Site icon Vistara News

Lok Sabha Election 2024: ಮಹಾ ವಿಕಾಸ ಅಘಾಡಿ ಸೀಟು ಹಂಚಿಕೆ ಅಂತಿಮ; ಯಾರಿಗೆ ಎಷ್ಟು?

Maha vikasa Aghaadi

ಮುಂಬಯಿ: ಮಹಾರಾಷ್ಟ್ರದ (Maharashtra) ʼಮಹಾ ವಿಕಾಸ್ ಅಘಾಡಿʼ (Maha Vikas Aghadi) 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ರಾಜ್ಯದಲ್ಲಿ ಸೀಟು ಹಂಚಿಕೆ (Seat Sharing) ಸೂತ್ರವನ್ನು ಅಂತಿಮಗೊಳಿಸಿದೆ. ಒಪ್ಪಂದದಂತೆ ಶಿವಸೇನೆ (ಉದ್ಧವ್ ಠಾಕ್ರೆ ಬಣ – Shiv Sena (UBT) 21 ಸ್ಥಾನಗಳಲ್ಲಿ, ಕಾಂಗ್ರೆಸ್ (congress) 17 ಮತ್ತು ಎನ್‌ಸಿಪಿ (ಶರದ್‌ ಪವಾರ್‌ ಬಣ – NCP (SP) 10 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಸೇನಾ ಸಂಸದ ಸಂಜಯ್ ರಾವತ್ (Sanjay Raut) ಮಂಗಳವಾರ ಘೋಷಿಸಿದರು.

ಇದರೊಂದಿಗೆ ಮಹಾರಾಷ್ಟ್ರದ ಎಲ್ಲಾ 48 ಲೋಕಸಭಾ ಸ್ಥಾನಗಳ ಸೀಟು ಹಂಚಿಕೆ ಅಂತಿಮಗೊಂಡಿದೆ ಎಂದು ಸೇನಾ ನಾಯಕ ಸಂಜಯ್ ರಾವತ್ ಮಾಹಿತಿ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (NDA) ಸವಾಲು ಹಾಕಲು ಎಲ್ಲಾ ಮೂರು ಪಕ್ಷಗಳು ಸಜ್ಜಾಗಿದ್ದು, ಇವು ಪ್ರತಿಪಕ್ಷ ಒಕ್ಕೂಟ ಇಂಡಿಯಾ ಬ್ಲಾಕ್‌ (INDIA bloc) ಭಾಗವೂ ಆಗಿವೆ.

ಮಹಾರಾಷ್ಟ್ರವು 48 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಉತ್ತರ ಪ್ರದೇಶ (80) ನಂತರ ಎರಡನೇ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜ್ಯವಾಗಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ, ರಾಜ್ಯದಲ್ಲಿ ಬಿಜೆಪಿ 23 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಅದರ ಮೈತ್ರಿ ಪಾಲುದಾರ ಶಿವಸೇನೆ (ಆಗ ಅವಿಭಜಿತ) 18 ಸ್ಥಾನಗಳನ್ನು ಗೆದ್ದಿತ್ತು. ಆಗ ಅವಿಭಜಿತ ಎನ್‌ಸಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು ಮತ್ತು ಕಾಂಗ್ರೆಸ್ ಮತ್ತು ಎಐಎಂಐಎಂ ತಲಾ ಒಂದು ಸ್ಥಾನವನ್ನು ಗೆದ್ದಿದ್ದವು. ಒಂದು ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದರು.

ಅದಾದ ಮೇಲೆ ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಬದಲಾವಣೆಗಳು ಸಂಭವಿಸಿದ್ದು, ಶಿವಸೇನೆ ಎರಡು ಬಣಗಳಾಗಿವೆ. ಎನ್‌ಸಿಪಿಯೂ ಎರಡು ಬಣಗಳಾಗಿವೆ. ಶಿವಸೇನೆ ಹಾಗೂ ಎನ್‌ಸಿಪಿಯ ಒಂದೊಂದು ಬಣ ಬಿಜೆಪಿಯ ಜೊತೆಗಿದ್ದರೆ, ಇನ್ನೊಂದೊಂದು ಬಣಗಳು ಇಂಡಿಯಾ ಬ್ಲಾಕ್‌ನಲ್ಲಿವೆ.

ಮೂರೂ ಪಕ್ಷಗಳ ನಾಯಕರು ಸೇರಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಉಪಸ್ಥಿತರಿದ್ದರು. “ಯಾವುದೇ ಸ್ಥಾನದ ಬಗ್ಗೆ ಹೆಚ್ಚಿನ ಭಿನ್ನಾಭಿಪ್ರಾಯಗಳಿಲ್ಲ. ಪರಸ್ಪರ ಒಪ್ಪಂದದ ನಂತರ ನಾವು ಸೀಟು ಹಂಚಿಕೆಯನ್ನು ಘೋಷಿಸಿದ್ದೇವೆ” ಎಂದು ಶರದ್ ಪವಾರ್ ಹೇಳಿದ್ದಾರೆ. “ನಾವು ಕೆಲವು ಮಾನದಂಡಗಳ ಮೇಲೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದೇವೆ ಮತ್ತು ಸೀಟುಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ” ಎಂದು ಠಾಕ್ರೆ ಹೇಳಿದರು.

“ಪಕ್ಷವು ಸರ್ವಾಧಿಕಾರಿ ಆಡಳಿತವನ್ನು ಕೊನೆಗೊಳಿಸಲು ಹೋರಾಡುತ್ತಿದೆ. ಆದ್ದರಿಂದ ನಾವು ವಿಶಾಲ ಹೃದಯವನ್ನು ತೋರಿಸಿದ್ದು, ವಿವಾದಿತ ಸ್ಥಾನಗಳ ಮೇಲಿನ ಹಕ್ಕನ್ನು ತ್ಯಜಿಸಿದ್ದೇವೆ” ಎಂದು ಕಾಂಗ್ರೆಸ್‌ನ ನಾನಾ ಪಟೋಲೆ ಹೇಳಿದ್ದಾರೆ. “”ನಮ್ಮೊಂದಿಗೆ ಮೂಲ ಶಿವಸೇನೆ ಮತ್ತು ಎನ್‌ಸಿಪಿ ಇರುವುದರಿಂದ ಎಲ್ಲಾ ಮೂರು ಪಕ್ಷಗಳ ಮತಗಳು ಸೇರಲಿವೆ” ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ಮೊದಲ ಐದು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 19ರಿಂದ ಆರಂಭವಾಗಲಿದೆ. ಬಿಜೆಪಿ ತನ್ನ ಮೈತ್ರಿ ಪಕ್ಷಗಳ ಜೊತೆ ಸೀಟ್‌ ಶೇರಿಂಗ್‌ ಈಗಾಗಲೇ ಅಂತಿಮಗೊಳಿಸಿದೆ. ಸುದೀರ್ಘ ಚರ್ಚೆಗಳ ನಂತರ ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಒಳಗೊಂಡ ʼಮಹಾಯುತಿ ಮೈತ್ರಿʼಯು ಸೀಟು ಹಂಚಿಕೆ ಮಾತುಕತೆಯಲ್ಲಿ ಅಂತಿಮ ನೆಲೆಗೆ ಬಂದಿವೆ. ಅಜಿತ್ ಪವಾರ್ ಅವರ ಎನ್‌ಸಿಪಿ ಬಣ ನಾಲ್ಕು ಕಡೆಗಳಲ್ಲಿ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಲಿದೆ. ಇಲ್ಲಿಯವರೆಗಿನ ಮಾತುಕತೆಗಳ ಪ್ರಕಾರ, ಶರದ್ ಪವಾರ್ ಅವರ ಸೋದರಳಿಯ ಅಜಿತ್, ಬಾರಾಮತಿ, ರಾಯ್‌ಗಢ, ಶಿರೂರು ಮತ್ತು ಪರ್ಭಾನಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ.‌ ಬಿಜೆಪಿ 31 ಸ್ಥಾನಗಳನ್ನು ಪಡೆಯಲಿದ್ದು, ಶಿವಸೇನೆ 13 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಇದನ್ನೂ ಓದಿ: Lok Sabha Election 2024: ಮಹಾರಾಷ್ಟ್ರದಿಂದ ನೀರು ಕೊಡಿ ಪ್ಲೀಸ್;‌ ಪ್ರಚಾರ ಕೈಬಿಟ್ಟು ಫಡ್ನವೀಸ್‌ ಭೇಟಿ ಮಾಡಿದ ಜೊಲ್ಲೆ!

Exit mobile version