Site icon Vistara News

Lok Sabha Election 2024: ಮೊದಲ ಹಂತದ ಮತದಾನ; ಪಶ್ಚಿಮ ಬಂಗಾಲ, ಮಣಿಪುರ, ಛತ್ತೀಸ್‌ಗಢದಲ್ಲಿ ಹಿಂಸಾಚಾರ

lok sabha election 2024 1st phase voting

ಹೊಸದಿಲ್ಲಿ: ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (1st phase voting) 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಲ್ಲಿ ನಡೆಯುತ್ತಿದ್ದು, ಪಶ್ಚಿಮ ಬಂಗಾಲ (West bengal) ಮತ್ತು ಮಣಿಪುರದಲ್ಲಿ (Manipur) ಹಿಂಸಾಚಾರ (poll violence) ವರದಿಯಾಗಿದೆ. ಮತದಾನದ ಪ್ರಮಾಣ ಇಲ್ಲಿಯವರೆಗೆ ಚುರುಕಾಗಿದೆ.

ಪಶ್ಚಿಮ ಬಂಗಾಲದ ಚಾಂದಮಾರಿಯಲ್ಲಿ ಜನರು ಮತದಾನ ಮಾಡದಂತೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಬೇಗರ್ಕತದ ಜನರು ತಮ್ಮ ಮತ ಚಲಾಯಿಸದಂತೆ ಬಿಜೆಪಿ ಸದಸ್ಯರು ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಬೆಳಗ್ಗೆ 10 ಗಂಟೆಯ ವೇಳೆಗೆ ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂಸಾಚಾರದ ಕುರಿತು ಚುನಾವಣಾ ಆಯೋಗಕ್ಕೆ ಹತ್ತಾರು ದೂರುಗಳನ್ನು ದಾಖಲಿಸಿದ್ದು, ಈ ಪೈಕಿ ಬಹುತೇಕ ದೂರುಗಳು ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿವೆ. ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್ಕುಚಿಯಲ್ಲಿ ಬಿಜೆಪಿ ಬೆಂಬಲಿಗರು ತಮ್ಮ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದಾರೆ ಮತ್ತು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಇದೇ ವೇಳೆ ಅಪರಿಚಿತ ದುಷ್ಕರ್ಮಿಗಳು ಥಮನ್‌ಪೋಕ್ಪಿಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಭಾರೀ ಗಲಭೆಗಳಿಗೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಇಂದು ಮತ್ತೆ ಹಿಂಸಾಚಾರ ಘಟನೆ ಸಂಭವಿಸಿದೆ. ಮತದಾನ ನಡೆಯುವ ವೇಳೆ ಗುಂಡಿನ ದಾಳಿ ನಡೆದಿದೆ. ಪೂರ್ವ ಇಂಫಾಲ್‌ನ ಮತಗಟ್ಟೆಯೊಂದರಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಆಗ ರಕ್ಷಣಾ ಸಿಬ್ಬಂದಿ ಸಹ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಘಟನೆಯಿಂದ ಆತಂಕಗೊಂಡ ಮತದಾರರು ಸ್ಥಳದಿಂದ ಪಾರಾಗಲು ಓಡಿದ್ದಾರೆ.

ನಕ್ಸಲ್‌ಪೀಡಿತ ಛತ್ತೀಸ್‌ಗಢದ ಬಸ್ತಾರ್ ಪ್ರಾಂತ್ಯದಲ್ಲಿನ ಬಿಜಾಪುರ್ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿ ಶುಕ್ರವಾರ ಬೆಳಗ್ಗೆ ಗ್ರನೇಡ್ ಸ್ಫೋಟ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಈ ಪ್ರದೇಶದ ಸುಪರ್ದಿ ತೆಗೆದುಕೊಳ್ಳುತ್ತಿದ್ದ ಭದ್ರತಾ ತಂಡದ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಲ್ಗಾಮ್ ಪ್ರದೇಶದ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿ ಗ್ರೆನೇಡ್ ಲಾಂಚರ್ (UBGL) ಸೆಲ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

ಹಿಂಸಾಚಾರದ ಹೊರತಾಗಿಯೂ, ಪಶ್ಚಿಮ ಬಂಗಾಲದಲ್ಲಿ ಇದುವರೆಗೆ 50.96% ಮತದಾನ ದಾಖಲಾದೆ. ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ.

ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, ಅವರ ಪುತ್ರ ಹಾಗೂ ಶಿವಗಂಗಾ ಅಭ್ಯರ್ಥಿ ಕಾರ್ತಿ ಚಿದಂಬರಂ, ಖ್ಯಾತ ನಟ ರಜನಿಕಾಂತ್, ಕಮಲಹಾಸನ್‌, ವಿಜಯ್‌ ಸೇತುಪತಿ, ಅಣ್ಣಾಮಲೈ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಮತ್ತು ವ್ಯಕ್ತಿಗಳು ಮತ ಚಲಾಯಿಸಿದ್ದಾರೆ. ಯೋಗ ಗುರು ಬಾಬಾ ರಾಮದೇವ್ ಮತ್ತು ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಉತ್ತರಾಖಂಡದ ಹರಿದ್ವಾರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆ ಮೊದಲ ಹಂತದಲ್ಲಿ ಪ್ರಬಲ ಪೈಪೋಟಿಯ ಟಾಪ್ 10 ಕ್ಷೇತ್ರಗಳಿವು

Exit mobile version