Site icon Vistara News

Lok Sabha Election 2024: ಕಾಂಗ್ರೆಸ್‌ 9ನೇ ಪಟ್ಟಿ ಪ್ರಕಟ; ರಕ್ಷಾ ರಾಮಯ್ಯ, ಈ.ತುಕಾರಾಂ, ಸುನೀಲ್‌ ಬೋಸ್‌ಗೆ ಟಿಕೆಟ್‌

Lok Sabha Election 2024

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 9ನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಕರ್ನಾಟಕದ ಮೂರು ಹಾಗೂ ರಾಜಸ್ಥಾನದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ರಾಜ್ಯದಲ್ಲಿ 24 ಕ್ಷೇತ್ರಗಳಿಗೆ ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು, ಇದೀಗ ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಚಾಮರಾಜನಗರ ಕ್ಷೇತ್ರದಲ್ಲಿ ಸಚಿವ ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹಾಗೂ ಬಳ್ಳಾರಿಯಲ್ಲಿ ಸಂಡೂರು ಶಾಸಕ ಈ.ತುಕಾರಾಂ ಅವರಿಗೆ ಟಿಕೆಟ್‌ ನೀಡಲಾಗಿದೆ.‌

ಇದನ್ನೂ ಓದಿ | Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಎಂ.ಆರ್‌.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡಲು ವಿರೋಧ ವ್ಯಕ್ತವಾಗಿತ್ತು. ಆದರೂ, ಅಂತಿಮವಾಗಿ ಪಕ್ಷ ಅವರಿಗೇ ಮಣೆ ಹಾಕಿದೆ. ಇನ್ನು ಚಾಮರಾಜನಗರದಲ್ಲಿ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್ ಕೊಡಿಸುವಲ್ಲಿ ಸಚಿವ ಎಚ್.ಸಿ ಮಹದೇವಪ್ಪ ಯಶಸ್ವಿಯಾಗಿದ್ದಾರೆ. ಹಾಗೆಯೇ ಬಳ್ಳಾರಿಯಲ್ಲಿ ಆರೇಳು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದರು. ಟಿಕೆಟ್‌ ರೇಸ್‌ನಲ್ಲಿ ಅಂತಿಮವಾಗಿ ಸಂಡೂರಿನ ನಾಲ್ಕು ಬಾರಿಯ ಶಾಸಕ ಈ.ತುಕಾರಾಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಕೋಲಾರದ ಅಭ್ಯರ್ಥಿ ಆಯ್ಕೆ ಪೆಂಡಿಂಗ್

ಕಾಂಗ್ರೆಸ್‌ನಲ್ಲಿ ಇನ್ನು ಕೋಲಾರ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾತ್ರ ಬಾಕಿ ಉಳಿದಿದೆ. ಕೋಲಾರದಲ್ಲಿ ಕೆ.ಎಚ್.‌ ಮುನಿಯಪ್ಪ (K.H. Muniyappa) ಅವರ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಒಲವು ತೋರಿದೆ ಎಂಬ ಮಾತುಗಳು ಕೇಳಿಬಂದಿದ್ದರಿಂದ ಮಾಜಿ ಸಚಿವ ರಮೇಶ್ ಕುಮಾರ್ (Ramesh Kumar) ಬಣ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಿದರೆ ರಾಜೀನಾಮೆ ನೀಡುವುದಾಗಿ ಕೋಲಾರ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಈ ಕ್ಷೇತ್ರದ ಟಿಕೆಟ್‌ ಅಂತಿಮ ಮಾಡುವುದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ಎರಡೂ ಬಣದ ನಾಯಕರು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಶೀಘ್ರದಲ್ಲೇ ಕೋಲಾರದ ಟಿಕೆಟ್‌ ಕೂಡ ಘೋಷಣೆಯಾಗಲಿದೆ.

ಈಗಾಗಲೇ ಘೋಷಣೆಯಾಗಿರುವ ಕೈ ಅಭ್ಯರ್ಥಿಗಳ ಪಟ್ಟಿ

ಚಿತ್ರದುರ್ಗ -ಬಿ.ಎನ್‌.ಚಂದ್ರಪ್ಪ
ಬೆಳಗಾವಿ – ಮೃಣಾಲ್‌ ಹೆಬ್ಬಾಳ್ಕರ್‌
ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ – ಸಂಯುಕ್ತಾ ಪಾಟೀಲ್‌
ಧಾರವಾಡ – ವಿನೋದ್‌ ಅಸೂಟಿ
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
ಕೊಪ್ಪಳ – ರಾಜಶೇಖರ ಹಿಟ್ನಾಳ್‌
ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
ಬೀದರ್‌ – ಸಾಗರ್‌ ಖಂಡ್ರೆ
ದಕ್ಷಿಣ ಕನ್ನಡ – ಪದ್ಮರಾಜ್‌
ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್‌ ಹೆಗ್ಡೆ
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಬೆಂಗಳೂರು ಸೆಂಟ್ರಲ್‌ -ಮನ್ಸೂರ್‌ ಅಲಿಖಾನ್‌
ಬೆಂಗಳೂರು ಉತ್ತರ -ಪ್ರೊ.ರಾಜೀವ್‌ ಗೌಡ
ಮೈಸೂರು -ಎಂ.ಲಕ್ಷ್ಮಣ್‌
ರಾಯಚೂರು -ಜಿ.ಕುಮಾರ ನಾಯಕ್‌
ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್‌
ಶಿವಮೊಗ್ಗ-ಗೀತಾ ಶಿವರಾಜ್​ ಕುಮಾರ್
ತುಮಕೂರು-ಎಸ್​ಪಿ ಮುದ್ದಹನುಮೇಗೌಡ
ಮಂಡ್ಯ-ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)
ಹಾಸನ- ಶ್ರೇಯಸ್ ಪಟೇಲ್
ಬೆಂಗಳೂರು ಗ್ರಾಮಾಂತರ-ಡಿಕೆ ಸುರೇಶ್
ವಿಜಯಪುರ- ರಾಜು​ ಅಲಗೂರು
ಹಾವೇರಿ- ಆನಂದ ಸ್ವಾಮಿ ಗಡ್ಡದೇವರ ಮಠ

Exit mobile version