ಹೊಸದಿಲ್ಲಿ: ಎಕ್ಸಿಟ್ ಪೋಲ್ 2024ರ (Exit poll 2024) ಫಲಿತಾಂಶಗಳ ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು, ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಗೆಲುವು ಖಚಿತ ಎಂದು ಚುನಾವಣಾ ವ್ಯೂಹಚತುರ ಪ್ರಶಾಂತ್ ಕಿಶೋರ್ (Prashant Kishor) ಪುನರುಚ್ಚರಿಸಿದ್ದಾರೆ. ಅವರು ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಭಾರತೀಯ ಜನತಾ ಪಾರ್ಟಿ (BJP) ನೇತೃತ್ವದ ಎನ್‌ಡಿಎ (NDA) ಕಾರ್ಯಕ್ಷಮತೆಯ ಬಗ್ಗೆ ತಮ್ಮ ಭವಿಷ್ಯವನ್ನು ಮತ್ತೆ ಒತ್ತಿ ಹೇಳಿದ್ದಾರೆ.
ಮತ್ತೊಮ್ಮೆ ಬಿಜೆಪಿ 303 ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಗೆದ್ದಿರುವ ಸ್ಥಾನಗಳ ಸಂಖ್ಯೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು. “ನನ್ನ ಅಂದಾಜಿನ ಪ್ರಕಾರ, ಬಿಜೆಪಿ ಹಿಂದಿನ ಅಥವಾ ಸ್ವಲ್ಪ ಹೆಚ್ಚಿನ ಸಂಖ್ಯೆಗಳೊಂದಿಗೆ ಅಧಿಕಾರಕ್ಕೆ ಹಿಂತಿರುಗಲಿದೆ. ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಆಗದು. ಆದರೆ ಭಾರತದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಿಂದ ಪಕ್ಷವು ಸಾಕಷ್ಟು ಬೆಂಬಲ ಗಳಿಸಲಿದೆ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಜೂನ್ 1ರ ಶನಿವಾರ ಸಾರ್ವತ್ರಿಕ ಚುನಾವಣೆಯ 7ನೇ ಹಂತದ ಮತದಾನದ ಮುಕ್ತಾಯದ ನಂತರ, ಹಲವಾರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ವಾಹಿನಿಗಳು, ಚುನಾವಣಾ ಸಮೀಕ್ಷೆ ಏಜೆನ್ಸಿಗಳೊಂದಿಗೆ ತಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಸಂಜೆ 6.30ರ ಸುಮಾರಿಗೆ ಬಿಡುಗಡೆ ಮಾಡಲು ಸಿದ್ಧವಾಗಿವೆ.
ಪ್ರಶಾಂತ್ ಕಿಶೋರ್ ಅವರು ಪೂರ್ವ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಮತ್ತು ಮತ ಹಂಚಿಕೆಯಲ್ಲಿ ಸಂಭಾವ್ಯ ಏರಿಕೆಯನ್ನು ಸೂಚಿಸಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳಲ್ಲಿ ತನ್ನ ಅಸ್ತಿತ್ವವನ್ನು ಪಕ್ಷ ಹೆಚ್ಚಿಸಿಕೊಂಡಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಬಗ್ಗೆ ಯಾವುದೇ ಗಮನಾರ್ಹ ಅತೃಪ್ತಿ ಇಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಪರ್ಯಾಯಕ್ಕಾಗಿ ಬಲವಾದ ಬೇಡಿಕೆ ಇಲ್ಲ ಎಂದು ರಾಜಕೀಯ ತಂತ್ರಜ್ಞ ಪಿಕೆ ಈ ಹಿಂದೆ ಹೇಳಿಕೊಂಡಿದ್ದರು. ಕೇಸರಿ ಪಕ್ಷದ ಸ್ಥಾನಗಳ ಸಂಖ್ಯೆ 2019ರ ಲೆಕ್ಕಾಚಾರಕ್ಕೆ (303) ಹತ್ತಿರವಾಗಬಹುದು ಅಥವಾ ಮೀರಬಹುದು ಎಂದು ಭವಿಷ್ಯ ನುಡಿದಿದ್ದರು.
“ನಾವು ಕೆಲವು ಮೂಲಭೂತ ಅಂಶಗಳನ್ನು ನೋಡಬೇಕು. ಅಧಿಕಾರದಲ್ಲಿರುವ ಸರ್ಕಾರ ಮತ್ತು ಅದರ ನಾಯಕನ ವಿರುದ್ಧ ಕೋಪವಿದ್ದರೆ, ಪರ್ಯಾಯವಿದೆಯೇ ಎಂಬುದನ್ನು ಲೆಕ್ಕಿಸದೆ, ಜನರು ಅವರ ವಿರುದ್ಧ ಮತ ಹಾಕುವ ಸಾಧ್ಯತೆಯಿದೆ. ಆದರೆ ಇಲ್ಲಿಯವರೆಗೆ ಅಂಥ ಅಲೆಯನ್ನು ನಾವು ಕಂಡಿಲ್ಲ. ಮೋದಿಜಿ ವಿರುದ್ಧ ವ್ಯಾಪಕವಾದ ನಿರಾಶೆ, ಈಡೇರದ ಆಕಾಂಕ್ಷೆಗಳು ಇರಬಹುದು, ಆದರೆ ವ್ಯಾಪಕವಾದ ಕೋಪವನ್ನು ನಾವು ಕೇಳಿಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಶನಿವಾರದ ಮತದಾನದೊಂದಿಗೆ, ಏಪ್ರಿಲ್ 19ರಂದು ಪ್ರಾರಂಭವಾದ ಮ್ಯಾರಥಾನ್ ಸರಣಿ ಮತದಾನದ ಪ್ರಕ್ರಿಯೆ ಮುಗಿಯುತ್ತಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಅಸೆಂಬ್ಲಿಗಳು ಸಹ ಚುನಾವಣೆಗೆ ಹೋಗಿವೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಜೂನ್ 2ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.
ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜವಾಬ್ದಾರಿಯಿಂದ ಮತ್ತು ಹೆಮ್ಮೆಯಿಂದ ಮತ ಚಲಾಯಿಸುವಂತೆ ಚುನಾವಣಾ ಆಯೋಗ ಕರೆ ನೀಡಿದೆ. ಸಾರ್ವತ್ರಿಕ ಚುನಾವಣೆಯ ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇ.66.14, ಶೇ.66.71, ಶೇ.65.68, ಶೇ.69.16, ಶೇ.62.2, ಮತ್ತು ಶೇ.63.36ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ದೂರದರ್ಶನ ಚಾನೆಲ್‌ಗಳು ಮತ್ತು ಸುದ್ದಿವಾಹಿನಿಗಳು ಸಂಜೆ 6.30ರ ನಂತರ ಎಕ್ಸಿಟ್ ಪೋಲ್ ಡೇಟಾವನ್ನು ಮತ್ತು ಅದರ ಫಲಿತಾಂಶಗಳನ್ನು ಪ್ರಕಟಿಸಲಿವೆ.
ಇದನ್ನೂ ಓದಿ: Lok Sabha Election: ಪ್ರಶಾಂತ್ ಕಿಶೋರ್ ಬಳಿಕ ಯೋಗೇಂದ್ರ ಯಾದವ್ ಕೂಡ ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ ಅಂತಿದ್ದಾರೆ!