ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತೆ ಆರಿಸಿ ಬರಲಿದ್ದಾರೆ. ನಾವು 400ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯಲಿದ್ದೇವೆ” ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
ಅವರು ಸಿಎನ್ಎನ್-ನ್ಯೂಸ್ 18 ವಾಹಿನಿಗಳು ಏರ್ಪಡಿಸಿದ್ದ ʼರೈಸಿಂಗ್ ಭಾರತ್ ಶೃಂಗಸಭೆ 2024ʼರಲ್ಲಿ ಭಾಗವಹಿಸಿ ಮಾತನಾಡಿದರು. “ಪ್ರಧಾನಿ ಮೋದಿಯವರಿಗೆ ಸಬ್‌ಕಾ ಸಾಥ್, ಸಬ್‌ಕಾ ವಿಕಾಸದ ದೂರದೃಷ್ಟಿ ಇದೆ. ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಎನ್‌ಡಿಎ 400ರ ಗಡಿ ದಾಟಲಿದೆ” ಎಂದವರು ನುಡಿದರು.
“ಇದೀಗ ನಾವು ಮುಂಬಯಿಯಿಂದ ಕೇವಲ 40 ನಿಮಿಷಗಳಲ್ಲಿ ನವಮುಂಬಯಿ ವಿಮಾನ ನಿಲ್ದಾಣವನ್ನು ತಲುಪಲು ಅಗತ್ಯವಾದ ಮೂಲಸೌಕರ್ಯಗಳನ್ನು ರಚಿಸುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ.ಗಳ ಕಾಮಗಾರಿ ನಡೆದಿದೆ. ಇ-ಟೆಂಡರ್ ಇಲ್ಲದೆ ಒಂದೇ ಒಂದು ಯೋಜನೆಯೂ ನಡೆದಿಲ್ಲ. ಪ್ರತಿಯೊಂದು ಯೋಜನೆಯನ್ನೂ ಪಾರದರ್ಶಕ ಮತ್ತು ಭ್ರಷ್ಟಾಚಾರರಹಿತ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿದೆ” ಎಂದು ಗಡ್ಕರಿ ಹೇಳಿದರು.
ಇದೇ ಸಮಾವೇಶದಲ್ಲಿ ಭಾಗವಹಿಸಿದ ಕೇಂದ್ರ ರೈಲ್ವೆ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್, “ಭಾರತದ ಮೊದಲ ಬುಲೆಟ್ ರೈಲು 2026ರಲ್ಲಿ ಸಿದ್ಧವಾಗಲಿದೆ. ಅದು ಸೂರತ್‌ನಿಂದ ಒಂದು ವಿಭಾಗದಲ್ಲಿ ಓಡಲಿದೆ” ಎಂದು ಹೇಳಿದ್ದಾರೆ. “ರೈಲ್ವೆಯಿಂದ ಸುಧಾರಿತ ಯೋಜನೆಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಎಲ್ಲಾ ಹಂತಗಳಲ್ಲಿ ಕಠಿಣ ಪರಿಶ್ರಮ ಮತ್ತು ಸಂವಹನದ ಅಗತ್ಯವಿದೆ. 1980ರ ದಶಕದಲ್ಲಿ ಇತರ ದೇಶಗಳಲ್ಲಿ ಸ್ವಯಂಚಾಲಿತ ರೈಲು ರಕ್ಷಣೆ ಬಂದಿತು. ಆದರೆ ಆಗಿನ ಸರ್ಕಾರ ಅದನ್ನು ಭಾರತದಲ್ಲಿ ತರಲಿಲ್ಲ. ಅವರು ಸುರಕ್ಷತೆಯ ಮೇಲೆ ಹೂಡಿಕೆ ಮಾಡಲಿಲ್ಲ. ಪ್ರಧಾನಿ ಮೋದಿ ಅವರು ಸ್ವಯಂಚಾಲಿತ ರೈಲು ರಕ್ಷಣೆಯನ್ನು 2016ರಲ್ಲಿ ತಂದರು” ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ʼರೈಸಿಂಗ್ ಭಾರತ್ ಶೃಂಗಸಭೆ 2024ʼ ನಾಲ್ಕನೇ ಆವೃತ್ತಿಯಾಗಿದ್ದು, ಮಾರ್ಚ್ 19-20ರಂದು ನವದೆಹಲಿಯಲ್ಲಿ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದನ್ನು ಉದ್ದೇಶಿಸಿ ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ರಾಜಕೀಯ, ಕಲೆ, ಕಾರ್ಪೊರೇಟ್ ಜಗತ್ತು, ಮನರಂಜನೆ ಮತ್ತು ಕ್ರೀಡಾ ಕ್ಷೇತ್ರದ ಹಲವಾರು ಪ್ರಮುಖರು ಈವೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಎರಡು ದಿನಗಳ ರೈಸಿಂಗ್ ಭಾರತ್ ಶೃಂಗಸಭೆ 2024ರ ಮೊದಲ ದಿನವು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಅಶ್ವಿನಿ ವೈಷ್ಣವ್ ಅವರ ಉಪಸ್ಥಿತಿಗೆ ಸಾಕ್ಷಿಯಾಯಿತು. ಅಯೋಧ್ಯೆಯ ಭವ್ಯವಾದ ರಾಮಮಂದಿರದ ವಾಸ್ತುಶಿಲ್ಪಿ ಆಶಿಶ್ ಸೋಂಪುರ, ಇತಿಹಾಸಕಾರ ಮತ್ತು ರಾಮ್ ಲಲ್ಲಾ ವಿಗ್ರಹ ಆಭರಣ ವಿನ್ಯಾಸಕ ಯತೀಂದರ್ ಮಿಶ್ರಾ ಅವರು ಆಧ್ಯಾತ್ಮಿಕತೆಯ ಮಾತನಾಡಿದರು. ಶೃಂಗಸಭೆಯ ಮೊದಲ ದಿನವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ʼನಯಾ ಭಾರತ್, ಉಭರ್ತ ಭಾರತ’ ಕುರಿತು ಪ್ರಮುಖ ಭಾಷಣದ ನಂತರ ಮುಕ್ತಾಯಗೊಳ್ಳಲಿದೆ.
ಶೃಂಗಸಭೆಯ ಎರಡನೇ ದಿನದಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತದ ವರ್ತಮಾನದ ಮತ್ತು ಮುಂಬರುವ ವರ್ಷಗಳಲ್ಲಿ ಅದರ ಬೆಳವಣಿಗೆಯ ಬಗ್ಗೆ ಮಾತನಾಡಲಿದ್ದಾರೆ. ಕ್ರಿಕೆಟ್ ಜಗತ್ತಿನ ಜನಪ್ರಿಯರಾದ ಮುಖಗಳಾದ ಎಬಿ ಡಿವಿಲಿಯರ್ಸ್, ಬ್ರೆಟ್ ಲೀ, ಆಕಾಶ್ ಚೋಪ್ರಾ ಮತ್ತು ಅಂಜುಮ್ ಚೋಪ್ರಾ ಕೂಡ ಭಾಗವಹಿಸಲಿದ್ದಾರೆ.