Site icon Vistara News

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Actor Darshan

ರಾಜೇಂದ್ರ ಭಟ್ ಕೆ

ಮೊದಲೇ ಹೇಳಿಬಿಡುತ್ತೇನೆ, ನಾನು ಯಾವುದೇ ಸಿನಿಮಾ ನಟನ ಅಭಿಮಾನಿಯಲ್ಲ. ದರ್ಶನ್ (Actor Darshan) ಎಂಬ ಕನ್ನಡದ ಸ್ಟಾರ್ ನಟನ ಬದುಕಿನಲ್ಲಿ ಈ ಎರಡು ದಿನಗಳ ಅವಧಿಯಲ್ಲಿ ಏನೆಲ್ಲ ಆಗಿದೆ ಅದರ ಬಗ್ಗೆ ನಾನು ತೀರ್ಪು ಕೊಡಲು ಹೋಗುವುದಿಲ್ಲ. ಆದರೆ ಈ ಘಟನೆಯು ಸಮಾಜಕ್ಕೆ ಬಹು ದೊಡ್ಡ ಸಂದೇಶ ಉಳಿಸಿ ಹೋಗಿದೆ. ಆತನ ಸಿನೆಮಾಗಳಲ್ಲಿ ಅವನು ಮಾಡುವ ಪಾತ್ರಗಳು, ಕೊಡುವ ಪೋಸ್, ಹೊಡೆಯುವ ಡೈಲಾಗುಗಳು, ಪ್ರಕಟಿಸುವ ಮೌಲ್ಯಗಳು….
ಛೇ! ಹೀಗಾಗಬಾರದಿತ್ತು. ಅವನನ್ನು ಕೋರ್ಟಿಗೆ ವಿಚಾರಣೆಗೆ ಕರೆತಂದಾಗ ಅಲ್ಲಿದ್ದ ಕೆಲವು ಅಭಿಮಾನಿಗಳು ‘ ಡಿ ಬಾಸಿಗೆ ಜಯವಾಗಲಿ’ ಅಂತ ಘೋಷಣೆ ಕೂಗಿದರಂತೆ! ಇನ್ನು ಅವನು ಈ ಕೇಸನ್ನು ಗೆದ್ದು ಬಂದರೆ ಸಾವಿರಾರು ಅಭಿಮಾನಿಗಳು ಮಾಲೆ ಹಿಡಿದು ಜೈಕಾರ ಹಾಕಲು ಕಾಯುತ್ತಿರುತ್ತಾರೆ! ಅಂಧಾಭಿಮಾನ ಈ ಮಟ್ಟಕ್ಕೆ ಹೋಗಬಾರದು.

ನಮ್ಮ ಖಾಸಗಿ ಜೀವನ ಮತ್ತು ವೃತ್ತಿ ಜೀವನ

ಪ್ರತಿಯೊಬ್ಬ ವ್ಯಕ್ತಿಗೂ ಒಂದು ಖಾಸಗಿ ಜೀವನ ಮತ್ತು ಇನ್ನೊಂದು ವೃತ್ತಿ ಜೀವನ ಇರುತ್ತದೆ. ಅದರ ಮಧ್ಯೆ ಒಂದು ಸಣ್ಣ ಗ್ಯಾಪ್ ಇದ್ದೇ ಇರುತ್ತದೆ. ಅದು ಸಹಜ ಕೂಡ.

ಆದರೆ ಅದೇ ಗ್ಯಾಪ್ ದೊಡ್ಡದಾದರೆ? ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ಇದೆ ಅಂತಾದರೆ ಸಹಿಸಿಕೊಳ್ಳುವುದು ಹೇಗೆ? ಒಬ್ಬ ಸ್ಟಾರ್ ನಟ ಆಪಾದಿತನಾಗಿ ಕಟಕಟೆಯಲ್ಲಿ ತಲೆ ತಗ್ಗಿಸಿ ನಿಂತಾಗಲೂ ಜೈಕಾರ ಹಾಕುವ ಹುಚ್ಚು ಅಭಿಮಾನಿಗಳಿಗೆ ಏನೆಂದು ಹೇಳಬೇಕು? ಒಬ್ಬ ಸ್ಟಾರ್ ನಟನ ಕೋಟಿ ಅಭಿಮಾನಿಗಳು ಆತನ ಖಾಸಗಿ ಜೀವನವನ್ನು ಅನುಕರಣೆ ಮಾಡಲು ಹೋದರೆ ಸಮಾಜ ಹೇಗಿರಬಹುದು? ಒಬ್ಬ ಬಡ ಕುಟುಂಬದ ಹುಡುಗ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿ ತೊಂದರೆ ಕೊಟ್ಟ ಎಂಬ ಕಾರಣಕ್ಕೆ ಸ್ಟಾರ್ ನಟ ಮತ್ತು ಅವನ ಗೆಳೆಯರು ಹೊಡೆದು ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ (ನನಗೆ ಗೊತ್ತಿಲ್ಲ) ಅಂದರೆ ಅದೆಂತಹ ಕ್ರೌರ್ಯ? ದರ್ಶನ್ ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ ಇಂತಹ ಘಟನೆಗಳಿಗೂ ಎಷ್ಟೊಂದು ವ್ಯತ್ಯಾಸ ಅಲ್ವಾ?

ಹುಚ್ಚು ಅಭಿಮಾನಿಗಳ ಅತಿರೇಕಗಳು!:

ಬಹಳ ಹಿಂದೆ ಡಾಕ್ಟರ್ ರಾಜಕುಮಾರ್ ಅವರ ‘ಸಮಯದ ಗೊಂಬೆ ‘ ಸಿನೆಮಾ ಬಿಡುಗಡೆ ಆಗಿತ್ತು. ನಾನು ಅದನ್ನು ಬೆಂಗಳೂರಿನ ಒಂದು ಥಿಯೇಟರ್ ಒಳಗೆ ಕೂತು ನೋಡುತ್ತಾ ಇದ್ದೆ. ಅದರಲ್ಲಿ ರಾಜ್ ಅವರದ್ದು ಒಬ್ಬ ಸಾಮಾನ್ಯ ಕಾರ್ ಡ್ರೈವರ್ ಪಾತ್ರ ಆಗಿತ್ತು. ನಟ ಶ್ರೀನಾಥ್ ಅವರದ್ದು ಆ ಕಾರ್ ಯಜಮಾನನ ಪಾತ್ರ. ಒಂದು ಭಾವನಾತ್ಮಕ ಪಾತ್ರದಲ್ಲಿ ಸಿಟ್ಟು ಮಾಡಿಕೊಂಡ ಶ್ರೀನಾಥ್ ತನ್ನ ಡ್ರೈವರ್ ಆದ ರಾಜಕುಮಾರ್ ಅವರ ಕಪಾಳಕ್ಕೆ ಹೊಡೆಯುವ ಸನ್ನಿವೇಶ. ಸಿನೆಮಾದ ಕಥೆಯೇ ಹಾಗಿತ್ತು. ಆದರೆ ಅದನ್ನು ರಾಜ್ ಅಭಿಮಾನಿಗಳು ಸಹಿಸಿಕೊಳ್ಳಲಿಲ್ಲ.
‘ಏನೋ, ನಮ್ಮ ಅಣ್ಣಾವ್ರಿಗೆ ಹೊಡೀತಿಯೇನೋ?’ ಎಂದೆಲ್ಲ ಕೂಗಾಡಿದರು. ಥಿಯೇಟರ್ ಮೇಲೆ ಕಲ್ಲು ಬಿತ್ತು. ಶ್ರೀನಾಥ್ ಎಂಬ ನಟನಿಗೆ ಬೈಗುಳದ ಅಭಿಷೇಕವೇ ಆಯಿತು. ಕೊನೆಗೆ ಚಿತ್ರ ನಿರ್ಮಾಪಕರು ಕ್ಷಮೆ ಕೇಳಿ ಆ ದೃಶ್ಯವನ್ನು ಕತ್ತರಿಸುವ ಭರವಸೆ ಕೊಟ್ಟ ನಂತರ ಪ್ರೇಕ್ಷಕರ ಆಕ್ರೋಶವು ತಣಿಯಿತು.

ತಮಿಳುನಾಡಿನಲ್ಲಿ ಈ ಹುಚ್ಚು ಅಭಿಮಾನ ಇನ್ನೂ ಜಾಸ್ತಿ. ಎಂ ಜಿ ಆರ್, ಜಯಲಲಿತಾ, ಅಜಿತ್, ವಿಜಯ್, ರಜನೀಕಾಂತ್ ಅವರನ್ನು ದೇವರಾಗಿ ಕಂಡ ಜನ ಅವರು. ನಟಿ ಖುಷ್ಬೂಗೆ ಒಂದು ದೇವಸ್ಥಾನವನ್ನು ಕಟ್ಟಿದ ಜನ ಅವರು! ಒಬ್ಬ ನಟನ ಅಭಿಮಾನಿಗಳು ಇನ್ನೊಬ್ಬ ನಟನ ಅಭಿಮಾನಿಗಳ ಮೇಲೆ ಹಲ್ಲೆ ನಡೆಸುವ ಘಟನೆಗಳು ಅಲ್ಲಿ ನಿತ್ಯವೂ ನಡೆಯುತ್ತವೆ. ಅಂತಹ ಅಂಧಾಭಿಮಾನಿಗಳಿಗೆ ಕಪಾಳಕ್ಕೆ ಹೊಡೆದ ಹಾಗೆ ನಡೆದಿದೆ ಈ ಮರ್ಡರ್ ಕಥೆ. ಆದರೆ ಬಲಿಯಾದದ್ದು ಒಬ್ಬ ಬಡ ಅಪ್ಪ , ಅಮ್ಮನ ಒಬ್ಬನೇ ಮಗ, ಕುಟುಂಬದ ಒಬ್ಬನೇ ಆಧಾರ ಅನ್ನೋದು, ಒಬ್ಬ ಚೊಚ್ಚಲ ಬಾಣಂತಿಯ ಗಂಡ ಅನ್ನೋದು ಮಾತ್ರ ದುರಂತ!

ಕರಾವಳಿಯ ಜನ ಬುದ್ಧಿವಂತರು!:

ಇಲ್ಲಿಯ ಸಿನೆಮಾ ಪ್ರೇಕ್ಷಕರು ಕೇವಲ ಮನರಂಜನೆಗಾಗಿ ಸಿನೆಮಾ ನೋಡುತ್ತಾರೆ. ಕಥೆ ಚೆನ್ನಾಗಿದ್ದರೆ ಮಾತ್ರ ನೋಡುತ್ತಾರೆ. ಯಾವ ಸ್ಟಾರ್ ನಟ ಅಥವಾ ಸ್ಟಾರ್ ನಟಿಯ ಸಿನೆಮಾ ಬಂದರೂ ಆ ಸ್ಟಾರಗಿರಿಗೆ ಮೆಚ್ಚಿ ಸಿನೆಮಾ ನೋಡಲು ಬರುವುದೇ ಇಲ್ಲ. ‘ಹೀರೋ ವರ್ಶಿಪ್ ‘ ಕರಾವಳಿಯಲ್ಲಿ ತುಂಬಾ ಕಡಿಮೆ. ಈ ಪ್ರಬುದ್ಧತೆಯೇ ಇಂದು ನಿಜವಾಗಿ ಬೇಕಾಗಿರುವುದು. ಹಾಗೆಯೇ ನಾನು ಹಿಂದೊಮ್ಮೆ ಬರೆದ ವರನಟ ರಾಜಕುಮಾರ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖ ಮಾಡಬೇಕು.

ಇದನ್ನೂ ಓದಿ: Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

‘ನಮ್ಮಂತಹ ನಟರನ್ನು ಸಾವಿರಾರು ಅಭಿಮಾನಿಗಳು ಅನುಕರಣೆ ಮಾಡುತ್ತಾರೆ. ಆದ್ದರಿಂದ ನಮ್ಮ ಖಾಸಗಿ ಜೀವನವೂ ಅವರಿಗೆ ಅನುಕರಣೀಯ ಆಗಿರಬೇಕು.’ ಅವರು ತೆರೆಯ ಮೇಲೆ ಯಾವ ಪಾತ್ರಗಳನ್ನು ಮಾಡಿದ್ದರೋ ಅದೇ ರೀತಿ ಬದುಕಿದ್ದರು. ‘ನನ್ನ ಜೀವನವೇ ನನ್ನ ಸಂದೇಶ ‘ ಅಂದಿದ್ದರು ಗಾಂಧೀಜಿ. ಅವರ ಬದುಕಿನಲ್ಲಿಯೂ ಕೆಲವು ಕಪ್ಪು ಪುಟಗಳು ಇದ್ದವು. ಅದ್ಯಾವುದನ್ನೂ ಅವರು ಮುಚ್ಚಿಡಲಿಲ್ಲ. ಅವರ ಆತ್ಮಚರಿತ್ರೆಯ ಪುಸ್ತಕವಾದ
‘ಸತ್ಯಾನ್ವೇಷಣೆ ‘ಯಲ್ಲಿ ಅವರು ಆ ಕಪ್ಪು ಪುಟಗಳನ್ನು ಬರೆಯಲು ಹೇಸಿಗೆ ಮಾಡಲಿಲ್ಲ. ಅದಕ್ಕಾಗಿ ಅವರು ಲೆಜೆಂಡ್ ಆದರು. ನಮ್ಮ ಬದುಕು ಕೂಡ ಒಂದು ತೆರೆದ ಪುಸ್ತಕ ಆಗೋದು ಯಾವಾಗ?

Exit mobile version