Site icon Vistara News

Lok Sabha Election 2024: ಮಧ್ಯಾಹ್ನ 1 ಗಂಟೆವರೆಗೆ 39.13% ಮತದಾನ, ಪ.ಬಂಗಾಳ ದಾಖಲೆ, ರಾಂಚಿಯಲ್ಲಿ ಧೋನಿ ವೋಟ್‌

lok sabha election 2024 voting dhoni

ಹೊಸದಿಲ್ಲಿ: ಲೋಕಸಭೆ ಚುನಾವಣೆ (Lok Sabha Election 2024) 6ನೇ ಹಂತದ ಮತದಾನ (voting) ಶಾಂತಿಯುತವಾಗಿ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ 39.13% ಮತದಾನ ದಾಖಲಾಗಿದೆ. ಹಲವಾರು ಗಣ್ಯರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಪ್ರಮಾಣದ ಮತದಾನ (54.80%) ದಾಖಲಾಗಿದೆ.

1 ಗಂಟೆವರೆಗೆ 58 ಕ್ಷೇತ್ರಗಳ ಸರಾಸರಿ ಮತದಾನ 39.13% ದಾಖಲಾಗಿದೆ. ರಾಜ್ಯವಾರು ವಿವರ ಹೀಗಿದೆ:

ಬಿಹಾರ : 36.48
ಹರಿಯಾಣ : 36.48
ಜಮ್ಮು &ಕಾಶ್ಮೀರ : 35.22
ಜಾರ್ಖಂಡ್ : 42.54
ದಿಲ್ಲಿ : 34.37
ಒಡಿಶಾ : 35.69
ಉತ್ತರ ಪ್ರದೇಶ : 37.23
ಪಶ್ಚಿಮ ಬಂಗಾಳ : 54.80

ಇಂದು ನಡೆಯುತ್ತಿರುವ ಲೋಕಸಭೆ ಚುನಾವಣೆ (Lok Sabha Election 2024) 6ನೇ ಹಂತದ ಮತದಾನದಲ್ಲಿ (voting) ಈವರೆಗೆ ಹಲವು ಗಣ್ಯರು ಮತ ಚಲಾಯಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu), ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ (Sonia Gandhi), ರಾಹುಲ್‌ ಗಾಂಧಿ (Rahul Gandhi) ತಮ್ಮ ಮತ ಚಲಾಯಿಸಿದರು. ಜಾರ್ಖಂಡ್‌ನ ರಾಂಚಿಯ ಮತಗಟ್ಟೆಯೊಂದರಲ್ಲಿ ಕ್ರಿಕಟಿಗ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಆಗಮಿಸಿ ತಮ್ಮ ಮತ ಹಾಕಿದರು. ಅಭಿಮಾನಿಗಳು ಅವರ ದರ್ಶನ ಪಡೆಯಲು ಹಾಗೂ ಸ್ಪರ್ಶಿಸಲು ಮುಗಿಬಿದ್ದರು.

ದಿಲ್ಲಿಯ ಗಣ್ಯ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿ ಮತ ಚಲಾಯಿಸಿದರು. ಇನ್ನೊಂದು ಮತಗಟ್ಟೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮತ ಚಲಾಯಿಸಿ, ಇಂಕ್‌ ಹಾಕಿದ ತಮ್ಮ ಬೆರಳುಗಳನ್ನು ಪ್ರದರ್ಶಿಸಿದರು. ಪ್ರಿಯಾಂಕ ಗಾಂಧಿ ಹಾಗೂ ಅವರ ಮಕ್ಕಳಾದ ರೆಹಾನ್‌ ಮತ್ತು ಮಿರಾಯಾ ಕೂಡ ತಮ್ಮ ಮತಗಳನ್ನು ಚಲಾಯಿಸಿದರು.

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮತ ಚಲಾಯಿಸಿ, “ಮತದಾನವು ಒಂದು ಜವಾಬ್ದಾರಿ ಮತ್ತು ಅಧಿಕಾರವಾಗಿದೆ. ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ, ಸಕ್ರಿಯ ಮತ್ತು ಪರಿಣಾಮಕಾರಿ ಪ್ರಜಾಪ್ರಭುತ್ವವಾಗಿದೆ” ಎಂದು ಹೇಳಿದರು. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರೂ ಮತ ಹಾಕಿದರು.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ದೆಹಲಿಯಲ್ಲಿ ಮತ ಚಲಾಯಿಸಿದರು. ತಮ್ಮ ಗೊತ್ತುಪಡಿಸಿದ ಮತಗಟ್ಟೆಯಲ್ಲಿ ಮೊದಲ ಪುರುಷ ಮತದಾರರಾಗಿದ್ದ ಕಾರಣ ಅವರು ಈ ಮತದಾನಕ್ಕಾಗಿ ಪ್ರಮಾಣಪತ್ರವನ್ನು ಸಹ ಪಡೆದರು. “ಈ ಬೂತ್‌ನಲ್ಲಿ ನಾನು ಮೊದಲ ಪುರುಷ ಮತದಾರನಾಗಿದ್ದೇನೆ” ಎಂದು ಜೈಶಂಕರ್ ತಮ್ಮ ಪ್ರಮಾಣಪತ್ರವನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಂಡರಲ್ಲದೆ, ಛಾಯಾಚಿತ್ರವನ್ನು ತಮ್ಮ x ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ಅವರ ಮತಗಟ್ಟೆಯ ವಿಚಾರದಲ್ಲಿ ಗೊಂದಲ ಉಂಟಾಯಿತು. ಮೊದಲು ಬೇರೆ ಮತಗಟ್ಟೆಗೆ ತೆರಲಿದ ಅವರು, ನಂತರ ಸರಿಯಾದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದರು. “”ದೇಶಕ್ಕೆ ಇದು ನಿರ್ಣಾಯಕ ಕ್ಷಣವಾಗಿರುವುದರಿಂದ ಜನರು ಹೊರಗೆ ಬಂದು ಮತ ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಮತದಾನದ ನಂತರ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ, ಪಿಡಿಪಿ ಮುಖ್ಯಸ್ಥೆ ಮತ್ತು ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೆಹಬೂಬಾ ಮುಫ್ತಿ (Mehabuba Mufti) ಅವರು ಪಕ್ಷದ ಮುಖಂಡರು ಮತ್ತು ಬೆಂಬಲಿಗರೊಂದಿಗೆ ತಮ್ಮ ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಚುನಾವಣೆಗಳಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು. PDP ಪೋಲಿಂಗ್ ಏಜೆಂಟ್‌ಗಳು ಮತ್ತು ಕಾರ್ಯಕರ್ತರನ್ನು ಯಾವುದೇ ಕಾರಣವಿಲ್ಲದೆ ಬಂಧಿಸಲಾಗಿದೆ ಎಂದು ಮುಫ್ತಿ ಹೇಳಿಕೊಂಡಿದ್ದಾರೆ.

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಆರನೇ ಹಂತದಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್‌ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್‌ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ.

ಇದನ್ನೂ ಓದಿ: Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Exit mobile version