Site icon Vistara News

Lok Sabha Election 2024: ಮೊದಲೆರಡು ಗಂಟೆಗಳ ಮತದಾನ ಚುರುಕು, ಶೇ.9.21 ಚಲಾವಣೆ, ಕೆಲವೆಡೆ ಚಕಮಕಿ

Lok Sabha Election

Lok Sabha election 2024: 4th Phase Voting On May 13 In 96 Constituencies

ಬೆಂಗಳೂರು: ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ (lok sabha constituency) ನಡೆಯುತ್ತಿರುವ ಲೋಕಸಭೆ ಚುನಾವಣೆ (lok sabha election 2024) ಮತದಾನ (voting) ಬೆಳಗ್ಗಿನ ಹೊತ್ತಿನಲ್ಲಿ ಚುರುಕಾಗಿ ನೆರವೇರಿತು. 7 ಗಂಟೆಗೆ ಮತದಾನ ಆರಂಭವಾಗಿದ್ದು, ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 10% ಮತದಾನ ಕಂಡುಬಂತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಗಂಟೆಯವರೆಗೆ 14.33% ಹಾಗೂ ಉಡುಪಿ ಜಿಲ್ಲೆಯಲ್ಲಿ 12.82% ಮತದಾನ ದಾಖಲಾಗಿದೆ. ತುಮಕೂರು 9.6%, ಚಾಮರಾಜನಗರ 7.7%, ಮಂಡ್ಯ 7.70%, ಚಿಕ್ಕಬಳ್ಳಾಪುರ 8.70%, ಹಾಸನ 8.2%, ಚಿಕ್ಕಮಗಳೂರು 11.02%, ಮೈಸೂರು 11.04% ಮತದಾನ ನಡೆದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ 9.8%, ಬೆಂಗಳೂರು ಕೇಂದ್ರ 8.14%, ಬೆಂಗಳೂರು ಉತ್ತರ 8.64%, ಬೆಂಗಳೂರು ಗ್ರಾಮಾಂತರ 8.34% ಮತದಾನ ದಾಖಲಿಸಿವೆ.

ಹತ್ತು ಗಂಟೆಯ ಬಳಿಕ ಬಿಸಿಲು ಏರುವುದರಿಂದ, ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿನಲ್ಲಿ ಮತದಾನ ಇಳಿಕೆಯಾಗಿ, ಸಂಜೆ ಮತೆತ ಏರುವ ನಿರೀಕ್ಷೆ ಇದೆ. ರಾಜಧಾನಿಯಲ್ಲಿ ಹಲವಾರು ಗಣ್ಯರು ಮುಂಜಾನೆಯೇ ಮತ ಚಲಾಯಿಸಿದರು.

ಇನ್‌ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಮುಂಜಾನೆ ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು. ನಾರಾಯಣ ಮೂರ್ತಿಯವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಿಸಿಕೊಂಡು ನೇರವಾಗಿ ಮತಗಟ್ಟೆಗೇ ಬಂದು ಮತ ಹಾಕಿ ತೆರಳಿದರು. ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ನಟ ನಟಿಯರಾದ ಸಪ್ತಮಿ ಗೌಡ, ಪ್ರಕಾಶ್‌ ರೈ, ಗೋಲ್ಡನ್‌ ಸ್ಟಾರ್‌ ಗಣೇಶ್, ಶರಣ್‌, ಧ್ರುವ ಸರ್ಜಾ, ಅಮೂಲ್ಯ ಮುಂತಾದವರು ಮತ ಹಾಕಿದರು. ಧಾರ್ಮಿಕ ಗಣ್ಯರಾದ ಉಡುಪಿಯ ಅಷ್ಟ ಮಠಾಧೀಶರು, ಸಿದ್ದಲಿಂಗ ಸ್ವಾಮಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ ಹಾಕಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ರಾಜಕೀಯ ನಾಯಕರು ಹಾಗೂ ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಕೆಜೆ ಜಾರ್ಜ್‌, ಜಮೀರ್‌ ಅಹಮದ್‌ ಖಾನ್‌, ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ, ಸೋಮಣ್ಣ, ಪಿಸಿ ಮೋಹನ್‌ ಮೊದಲಾದವರು ಹಕ್ಕು ಚಲಾಯಿಸಿದರು. ಮತದಾನಕ್ಕೆ ಆಗಮಿಸುವ ಮುನ್ನ ಎಚ್‌ಡಿ ದೇವೇಗೌಡ, ಡಿಕೆ ಸುರೇಶ್‌, ಡಿಕೆ ಶಿವಕುಮಾರ್‌ ಮೊದಲಾದ ನಾಯಕರು ಟೆಂಪಲ್‌ ರನ್‌ ಮಾಡಿದರು.

ಕೆಲವೆಡೆ ಸಣ್ಣ ಪ್ರಮಾಣದ ಚಕಮಕಿ ಕಂಡುಬಂತು. ಉಡುಪಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮತ ಹಾಕಲು ಸಂದರ್ಭ ಪ್ರಚಾರ ನಡೆಸಿದರು ಎಂದು ಬಿಜೆಪಿ ಕಾರ್ಯಕರ್ತರು ತಗಾದೆ ತೆಗೆದು ರಂಪಾಟ ನಡೆಸಿದರು. ಆನೆಕಲ್‌ನಲ್ಲಿ ಬಿಜೆಪಿ ಪೆಂಡಾಲ್‌ಗಳನ್ನು ತೆಗೆಸಿ ಕಾಂಗ್ರೆಸ್‌ ಪೆಂಡಾಲ್‌ ಹಾಕಿಸಿದ ಕುರಿತು ವಾಗ್ಯದ್ಧ ನಡೆಯಿತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಕೆಲವೆಡೆ ಮತಯಂತ್ರ ಕೈಕೊಟ್ಟು ಮತದಾರರು ಗಂಟೆಗಟ್ಟಲೆ ಕಾಯುವಂತಾಯಿತು. ತಂತ್ರಜ್ಞರು ಆಗಮಿಸಿ ಸರಿಪಡಿಸಿದ ಬಳಿಕ ಮತ ಹಾಕಲಾಯಿತು. ಮಹಿಳೆಯರಿಗಾಗಿ ಏರ್ಪಡಿಸಿದ ಪಿಂಕ್‌ ಬೂತ್‌ಗಳಲ್ಲಿಯೂ ಉತ್ತಮ ಸ್ಪಂದನ ವ್ಯಕ್ತವಾಯಿತು. ಕೆಲವೆಡೆ ಬಿಸಿಲಿನ ಝಳಕ್ಕೆ ಸರತಿಯಲ್ಲಿ ನಿಂತ ಮತದಾರರು ಅಸ್ವಸ್ಥಗೊಂಡರು. ಇವರಿಗೆ ಪ್ರಥಮ ಚಿಕಿತ್ಸೆ ಒದಗಿಸಲಾಯಿತು.

ಇದನ್ನೂ ಓದಿ: Lok Sabha Election 2024: ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಗಣೇಶ್ ದಂಪತಿ: ಪ್ರಕಾಶ್‌ ರಾಜ್‌ ಮನವಿ ಏನು?

Exit mobile version