Site icon Vistara News

Lok Sabha Election 2024: ಕರ್ನಾಟಕದ ಗೃಹಲಕ್ಷ್ಮಿ, ಯುವನಿಧಿ ಲೋಕಸಭೆ ಚುನಾವಣೆಗೂ ವಿಸ್ತರಿಸಲಿರುವ ಕಾಂಗ್ರೆಸ್‌

Congress Guarantee

Congress launches Ghar Ghar Guarantee initiative: Kharge announces party will fulfil 25 promises under

ಹೊಸದಿಲ್ಲಿ: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ನೀಡಿದ ಗೃಹಲಕ್ಷ್ಮಿ (Gruha Lakshmi scheme), ಯುವನಿಧಿ (Yuva Nidhi Scheme) ಮತ್ತಿತರ ಯೋಜನೆಗಳ ಆಮಿಷವನ್ನೇ ಲೋಕಸಭೆ ಚುನಾವಣೆಯ (Lok Sabha Election 2024) ಪ್ರಣಾಳಿಕೆಯಲ್ಲೂ (Manifesto) ಕಾಂಗ್ರೆಸ್ (Congress) ನೀಡಲಿದೆ ಎಂದು ತಿಳಿದುಬಂದಿದೆ.

ಬಡ ಮಹಿಳೆಯರಿಗೆ ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆಯಂಥ ಕಾರ್ಯಕ್ರಮ, ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆ‌ (ಯುವನಿಧಿ), ಭಾರಿ ಸಬ್ಸಿಡಿಯೊಂದಿಗೆ ಅಡುಗೆ ಅನಿಲ ಸಿಲಿಂಡರ್‌ನಂಥ ಉಚಿತಗಳು, ಸಶಸ್ತ್ರ ಪಡೆಗಳ ನೇಮಕಾತಿಗೆ ಬಿಜೆಪಿ ತಂದಿರುವ ಅಗ್ನಿಪಥ್ ಯೋಜನೆಯನ್ನು ತೆಗೆದುಹಾಕುವುದು- ಇವು ಕಾಂಗ್ರೆಸ್‌ನ ಪ್ರಣಾಳಿಕೆಯ ಆದ್ಯತೆಯ ಪಟ್ಟಿಯಲ್ಲಿರುವ ಕೆಲವು ಸಂಗತಿಗಳಾಗಿವೆ.

ಪಕ್ಷದ ಪ್ರಣಾಳಿಕೆಯು ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರಂತಹ ವಿಶಾಲ ವರ್ಗಗಳನ್ನು ಒಳಗೊಳ್ಳಲಿದೆ. “ಎಲ್ಲರಿಂದ ಬಂದ ಸಲಹೆಗಳನ್ನು ಒಟ್ಟುಗೂಡಿಸಿ, ಯುವಜನರ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಕಾಂಗ್ರೆಸ್ ವಿಸ್ತಾರ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಶೀಘ್ರದಲ್ಲೇ ಅದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಹೆಚ್ಚಿದ ನಿರುದ್ಯೋಗ ಬಗ್ಗೆ ಕಾಂಗ್ರೆಸ್‌ ಮಾತಾಡುತ್ತಿದೆ. ಆರ್ಥಿಕ ಥಿಂಕ್-ಟ್ಯಾಂಕ್ CMIEಯ ಇತ್ತೀಚಿನ ಅಂಕಿಅಂಶಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ 8.7%ರಷ್ಟಿದ್ದ ನಿರುದ್ಯೋಗ ದರವು ಜನವರಿ 2024ರಲ್ಲಿ 6.8%ಕ್ಕೆ ತೀವ್ರವಾಗಿ ಕಡಿಮೆಯಾಗಿದೆ ಎಂದು ತೋರಿಸಿದರೂ, ಕಾಂಗ್ರೆಸ್ ಈ ಅಂಕಿಅಂಶ ಸ್ವೀಕಾರಾರ್ಹವಲ್ಲ ಎಂದಿದೆ. ಮತ್ತು ಹೆಚ್ಚಿನ ನಿರುದ್ಯೋಗ ಭತ್ಯೆಯ ಆಮಿಷ ನೀಡುವ ಮೂಲಕ ಯುವ ಮತದಾರರನ್ನು ಸೆಳೆಯಲು ಯೋಚಿಸಿದೆ.

16 ತಿಂಗಳುಗಳಲ್ಲಿ ನಿರುದ್ಯೋಗದ ಅಂಕಿಅಂಶಗಳು ಅತ್ಯಂತ ಕಡಿಮೆಯಿದ್ದರೂ ಸಹ, ಭಾರತದ ನಿರುದ್ಯೋಗ ಪ್ರಮಾಣ ನೆರೆಹೊರೆಯ ದೇಶಗಳಿಗಿಂತ ಹೆಚ್ಚಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಕಳೆದ 40 ವರ್ಷಗಳಲ್ಲಿ ಇಂದು ದೇಶದಲ್ಲಿ ಗರಿಷ್ಠ ನಿರುದ್ಯೋಗವಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ದುಪ್ಪಟ್ಟು ನಿರುದ್ಯೋಗವಿದೆ. ನಮ್ಮಲ್ಲಿ ಬಾಂಗ್ಲಾದೇಶ ಮತ್ತು ಭೂತಾನ್‌ಗಿಂತ ಹೆಚ್ಚು ನಿರುದ್ಯೋಗಿ ಯುವಕರಿದ್ದಾರೆ. ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯನ್ನು ಜಾರಿಗೊಳಿಸುವ ಮೂಲಕ ಸಣ್ಣ ಉದ್ಯಮಗಳನ್ನು ಮುಗಿಸಿದ್ದಾರೆ” ಎಂದು ರಾಹುಲ್‌ ಭಾನುವಾರ ಗ್ವಾಲಿಯರ್‌ನಲ್ಲಿ ಹೇಳಿದರು. ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರಸ್ತುತ ಮಧ್ಯಪ್ರದೇಶದಲ್ಲಿದೆ.

ಅದೇ ರೀತಿ, ಮನೆವೆಚ್ಚದ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಲಿರುವ ಕಾಂಗ್ರೆಸ್, ಭಾರೀ ಸಬ್ಸಿಡಿ ಮತ್ತು ₹450-500ಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡುವ ಭರವಸೆ ನೀಡಬಹುದು. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಯಲ್ಲಿ ಪಕ್ಷ ಇದೇ ರೀತಿಯ ಕೊಡುಗೆ ನೀಡಿತ್ತು. ಛತ್ತೀಸ್‌ಗಢದಲ್ಲಿ ₹494ಕ್ಕೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದರೆ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ ₹500ಕ್ಕೆ ಅಡುಗೆ ಅನಿಲವನ್ನು ನೀಡುತ್ತಿದೆ. ರಾಜ್ಯ ಚುನಾವಣೆಗೆ ಮುನ್ನ ಕೇಂದ್ರ ಅಡುಗೆ ಅನಿಲದ ಬೆಲೆಯನ್ನು ₹200 ಕಡಿತಗೊಳಿಸಿತ್ತು. ಇದರಲ್ಲಿ ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಗೆದ್ದಿದೆ, ಮೂರು ಪ್ರಮುಖ ಹಿಂದಿ ಹೃದಯ ರಾಜ್ಯಗಳಲ್ಲಿ ಸೋತಿದೆ.

ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಉದ್ಯೋಗವನ್ನು ನೀಡುವ ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸಲು ಸಹ ಕಾಂಗ್ರೆಸ್ ಪ್ರಸ್ತಾಪಿಸಬಹುದು. ಶಾಶ್ವತ ನೇಮಕಾತಿಯ ಹಳೆಯ ವಿಧಾನವನ್ನು ಮರುಸ್ಥಾಪಿಸಬಹುದು. ಈ ವಾರ ಪಾಟ್ನಾದಲ್ಲಿ ನಡೆದ ʼಜನವಿಶ್ವಾಸ್ ರ್ಯಾಲಿʼಯಲ್ಲಿ, ಈ ಯೋಜನೆಯಡಿಯಲ್ಲಿ ಮಾಜಿ ಅಗ್ನಿವೀರ ಸೈನಿಕರಿಗೆ ಯಾವುದೇ ಪಿಂಚಣಿ ಸಿಗುವುದಿಲ್ಲ ಎಂದು ಗಾಂಧಿ ಸೂಚಿಸಿದರು. “ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಯ ಶ್ರೇಣಿಗಿಂತ ಕೆಳಗಿನ ಕಾಯಂ ಉದ್ಯೋಗಗಳು ಸಿಗದಿರುವ ಬಗ್ಗೆ ಜನರಲ್ಲಿ ಹತಾಶೆ ಇದೆ” ಎಂದು ಹೇಳಿದರು.

ಕರ್ನಾಟಕದಲ್ಲಿ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆಯನ್ನು ಸಹ ಪ್ಯಾನ್-ಇಂಡಿಯಾ ಮಾಡಲು ಕಾಂಗ್ರೆಸ್‌ ಪರಿಗಣಿಸುತ್ತಿದೆ. ಇದರಡಿಯಲ್ಲಿ ಕರ್ನಾಟಕ ಸರ್ಕಾರ ಬಿಪಿಎಲ್ ಕುಟುಂಬದ ಮಹಿಳೆಗೆ ಮಾಸಿಕ ₹2,000 ಸಹಾಯವನ್ನು ನೀಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಅರಿವು ಹೊಂದಿರುವ ಇಬ್ಬರು ನಾಯಕರ ಪ್ರಕಾರ, ಪಕ್ಷವು ಈ ಸಲ ಶಿಕ್ಷಣ ಸಾಲದ ಮೇಲಿನ ಬಡ್ಡಿದರದಲ್ಲಿ ರಿಯಾಯಿತಿ ನೀಡಬಹುದು, ಮಹಿಳೆಯರಿಗೆ ಬಸ್ ಪ್ರಯಾಣವನ್ನು ಮುಕ್ತಗೊಳಿಸಬಹುದು, ಜಿಎಸ್‌ಟಿ ದರಗಳನ್ನು ಮರುರೂಪಿಸಬಹುದು ಮತ್ತು ಕೆಲವು ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಬಹುದು.

ಪ್ರಣಾಳಿಕೆ ಸಮಿತಿಯ ಸಭೆಯ ನಂತರ ಅದರ ಅಧ್ಯಕ್ಷ ಪಿ ಚಿದಂಬರಂ, “ನಾವು ಕರಡು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಅದು CWC ಮುಂದೆ ಹೋಗಲಿದ್ದು, ಅವರು ಪ್ರಣಾಳಿಕೆಯನ್ನು ಅಂತಿಮಗೊಳಿಸುತ್ತಾರೆ. ನಾಳೆ ನಾವು ಈ ಕರಡನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಹಸ್ತಾಂತರಿಸುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: Lok Sabha Election: ಕಾಂಗ್ರೆಸ್‌ಗೆ ಈ ಸಲ ಸಿಗೋದು ಬರೀ 37 ಸೀಟು; ಏನಿದು ಸಮೀಕ್ಷೆ?

Exit mobile version