ಪಾಟ್ನಾ: ಬಡ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ಧನಸಹಾಯ, ರಾಜ್ಯದಲ್ಲಿ 5 ಹೊಸ ವಿಮಾನ ನಿಲ್ದಾಣ (Airport) ಸೇರಿದಂತೆ ಹಲವು ಉಚಿತಗಳ ಭರವಸೆಗಳನ್ನು ಹೊಂದಿರುವ ಪಕ್ಷದ ಪ್ರಣಾಳಿಕೆಯನ್ನು (Manifesto) ಬಿಹಾರ (Bihar) ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tajaswi Yadav) ಬಿಡುಗಡೆ ಮಾಡಿದ್ದಾರೆ. ಲೋಕಸಭೆ ಚುನಾವಣೆ (Lok Sabha election 2024) ನಿಮಿತ್ತ ರಾಷ್ಟ್ರೀಯ ಜನತಾ ದಳ (Rashtriya Janata Dal – RJD) ಪ್ರಣಾಳಿಕೆಯನ್ನು ಅವರು ಶನಿವಾರ ಬೆಳಿಗ್ಗೆ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಹೊಸ ಐದು ವಿಮಾನ ನಿಲ್ದಾಣಗಳನ್ನು ರಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಪಕ್ಷದ ಪ್ರಣಾಳಿಕೆ ‘ಪರಿವರ್ತನ್ ಪತ್ರ’ ಬಿಡುಗಡೆ ಮಾಡುತ್ತಾ, ಬಡ ಕುಟುಂಬಗಳ ʼಸಹೋದರಿಯರಿಗೆʼ ವರ್ಷಕ್ಕೆ ₹1 ಲಕ್ಷ ಹಣಕಾಸು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆರ್‌ಜೆಡಿ ಹಿರಿಯ ನಾಯಕರ ಸಮ್ಮುಖದಲ್ಲಿ ದಾಖಲೆ ಬಿಡುಗಡೆ ಮಾಡಿದ ತೇಜಸ್ವಿ ಯಾದವ್, ತಮ್ಮ ಪಕ್ಷವು ರಾಷ್ಟ್ರ ಮತ್ತು ಬಿಹಾರದ ಜನರಿಗೆ 24 ಭರವಸೆಗಳನ್ನು ನೀಡಿದೆ. ನಾವು ʼಪರಿವರ್ತನ್ ಪತ್ರ’ವನ್ನು ಬಿಡುಗಡೆ ಮಾಡಿದ್ದೇವೆ. ನಾವು 2024ಕ್ಕೆ 24 ʼಜನ್ ವಚನ’ (ಸಾರ್ವಜನಿಕ ಭರವಸೆ) ತಂದಿದ್ದೇವೆ. ಈ 24 ಜನವಚನಗಳು ನಾವು ಪೂರೈಸುವ ನಮ್ಮ ಬದ್ಧತೆಗಳಾಗಿವೆ ಎಂದಿದ್ದಾರೆ.
ಕೇಂದ್ರದಲ್ಲಿ ಇಂಡಿಯಾ ಬ್ಲಾಕ್ ಮೈತ್ರಿಕೂಟ ಸರ್ಕಾರ ರಚಿಸಿದರೆ, ಉತ್ತಮ ಸಂಪರ್ಕಕ್ಕಾಗಿ ಬಿಹಾರದಲ್ಲಿ ಐದು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣವನ್ನು ತಮ್ಮ ಪಕ್ಷ ಖಚಿತಪಡಿಸುತ್ತದೆ. ಪುರ್ನಿಯಾ, ಭಾಗಲ್ಪುರ್, ಮುಜಾಫರ್‌ಪುರ, ಗೋಪಾಲ್‌ಗಂಜ್ ಮತ್ತು ರಕ್ಸಾಲ್‌ಗಳಲ್ಲಿ ವಿಮಾನ ನಿಲ್ದಾಣಗಳು ಬರಲಿವೆ ಎಂದಿರುವ ಅವರು, ಬಿಹಾರಕ್ಕೆ ವಿಶೇಷ ಸ್ಥಾನಮಾನ ತರುವ ಭರವಸೆ ನೀಡಿದ್ದಾರೆ.
“ನಾವು ಓಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಗೊಳಿಸುತ್ತೇವೆ ಮತ್ತು ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ತರುತ್ತೇವೆ” ಎಂದಿರುವ ಅವರು, ದೇಶದಿಂದ ನಿರುದ್ಯೋಗ ತೊಲಗಿಸಲು ಶಪಥ ಮಾಡಿದರು. “ಆಗಸ್ಟ್ 15ರಿಂದ ದೇಶದ ಜನತೆಗೆ ನಿರುದ್ಯೋಗದಿಂದ ಮುಕ್ತಿ ಸಿಗಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆಗಸ್ಟ್ 15ರಿಂದ ಉದ್ಯೋಗ ನೀಡುವ ಪ್ರಕ್ರಿಯೆ ಆರಂಭವಾಗಲಿದೆ” ಎಂದ ಅವರು, ದೇಶಾದ್ಯಂತ ಯುವಕರಿಗೆ ಒಂದು ಕೋಟಿ ಉದ್ಯೋಗದ ಭರವಸೆ ನೀಡಿದರು.
“ರಕ್ಷಾ ಬಂಧನದ ಸಂದರ್ಭದಲ್ಲಿ ಬಡ ಕುಟುಂಬಕ್ಕೆ ಸೇರಿದ ನಮ್ಮ ಸಹೋದರಿಯರಿಗೆ ಪ್ರತಿ ವರ್ಷ ₹1 ಲಕ್ಷ ನೀಡುತ್ತೇವೆ. ₹500ಕ್ಕೆ ಗ್ಯಾಸ್ ಸಿಲಿಂಡರ್ ನೀಡುತ್ತೇವೆ” ಎಂದು ಅವರು ಹೇಳಿದರು.
“ನಮ್ಮ ಭಾರತ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಒಂದು ಕೋಟಿ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ. ಇಂದು ನಿರುದ್ಯೋಗ ನಮ್ಮ ದೊಡ್ಡ ಶತ್ರುವಾಗಿದ್ದು, ಬಿಜೆಪಿಯವರು ಇದರ ಬಗ್ಗೆ ಮಾತನಾಡಿಲ್ಲ. ಅವರು 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ,” ಎಂದು ಅವರು ಸೇರಿಸಿದರು.
ಇದನ್ನೂ ಓದಿ: Lok Sabha Election 2024: ಇಂದಿನಿಂದ ಅಂಚೆ ಮತದಾನ; ಯಾರು ಮತ ಹಾಕಬಹುದು?