Site icon Vistara News

ವಿಸ್ತಾರ ಸಂಪಾದಕೀಯ: Lok Sabha Election: ಜನತಂತ್ರ ಹಬ್ಬಕ್ಕೆ ನಾವೆಲ್ಲರೂ ಸಿದ್ಧರಾಗೋಣ

LOK SABHA ELECTION 2024 Karnataka

ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ವೇಳಾಪಟ್ಟಿ ಇಂದು ಘೋಷಣೆಯಾಗಿದೆ. ಏಪ್ರಿಲ್‌ 19ರಿಂದ ಆರಂಭಿಸಿ ಜೂನ್‌ 1ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ (ಏಪ್ರಿಲ್‌ 26 ಮತ್ತು ಮೇ 7ರಂದು) ಮತದಾನ ನಡೆಯಲಿದೆ. ಇದೇ ವೇಳೆಗೆ ನಾಲ್ಕು ರಾಜ್ಯಗಳ- ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ- ವಿಧಾನಸಭೆ ಚುನಾವಣೆಗಳೂ ನೆರವೇರಲಿವೆ. ಕರ್ನಾಟಕದ ಸುರಪುರ ಸೇರಿದಂತೆ 13 ರಾಜ್ಯಗಳ 26 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಜೂನ್‌ 4ರಂದು ಇಡೀ ದೇಶದ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಈ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆಯನ್ನು ತಕ್ಷಣವೇ ಜಾರಿಗೆ ತರಲಾಗಿದೆ. ಇದರ ಜತೆಗೆ ರಾಜಕೀಯ ಪಕ್ಷಗಳಿಗೆ ಮಾರ್ಗಸೂಚಿಯನ್ನೂ ನೀಡಲಾಗಿದೆ.

ಈ ಸಲ 97 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 10.5 ಲಕ್ಷ ಮತಗಟ್ಟೆಗಳನ್ನು ರಚಿಸಲಾಗುತ್ತದೆ. 55 ಲಕ್ಷ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತದೆ. ಇದುವರೆಗೆ 100ಕ್ಕೂ ಅಧಿಕ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಚುನಾವಣಾ ಆಯೋಗದ್ದಾಗಿದೆ. ಈ ಬಾರಿ 18-19 ವರ್ಷದ 1.89 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 85 ವರ್ಷ ದಾಟಿದವರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ವಿಶೇಷ ಚೇತನರಿಗೂ ಕೂಡ ಮನೆಯಿಂದಲೇ ಮತದಾನ ಮಾಡಬಹುದಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಪಾರದರ್ಶಕವಾಗಿ, ಸುಸಜ್ಜಿತವಾಗಿ ಹಾಗೂ ನ್ಯಾಯಸಮ್ಮತವಾಗಿ ಮತದಾನ ನಡೆಸಲು ಚುನಾವಣೆ ಆಯೋಗವು ಬದ್ಧವಾಗಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಈಗಾಗಲೇ 543 ಲೋಕಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಲು ಪ್ರಾರಂಭಿಸಿವೆ. ಬಿಜೆಪಿ ಇದುವರೆಗೆ 267 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದರೆ, ಕಾಂಗ್ರೆಸ್ ಎರಡು ಪಟ್ಟಿಗಳಲ್ಲಿ 82 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಯಾವ ದೃಷ್ಟಿಯಿಂದ ನೋಡಿದರೂ ಇದು ಜಗತ್ತಿನ ಮಹಾ- ಮೆಗಾ ಚುನಾವಣೆ. ಇದು ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಜನತಂತ್ರ ಹಬ್ಬ. ಬೇರೆ ಯಾವ ದೇಶದಲ್ಲಿಯೂ ಈ ಪ್ರಮಾಣದ ಚುನಾವಣೆಯೆಂಬ ಬೃಹತ್‌ ಉತ್ಸವ ನಡೆಯಲು ಸಾಧ್ಯವೇ ಇಲ್ಲ. ಇದು ʼಪ್ರಜಾಪ್ರಭುತ್ವದ ಬೃಹನ್ನಾಟ್ಯʼ (Dance of Democracy) ಎಂದೇ ಹೆಸರಾಗಿದೆ. 1950ರಿಂದ ಇಲ್ಲಿಯವರೆಗೂ ಕೋಟ್ಯಂತರ ಜನ ಭಾಗವಹಿಸಿದ ನಮ್ಮ ಚುನಾವಣೆಗಳ ಇತಿಹಾಸ ತೆಗೆದು ನೋಡಿದರೆ, ಇತರ ದೇಶಗಳಿಗೆ ಮಾದರಿಯಾಗಿ ನಾವು ಅವುಗಳನ್ನು ನಡೆಸಿದ್ದು ಕಂಡುಬರುತ್ತದೆ. ವರುಷಗಳು ಕಳೆಯುತ್ತ ಹೋದಂತೆ ನಮ್ಮ ಚುನಾವಣೆಗಳು ಹೆಚ್ಚು ಹೆಚ್ಚು ಆಧುನಿಕವಾಗುತ್ತ, ಪಾರದರ್ಶಕವಾಗುತ್ತ ನಡೆದಿವೆ. ಬ್ಯಾಲೆಟ್‌ ಪೇಪರ್‌ಗಳ ಜಾಗದಲ್ಲಿ ಇವಿಎಂಗಳು ಬಂದಿವೆ. ವಾರಗಟ್ಟಲೆ ನಡೆಯುತ್ತಿದೆ ಮತ ಎಣಿಕೆ ಒಂದೇ ದಿನಕ್ಕಿಳಿದಿದೆ. ಮತಗಟ್ಟೆ ಹಿಂಸಾಚಾರಗಳು ಶೂನ್ಯ ಪ್ರಮಾಣಕ್ಕಿಳಿದಿವೆ. ಮತದಾನದಲ್ಲಿ ಅಕ್ರಮ ಎಸಗಲು ಸಾಧ್ಯವೇ ಇಲ್ಲವೆಂಬಷ್ಟು ಪಾರದರ್ಶಕವಾದ ವ್ಯವಸ್ಥೆಯನ್ನು ಆಡಳಿತಾತ್ಮಕವಾಗಿ, ತಾಂತ್ರಿಕವಾಗಿ ರೂಪಿಸಲಾಗಿದೆ. ವಿದೇಶಗಳ ಅನೇಕ ತಜ್ಞರು ಇಲ್ಲಿನ ಚುನಾವಣೆ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಇದರ ಮಾದರಿಯನ್ನು ಕೊಂಡಾಡಿದ್ದಾರೆ.

ಚುನಾವಣೆ ಆಯೋಗ ಈ ಬಾರಿ ಹಲವು ಹೊಸ ಉಪಕ್ರಮಗಳನ್ನು ತೆಗೆದುಕೊಂಡಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅಧಿಸೂಚನೆ ಹೊರಡಿಸುವ 10 ದಿನಗಳ ಮೊದಲಿನವರೆಗೂ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದು. ಈ ವರ್ಷವೂ ಯೂಥ್ಸ್ ಮತ್ತು ಮಹಿಳಾ ಮತಗಟ್ಟೆ ಇರಲಿದೆ. 1808 ಥೀಮ್ ಬೇಸ್ಡ್ ಮತಗಟ್ಟೆಗಳು, 1120 ಸಖಿ ಬೂತ್​​ಗಳು ಮತ್ತು ಬುಡಕಟ್ಟುಗಳಿಗಾಗಿ ಪ್ರತ್ಯೇಕ ಬೂತ್ ರಚನೆ ಮಾಡಲಾಗುತ್ತಿದೆ. ವಾಹನಗಳು ಹೋಗದ ಕಡೆಯಲ್ಲೂ ಮತಯಂತ್ರಗಳನ್ನು ತಲೆಯಲ್ಲಿ ಹೊತ್ತು ಸಾಗಿಸಿ ಮತಗಟ್ಟೆ ಸ್ಥಾಪಿಸಿ ಮತದಾನ ಮಾಡಿಸಿಕೊಂಡು ಬರಲು ಬದ್ಧರಾದ ಅಧಿಕಾರಿಗಳಿದ್ದಾರೆ. ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ಮುಖ್ಯವಾಗಿ ಒಳಗೊಂಡಂತೆ ಸರ್ಕಾರಿ ಅಧಿಕಾರಿಗಳು ಇದಕ್ಕಾಗಿಯೇ ವಾರಗಟ್ಟಲೆ ತರಬೇತಿ ಪಡೆದು, ಆದರ್ಶವಾದ ರೀತಿಯಲ್ಲಿ ಒಟ್ಟೂ ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿರುವುದು ಆನೂಚಾನವಾಗಿ ನಡೆದುಕೊಂಡು ಬಂದಿದೆ. ಅವರೂ ಎಂದಿನಂತೆ ಇದಕ್ಕೆ ಸಜ್ಜಾಗಿದ್ದಾರೆ. ಈ ಸಲ ಕರ್ತವ್ಯನಿರತ ಪತ್ರಕರ್ತರಿಗೆ ಅಂಚೆ ಮತದಾನ ಅವಕಾಶವಿದೆ. ಒಪೀನಿಯನ್‌ ಪೋಲ್‌ಗೂ ನಿರ್ಬಂಧವಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಇವೆಲ್ಲವೂ ಆದರೂ ಮುಖ್ಯವಾಗಿ ಚಿಂತೆ ಮೂಡಿಸುವ ಸಮಸ್ಯೆಗಳೆಂದರೆ ಮತದಾನದ ಪ್ರಮಾಣ. ಇದು ಗ್ರಾಮೀಣ ಪ್ರದೇಶದಲ್ಲಿ ತೃಪ್ತಿಕರ ಎಂಬಂತಿದ್ದರೆ, ನಗರ ಪ್ರದೇಶಗಳಲ್ಲಿ ಮಾತ್ರ ಗರಿಷ್ಠ 70ನ್ನು ದಾಟುವುದಿಲ್ಲ. ನಗರ ಪ್ರದೇಶಗಳ ಮತದಾರರು ಅಂದಿನ ರಜೆಯನ್ನು ವಿರಾಮಕ್ಕಾಗಿ, ವಿಹಾರಕ್ಕಾಗಿ ಬಳಸುವುದರಿಂದ ಈ ಸಮಸ್ಯೆ. ಹೀಗೆ ಮಾಡುವ ಮೂಲಕ, ತಮ್ಮ ಭವಿಷ್ಯದ ಐದು ವರ್ಷಗಳ ಆಡಳಿತಕ್ಕೆ ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸುವ ಅವಕಾಶದಿಂದ ಇವರು ತಪ್ಪಿಸಿಕೊಳ್ಳುತ್ತಾರೆ. ಒಂದೊಂದು ಮತವೂ ಅಮೂಲ್ಯ. ಪ್ರತಿ ಮತವೂ ಗಣನೀಯ. ಪ್ರತಿ ಮತವೂ ಭವಿಷ್ಯವನ್ನು ಸೃಷ್ಟಿಸುತ್ತದೆ. ಇದನ್ನು ಮತ್ತೆ ಮತ್ತೆ ಹೇಳಿ ಮನದಟ್ಟು ಮಾಡಬೇಕಿದೆ. ನೂರಕ್ಕೆ ನೂರು ಮತದಾನ ಎಂಬುದು ಆದರ್ಶ. ಆದರ್ಶದತ್ತ ನಡೆಯುವು ಅವಕಾಶ ನಮಗಿದೆ. ಪ್ರಯತ್ನ ಪಡೋಣ. ಆಗ ಉತ್ತಮರ ಆರಿಸಿ ಬಂದು ಒಳ್ಳೆಯ ಸರ್ಕಾರ ರಚನೆಯಾಗಬಹುದು. ಈ ಜವಾಬ್ದಾರಿ ಎಲ್ಲರ ಮೇಲಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸೆಮಿಕಂಡಕ್ಟರ್‌ ಉದ್ಯಮದ ಉಗಮದಿಂದ ಭಾರತವಾಗಲಿದೆ ʼಪವರ್‌ʼಫುಲ್

ಇನ್ನು ಗೊಂದಲಗಳು. ಕಳೆದ ಸಾಲಿನ ಲೋಕಸಭೆ ಹಾಗೂ ವಿಧಾನಸಭೆ ಮತದಾನದ ಸಂದರ್ಭಗಳಲ್ಲಿ ಹಲವು ಕಡೆ ಮತಯಂತ್ರಗಳು ಕೈಕೊಟ್ಟಿದ್ದವು. ಇಂಥ ಕೊನೆಯ ಕ್ಷಣದ ಗೊಂದಲಗಳನ್ನು ನಿವಾರಿಸಬೇಕು. ಹಲವೆಡೆ ತಮ್ಮ ಹೆಸರುಗಳೇ ಮತದಾರರ ಪಟ್ಟಿಯಲ್ಲಿ ಮಾಯವಾಗಿವೆ ಎಂದು ಬಂಡಾಯ ಎದ್ದಿದ್ದರು. ಇದು ಕೂಡ ಎಚ್ಚರಿಕೆಯಿಂದ ಅಧಿಕಾರಿಗಳು ನಿರ್ವಹಿಸಬೇಕಾದ ಸಂಗತಿ. ಇಲ್ಲಿ ಪಕ್ಷಪಾತ, ವಂಚನೆಗೆ ಅವಕಾಶವಿದೆ. ಹೀಗಾಗದಂತೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವುದು ಅಗತ್ಯ. ಇಲ್ಲವಾದರೆ ಅಂಥ ಕೃತ್ಯ ದಂಡನೀಯ. ಇನ್ನು ಚುನಾವಣೆಯ ಪ್ರಚಾರ ಕಣ ಯಾವಾಗಲೂ ಬಿಸಿಬಿಸಿಯೇ ಆಗಿರುತ್ತದೆ. ಮಾತಿನ ಕೂರಂಬುಗಳ ಎಸೆತ ಸಾಮಾನ್ಯ. ಆದರೆ ಮಾತು ಹದ ತಪ್ಪದಂತೆ, ವಿಮರ್ಶಾತ್ಮಕವಾಗಿರುವಂತೆ ನೋಡಿಕೊಳ್ಳಬೇಕಾದುದು ಎಲ್ಲ ಪ್ರಚಾರಕರ ಹೊಣೆ. ತಮ್ಮ ಸರ್ಕಾರದ ಸಾಧನೆಗಳ ಬಿತ್ತರ, ವಿಮರ್ಶೆ ಹಾಗೂ ಎದುರಾಳಿಗಳ ಟೀಕೆ ಇರಲಿ. ಆದರೆ ತೇಜೋವಧೆ ಬೇಡ.

ಇವೆಲ್ಲ ಆದರ್ಶಗಳನ್ನು ಮುಂದಿಟ್ಟುಕೊಂಡು ಇನ್ನೊಂದು ಭಾರಿ ಚುನಾವಣೆಗೆ ಸಿದ್ಧರಾಗೋಣ. ನಿಷ್ಪಕ್ಷಪಾತ, ಪಾರದರ್ಶಕ, ಮಾದರಿ, ಬೃಹತ್‌ ಚುನಾವಣಾ ಪ್ರಕ್ರಿಯೆಯಲ್ಲಿ ನಮ್ಮೆಲ್ಲರ ಪಾಲೂ ಇರಲಿ.

Exit mobile version