಾಜ್ಯ ನಿರ್ದೇಶಿತ ತತ್ವಕ್ಕೆ ಸೇರಿಸಿದೆ. ಹೀಗಾಗಿ ಸಂಸತ್ತು ಒಮ್ಮತಕ್ಕೆ ಬಂದು ಯುಸಿಸಿ ಜಾರಿಗೊಳಿಸಬೇಕಾದ ಅಗತ್ಯವಿದೆ. ಸಮಾನ ನಾಗರಿಕ ಸಂಹಿತೆಯಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಈ ಕಾನೂನು ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತದೆ. ಅನೇಕ ವೈಯಕ್ತಿಕ ಕಾನೂನುಗಳು ಮಹಿಳೆಯರ ಹಕ್ಕುಗಳು, ವೈವಾಹಿಕ ನಿರ್ಬಂಧಗಳು, ಆಸ್ತಿ ಹಕ್ಕುಗಳಲ್ಲಿ ತಾರತಮ್ಯಪೂರಿತವಾಗಿವೆ. ಅಂತರ್‌ಧರ್ಮೀಯ ವಿವಾಹ ಮುಂತಾದ ಪ್ರಗತಿಪರ ವಿಚಾರಗಳನ್ನು ಇವು ಪ್ರೋತ್ಸಾಹಿಸುವುದಿಲ್ಲ. ಹಿಂದೂ ವಿವಾಹ ಕಾಯ್ದೆ ಹೊರತುಪಡಿಸಿ, ಉಳಿದ ವಿವಾಹ ಕಾಯ್ದೆಗಳಲ್ಲಿ ಗಂಡನಿಂದ ಹೆಂಡತಿಗೆ ಜೀವನಾಂಶ ಸಂಬಂಧ ಸ್ಪಷ್ಟತೆ ಇಲ್ಲ. ಯುಸಿಸಿಯ ಮೂಲಕ ಇದೆಲ್ಲದಕ್ಕೂ ಒಂದು ಸಮಾನ ಪಾತಳಿ ಕಲ್ಪಿತವಾಗಲಿದೆ. ದೇಶದ ಎಲ್ಲ ಪ್ರಜೆಗಳು ಒಂದೇ ಕಾನೂನಿನಡಿಯಲ್ಲಿ ಬರುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ನ್ಯಾಯಾಲಯಗಳಿಗೆ ಸಾಧ್ಯವಾಗುತ್ತದೆ.

ಇದೊಂದು ಮಹತ್ವದ ಮತ್ತು ಐತಿಹಾಸಿಕ ಕಾಯಿದೆಯಾಗಲಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ಜಾರಿಗೆ ಮೊದಲು ಸಾರ್ಜನಿಕರ ಅಭಿಪ್ರಾಯ ಸಂಗ್ರಹ, ತಜ್ಞರ ಸಂವಾದ, ಚರ್ಚೆಗೆ ಅವಕಾಶ ಕಲ್ಪಿಸಬೇಕು. ಸಮ್ಮತಿಯ ವಾತಾವರಣ ನಿರ್ಮಾಣದ ಮೂಲಕವೇ ಇದು ಜಾರಿಯಾಗಬೇಕು. ಯಾಕೆಂದರೆ ಇದರಲ್ಲಿ ಸೂಕ್ಷ್ಮ ಮತೀಯ ವಿಚಾರಗಳೂ ಅಡಕವಾಗಿವೆ. ಆತುರಾತುರವಾಗಿ ಜಾರಿ ಮಾಡಿ ಕೃಷಿ ಕಾಯಿದೆ, ರಾಷ್ಟ್ರೀಯ ಪೌರತ್ವ ಕಾಯಿದೆಯಂತೆ ಗೊಂದಲಕ್ಕೆ ಆಸ್ಪದವಾಗಬಾರದು. ಹಾಗೆಯೇ ಇದು ಚುನಾವಣೆ ಹತ್ತಿರ ಬಂದಾಗ ಬಿಜೆಪಿಗೆ ಹಿಂದುಗಳ ಮತ ಸೆಳೆಯಲು ಅಸ್ತ್ರವೂ ಆಗಬಾರದು; ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರನ್ನು ಭಯಪಡಿಸುವ ಅಸ್ತ್ರವೂ ಆಗಬಾರದು. ಎಲ್ಲರೂ ಒಟ್ಟು ಸೇರಿ ಸಮ್ಮತಿಯಿಂದ ವ್ಯವಸ್ಥಿತವಾಗಿ ಇದನ್ನು ಜಾರಿ ಮಾಡಬೇಕಿದೆ.

Exit mobile version