Site icon Vistara News

Lok Sabha Election 2024: ಲೋಕಸಭೆ ಚುನಾವಣೆ ಸ್ಪರ್ಧೆಯಿಂದ ಹಿಂದೆಗೆದ ಮಲ್ಲಿಕಾರ್ಜುನ ಖರ್ಗೆ! ಕಾರಣವೇನು?

kharge

ಹೊಸದಿಲ್ಲಿ: ಕಾಂಗ್ರೆಸ್ ಮುಖ್ಯಸ್ಥ (AICC President) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸದಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಇದು ಪಕ್ಷದ ಒಳಗೆ ಹಾಗೂ ಹೊರಗೆ ಹಲವು ಬಗೆಯ ಸಂದೇಶವನ್ನು ರವಾನಿಸಲಿದೆ.

ಯುದ್ಧಭೂಮಿಗೆ ಸೈನ್ಯ ಇಳಿದಾಗ ಅದರ ಜನರಲ್ ಕಾಣೆಯಾಗಬಾರದು, ಮುಂಭಾಗದಿಂದ ಸೇನೆಯನ್ನು ಮುನ್ನಡೆಸಬೇಕೆಂದು ಪಕ್ಷ ಪ್ರತಿಪಾದಿಸುತ್ತದೆ. ಆದರೆ ಪಕ್ಷದ ಹೈಕಮಾಂಡ್‌ ಹೊಣೆ ಹೊತ್ತಿರುವ ಖರ್ಗೆ ಮತ್ತು ಸೋನಿಯಾ ಗಾಂಧಿ (Sonia Gandhi) ಮತ್ತಿತರರ ಬಯಕೆಯಂತೆ, ಪಕ್ಷದ ಮುಖ್ಯಸ್ಥರಾದ ಅವರು ಈಗ ತಮ್ಮ ವೈಯಕ್ತಿಕ ಪ್ರಚಾರದಲ್ಲಿ ತೊಡಗಿಸಿಕೊಳ್ಳದೆ ಇಡೀ ದೇಶದಲ್ಲಿ ಪಕ್ಷದ ಸ್ಪರ್ಧೆಯ ಹೊಣೆಯನ್ನು ನೋಡಿಕೊಳ್ಳಬೇಕು.

ಕಳೆದ ವಾರ ಗುಲ್ಬರ್ಗ ಲೋಕಸಭೆ ಕ್ಷೇತ್ರದ ಕುರಿತು ಚರ್ಚೆ ನಡೆದಿದ್ದು, ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಅವಿರೋಧವಾಗಿತ್ತು. ಆದರೆ ಅವರು ಇದನ್ನು ಒಪ್ಪಿಲ್ಲ. ಖರ್ಗೆಯವರು ತಮ್ಮ ಅಳಿಯ ರಾಧಾಕೃಷ್ಣನ್ ದೊಡ್ಡಮನಿ ಅವರನ್ನು ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.

ಖರ್ಗೆ ಅವರು ಗುಲ್ಬರ್ಗಾ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದರು. 2019ರಲ್ಲಿ ಸೋತರು. ನಂತರ ಅವರು ರಾಜ್ಯಸಭೆಯಲ್ಲಿದ್ದು, ಅಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗೆ ಮೇಲ್ಮನೆಯಲ್ಲಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. “ತಾವು ಒಂದು ಕ್ಷೇತ್ರಕ್ಕೆ ಸೀಮಿತವಾಗಲು ಬಯಸುವುದಿಲ್ಲ. ದೇಶಾದ್ಯಂತ ಕೇಂದ್ರೀಕರಿಸಲು ಬಯಸುತ್ತೇನೆ” ಎಂದು ಮಲ್ಲಿಕಾರ್ಜು ಖರ್ಗೆ ಈ ಹಿಂದೆ ಹೇಳಿದ್ದರು.

ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ (Priyank Kharge) ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ವರದಿಗಳು ಹೇಳಿವೆ. ಸಾರ್ವತ್ರಿಕ ಚುನಾವಣೆಗಾಗಿ ರಾಜ್ಯದ ಜನಪ್ರಿಯ ಮಂತ್ರಿಯೊಬ್ಬರನ್ನು ಕೆಳಗಿಳಿಸಿ ಸ್ಪರ್ಧೆಗಿಳಿಸುವುದು ಕಾಂಗ್ರೆಸ್‌ಗೆ ವಾಸ್ತವವಾಗಿ ಇಷ್ಟವಿಲ್ಲ.

ಪಕ್ಷದ ಅಧ್ಯಕ್ಷರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಾರದು ಎಂದೇನೂ ಇಲ್ಲ. ಸಾಕಷ್ಟು ಮಂದಿ ಸ್ಪರ್ಧಿಸಿದ ಇತಿಹಾಸ ಇದೆ. ಇತ್ತೀಚಿನ ವರ್ಷಗಳಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ (Rahul Gandhi) ಇಬ್ಬರೂ ಸ್ಪರ್ಧಿಸಿದ್ದಾರೆ ಮತ್ತು ಗೆದ್ದಿದ್ದಾರೆ. ರಾಹುಲ್‌ ಗಾಂಧಿ ಅವರು 2019ರಲ್ಲಿ ಸ್ಮೃತಿ ಇರಾನಿ ಎದುರು ತಮ್ಮ ಪಕ್ಷದ ಭದ್ರಕೋಟೆ ಅಮೇಠಿಯನ್ನು ಕಳೆದುಕೊಂಡಿದ್ದಾರೆ.

ಬಿಜೆಪಿಯಲ್ಲಿಯೂ ಸಹ, ಈ ವರ್ಷ ಜೆಪಿ ನಡ್ಡಾ ಸ್ಪರ್ಧಿಸದಿದ್ದರೂ, 2014 ಮತ್ತು 2019ರಲ್ಲಿ, ಆಗಿನ ಬಿಜೆಪಿ ಮುಖ್ಯಸ್ಥರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ (Amit Shah) ಲಖನೌ ಮತ್ತು ಗಾಂಧಿನಗರದಿಂದ ಭಾರಿ ಗೆಲುವು ಸಾಧಿಸಿದ್ದರು.

ಇಂಡಿಯಾ ಮೈತ್ರಿಕೂಟದ ಕೊನೆಯ ಸಭೆಯಲ್ಲಿ, ಖರ್ಗೆ ಅವರನ್ನು ಬಣದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಬಿಂಬಿಸಿದ್ದರು. ಇದಕ್ಕೆ ಮೈತ್ರಿಕೂಟದೊಳಗೇ ಅಸಮಾಧಾನ ವ್ಯಕ್ತವಾಗಿತ್ತು. ಥಟ್ಟನೆ ಖರ್ಗೆಯವರು ಇದನ್ನು ನಿರಾಕರಿಸಿದ್ದರು. ಚುನಾವಣೆ ಮುಗಿದ ಮೇಲೆ ಈ ಬಗ್ಗೆ ಚರ್ಚೆ ನಡೆಸಬಹುದು ಎಂದಿದ್ದರು.

ಇದನ್ನೂ ಓದಿ: Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಫೈನಲ್‌; ದೆಹಲಿ ಮೀಟಿಂಗ್‌ ಬಳಿಕ ಪ್ರಕಟ ಎಂದ ಡಿಕೆಶಿ

Exit mobile version