Site icon Vistara News

Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ 70 ಬಿಜೆಪಿಗೆ!

modi with yogi

ಹೊಸದಿಲ್ಲಿ: ಸದ್ಯದಲ್ಲೇ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಹಿಂದಿ ಹೃದಯಭಾಗವಾದ ಉತ್ತರ ಪ್ರದೇಶದಲ್ಲಿ (Uttar Pradesh) ಬಿಜೆಪಿ (BJP) ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. 80 ಲೋಕಸಭಾ ಸ್ಥಾನಗಳಲ್ಲಿ 70ನ್ನೂ ಬಾಚಿಕೊಳ್ಳಲಿದೆ ಎಂದು ಸಮೀಕ್ಷೆ ಫಲಿತಾಂಶ ತಿಳಿಸಿದೆ.

ಇಂಡಿಯಾ ಟುಡೇ ಟಿವಿ ವಾಹಿನಿ ನಡೆಸಿದ ʼಮೂಡ್ ಆಫ್ ದಿ ನೇಷನ್ʼ ಅಭಿಪ್ರಾಯ ಸಮೀಕ್ಷೆಯ ಪ್ರಕಾರ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸುಮಾರು 70 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಉತ್ತರ ಪ್ರದೇಶದಲ್ಲಿ ಎನ್‌ಡಿಎ ಒಟ್ಟು ಶೇಕಡಾ 52ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 62 ಸ್ಥಾನಗಳನ್ನು ಮತ್ತು ಅದರ ಮಿತ್ರ ಪಕ್ಷ ಅಪ್ನಾ ದಳ 2 ಸ್ಥಾನಗಳನ್ನು ಗೆದ್ದಿತ್ತು.

ಮೂಡ್ ಆಫ್ ದಿ ನೇಷನ್‌ನ ಫೆಬ್ರವರಿ 2024ರ ಆವೃತ್ತಿಯು ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ನಡೆದಿದ್ದು, 35,801 ಮಂದಿಯ ಅಭಿಪ್ರಾಯಗಳನ್ನು ಆಧರಿಸಿದೆ. ಸಮೀಕ್ಷೆಯನ್ನು ಡಿಸೆಂಬರ್ 15, 2023 ಮತ್ತು ಜನವರಿ 28, 2024ರ ನಡುವೆ ನಡೆಸಲಾಗಿದೆ.

ಇದುವರೆಗೆ ಇಂಡಿಯಾ ಬ್ಲಾಕ್‌ನಲ್ಲಿದ್ದ (India Bloc) ಆರ್‌ಎಲ್‌ಡಿಯ (RLD) ಜಯಂತ್ ಚೌಧರಿ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಪಕ್ಷದ ಭದ್ರಕೋಟೆಯಾದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಅದು 4-5 ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎಂದು ತರ್ಕಿಸಲಾಗಿದೆ. ಈ ಬೆಳವಣಿಗೆಯಿಂದ ಸಮೀಕ್ಷೆ ಫಲಿತಾಂಶ ಸ್ವಲ್ಪ ಮಾತ್ರ ವ್ಯತ್ಯಾಸವಾಗಬಹುದು.

ಸಮೀಕ್ಷೆಯ ಪ್ರಕಾರ ಇಂಡಿಯಾ ಬ್ಲಾಕ್‌ಗೆ ರಾಜ್ಯದಲ್ಲಿ 10ಕ್ಕಿಂತಲೂ ಕಡಿಮೆ ಸ್ಥಾನಗಳಷ್ಟೇ ಲಭ್ಯವಾಗಲಿವೆ. ಸಮಾಜವಾದಿ ಪಕ್ಷ 7 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಉತ್ತರ ಪ್ರದೇಶದ ಒಟ್ಟು 80 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಗಳಿಸಿತ್ತು.

ಕಾಂಗ್ರೆಸ್‌ಗೆ ಕೇವಲ ಒಂದು ಸ್ಥಾನ ಮಾತ್ರ ಲಭ್ಯವಾಗುವಂತಿದೆ. ಕಾಂಗ್ರೆಸ್ ತನ್ನ ಮತ ಪಾಲನ್ನು ಶೇಕಡಾ 6ರಷ್ಟು ಉಳಿಸಿಕೊಳ್ಳುವ ಸಾಧ್ಯತೆಯಿದ್ದರೆ, ಸಮಾಜವಾದಿ ಪಕ್ಷದ ಮತ ಹಂಚಿಕೆಯು ಶೇಕಡಾ 39ರಿಂದ ಶೇಕಡಾ 30ಕ್ಕೆ ಇಳಿಕೆಯಾಗಲಿದೆ. ಚುನಾವಣೆಯಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತೆ ಶೂನ್ಯ ಸಂಪಾದನೆ ಮಾಡುವ ಸಾಧ್ಯತೆಯಿದೆ. ಶೇ.8ಕ್ಕಿಂತ ಕಡಿಮೆ ಮತಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ

ಲೋಕಸಭೆಗೆ ಗರಿಷ್ಠ ಸಂಖ್ಯೆಯ ಸಂಸದರನ್ನು ಕಳುಹಿಸುವ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ‘ಅಬ್ ಕಿ ಬಾರ್, 400 ಪಾರ್’ ಕನಸನ್ನು ನನಸು ಮಾಡಲು ಎನ್‌ಡಿಎಗೆ ಪ್ರಮುಖವಾಗಿದೆ.

ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 370 ಮತ್ತು ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 351 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಗೆದ್ದಿದೆ.

ಇದನ್ನೂ ಓದಿ: ವಿಸ್ತಾರ Explainer: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ 370 ಸೀಟ್‌ ಗಳಿಸುತ್ತಾ ಬಿಜೆಪಿ? ಲೆಕ್ಕಾಚಾರ ಹೀಗಿದೆ

Exit mobile version