Site icon Vistara News

Lok Sabha Election 2024: ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರಿಲ್ಲ; ರಾಜೀವ್‌ ಚಂದ್ರಶೇಖರ್‌ಗೆ ತಿರುವನಂತಪುರ ಟಿಕೆಟ್‌

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಈ ಬಾರಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ರಣ ತಂತ್ರ ರೂಪಿಸುತ್ತಿರುವ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್‌ ಮಾಡಿದೆ. ಆದರೆ, ಕರ್ನಾಟಕದ ಒಂದೇ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಸಹ ಪ್ರಕಟ ಮಾಡಿಲ್ಲ. ಕರ್ನಾಟಕದಲ್ಲಿ ಒಬ್ಬರು ಸಂಪುಟ ದರ್ಜೆ ಸಚಿವರು, ಮೂವರು ರಾಜ್ಯ ದರ್ಜೆ ಸಚಿವರು ಇದ್ದರೂ ಯಾವೊಬ್ಬರ ಹೆಸರನ್ನು ಸಹ ಪ್ರಕಟ ಮಾಡದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕವೇ ದೊಡ್ಡ ರಾಜ್ಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 25 + 1 ಸೀಟನ್ನು ಗೆದ್ದಿರುವ ಬಿಜೆಪಿಯು ಈ ಬಾರಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಬೇಕೆಂಬ ನಿಟ್ಟಿನಲ್ಲಿ ರಣತಂತ್ರವನ್ನು ಹೆಣೆಯುತ್ತಿದೆ. ಆದರೆ, ಈಗ ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ ಎನ್ನಲಾಗಿದೆ. ಅಲ್ಲದೆ, ಈಗಾಗಲೇ ಕೆಲವು ಹಾಲಿ ಸಂಸದರು ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿರುವುದರಿಂದ ಕೆಲವು ಕಡೆ ಹೊಸ ಅಭ್ಯರ್ಥಿಗಳನ್ನು ಹಾಕಬೇಕಿದೆ.

ಬಿಜೆಪಿಯಲ್ಲಿ ಶುರುವಾಗಿದೆ ಟಿಕೆಟ್‌ ಲಾಬಿ

ಇನ್ನು ರಾಜ್ಯ ಬಿಜೆಪಿಯಲ್ಲಿ ಟಿಕೆಟ್‌ ಲಾಬಿ ಜೋರಾಗಿಯೇ ನಡೆಯುತ್ತಿದೆ. ಕೆಲವು ಕಡೆ ಅಭ್ಯರ್ಥಿಗಳು ಚುನಾವಣಾ ನಿವೃತ್ತಿ ಘೋಷಣೆ ಮಾಡಿರುವುದರಿಂದ ಅಲ್ಲಿಗೆ ಯಾರು ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಹಲವು ತಮ್ಮ ಆಕಾಂಕ್ಷೆಯನ್ನು ಹೈಕಮಾಂಡ್‌ ಮುಂದಿಟ್ಟಿದೆ. ಇನ್ನು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಬೇಕೆಂದು ಗುರಿ ಇಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್‌ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಡಲು ಮುಂದಾಗಿದೆ. ಹೀಗಾಗಿ ಅಳೆದೂ ತೂಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: BJP Candidates List: ಲೋಕಸಭೆಗೆ ಬಿಜೆಪಿಯ 195 ಅಭ್ಯರ್ಥಿಗಳ ಪಟ್ಟಿ ರಿಲೀಸ್; ಇವರೇ ಕ್ಯಾಂಡಿಡೇಟ್ಸ್

ರಾಜೀವ್‌ ಚಂದ್ರಶೇಖರ್‌ಗೆ ತಿರುವನಂತಪುರ ಟಿಕೆಟ್‌

ಇನ್ನು ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್‌ ಅವರನ್ನು ಈ ಬಾರಿ ಆಯ್ಕೆ ಮಾಡಿರಲಿಲ್ಲ. ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಅವರಿಗೆ ತಿರುವನಂತಪುರದಲ್ಲಿ ಸ್ಪರ್ಧೆ ಮಾಡುವಂತೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಘೋಷಣೆಯಾಗದ ಕೇಂದ್ರ ಸಚಿವರ ಟಿಕೆಟ್

ಇನ್ನು ಕೇಂದ್ರ ಸಚಿವ ಸಂಪುಟ ದರ್ಜೆ ಸಚಿವರಾಗಿರುವ ಪ್ರಲ್ಹಾದ್‌ ಜೋಶಿ, ರಾಜ್ಯ ದರ್ಜೆ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ ಹಾಗೂ ಭಗವಂತ ಖೂಬಾ ಅವರ ಹೆಸರನ್ನು ಸಹ ಮೊದಲ ಪಟ್ಟಿಯಲ್ಲಿ ಪ್ರಕಟ ಮಾಡಿಲ್ಲ. ಹೀಗಾಗಿ ಕರ್ನಾಟಕ ರಾಜಕೀಯದ ಮಟ್ಟಿಗೆ ಬಿಜೆಪಿ ಹೈಕಮಾಂಡ್‌ ನಡೆ ಕುತೂಹಲಕ್ಕೆ ಕಾರಣವಾಗಿದೆ.

Exit mobile version