Site icon Vistara News

Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

Lok Sabha Election

ನವದೆಹಲಿ: ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಲ್ಲಿ (Lok Sabha Election) ಕಾಂಗ್ರೆಸ್​ಗೆ ದೊಡ್ಡ ಹಿನ್ನಡೆ ಉಂಟಾಗಿದ್ದು, ಪಕ್ಷವು ಚುನಾವಣಾ ಖರ್ಚಿಗೆ ಹಣ ನೀಡಿಲ್ಲವೆಂದು ಅಲ್ಲಿನ ಅಭ್ಯರ್ಥಿ ತನ್ನ ಟಿಕೆಟ್ ಅನ್ನು ಹಿಂದಿರುಗಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದರೂ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಭ್ಯರ್ಥಿ ಸುಚರಿತಾ ಮೊಹಾಂತಿ ಹೇಳಿದ್ದಾರೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್​ನ ಮಾಜಿ ನಾಯಕ ಸಂಜಯ್ ನಿರುಪಮ್ ಅವರು ಕೆ.ಸಿ.ವೇಣುಗೋಪಾಲ್ ಅವರನ್ನು ‘ಡೀಲರ್’ ಎಂದು ಕರೆದಿದ್ದಾರೆ. ಇದು ‘ಇಂದಿನ ಬಡ ಕಾಂಗ್ರೆಸ್’ ಎಂದು ಹೇಳಿದ್ದಾರೆ.

ವೇಣುಗೋಪಾಲ್​ ಕಾಂಗ್ರೆಸ್ ಸದಸ್ಯರಿಗೆ ಹುದ್ದೆಗಳನ್ನು ನೀಡಲು ಹಣ ಪಡೆಯುತ್ತಾರೆ. ಪ್ರತಿ ಕೆಲಸಕ್ಕೆ ರಾಜ್ಯ ಸರ್ಕಾರಗಳ ಪ್ರತಿಯೊಬ್ಬ ಸಚಿವರಿಂದ ಕಮಿಷನ್ ಪಡೆಯುವ ಡೀಲರ್ ಅವರು. ಅಲ್ಲದೆ ಮಹಿಳಾ ಅಭ್ಯರ್ಥಿಯನ್ನು (ಸುಚರಿತಾ ಮೊಹಾಂತಿ) ಗದರಿಸಿದ್ದಾರೆ. ಹೀಗಾಗಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದಾರೆ” ಎಂದು ಶಿವಸೇನೆಗೆ ಸೇರಿದ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.

ಸುಚರಿತಾ ಮೊಹಾಂತಿ ಟಿಕೆಟ್ ನಿರಾಕರಿಸಿದ್ದು ಯಾಕೆ?

ಸುಚರಿತಾ ಮೊಹಾಂತಿ 10 ವರ್ಷಗಳ ಹಿಂದೆ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಪತ್ರಕರ್ತೆಯಾಗಿದ್ದರು. ಈ ಚುನಾವಣೆಯಲ್ಲಿ ಅವರು ಕಾಂಗ್ರೆಸ್​ ಟಿಕೆಟ್ ಪಡೆದಿದ್ದರು. ಆದರೆ ಈಗ ಪ್ರಚಾರಕ್ಕಾಗಿ ತನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ಅವರು ಹೇಳಿದ್ದಾರೆ. “ಪಕ್ಷವು ನನಗೆ ಹಣ ನೀಡದ ಕಾರಣ ನಾನು ಟಿಕೆಟ್ ಹಿಂದಿರುಗಿಸಿದ್ದೇನೆ. ಮತ್ತೊಂದು ಕಾರಣವೆಂದರೆ, ಏಳು ವಿಧಾನಸಭಾ ಕ್ಷೇತ್ರಗಳ ಕೆಲವು ಸ್ಥಾನಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿಲ್ಲ. ಬದಲಾಗಿ, ಕೆಲವು ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ನಾನು ಈ ರೀತಿ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಸುಚರಿತಾ ಹೇಳಿದ್ದಾರೆ.

“ಪುರಿ ಸಂಸದೀಯ ಕ್ಷೇತ್ರದಲ್ಲಿ ನಮ್ಮ ಪ್ರಚಾರಕ್ಕೆ ತೀವ್ರ ಹೊಡೆತ ಬಿದ್ದಿದೆ ಏಕೆಂದರೆ ಪಕ್ಷವು ನನಗೆ ಹಣವನ್ನು ನಿರಾಕರಿಸಿದೆ. ಎಐಸಿಸಿ ಒಡಿಶಾ ಉಸ್ತುವಾರಿ ಅಜಯ್ ಕುಮಾರ್ ಜಿ ಸಲಹೆ ಕೊಟ್ಟಿದ್ದಾರೆ. ನಾನು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತಳಾಗಿದ್ದೆ, 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದೆ. ಪುರಿಯಲ್ಲಿನ ನನ್ನ ಪ್ರಚಾರಕ್ಕಾಗಿ ನನ್ನಲ್ಲಿರುವ ಎಲ್ಲವನ್ನೂ ನೀಡಿದ್ದೇನೆ” ಎಂದು ಮೊಹಾಂತಿ ಕೆಸಿ ವೇಣುಗೋಪಾಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election : ರಾಹುಲ್ ಪ್ರಧಾನಿಯಾಗುವುದು ಪಾಕಿಸ್ತಾನದ ಆಸೆ ಎಂದ ಮೋದಿ, ತಿರುಗೇಟು ಕೊಟ್ಟ ಪ್ರಿಯಾಂಕಾ

ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ನಾನು ಸಾರ್ವಜನಿಕ ದೇಣಿಗೆ ಅಭಿಯಾನ ಪ್ರಯತ್ನಿಸಿದೆ ಆದರೆ ಇಲ್ಲಿಯವರೆಗೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಪ್ರಚಾರ ವೆಚ್ಚವನ್ನು ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸಲು ನಾನು ಪ್ರಯತ್ನಿಸಿದೆ” ಎಂದು ಅವರು ಹೇಳಿದರು.

“ನಾನು ಸ್ವಂತವಾಗಿ ಹಣವನ್ನು ಸಂಗ್ರಹಿಸಲು ಸಾಧ್ಯವಾಗದ ಕಾರಣ, ಪುರಿ ಸಂಸತ್ ಕ್ಷೇತ್ರದಲ್ಲಿ ಪರಿಣಾಮಕಾರಿ ಪ್ರಚಾರಕ್ಕಾಗಿ ಅಗತ್ಯವಾದ ಪಕ್ಷದ ನಿಧಿಯನ್ನು ನೀಡುವಂತೆ ಒತ್ತಾಯಿಸಿ ನಮ್ಮ ಪಕ್ಷದ ಕೇಂದ್ರ ನಾಯಕತ್ವಕ್ಕೆ ಮನವಿ ಮಾಡಿದ್ದೆ. ಈ 2024 ರ ಚುನಾವಣೆಯಲ್ಲಿ, ಜನರು ಎರಡು ಭ್ರಷ್ಟ ಮತ್ತು ಹಗರಣಕೋರ ಆಡಳಿತ ಪಕ್ಷಗಳಾದ ಬಿಜೆಪಿ ಮತ್ತು ಬಿಜೆಡಿ ಹೊರಹಾಕಲು ಸಜ್ಜಾಗಿದ್ದಾರೆ. ಕಾಂಗ್ರೆಸ್​​ನ 5 ನ್ಯಾಯಗಳು ಮತ್ತು 25 ಗ್ಯಾರಂಟಿಗಳಿಗೆ ಮತ ಚಲಾಯಿಸಲಿದ್ದಾರೆ” ಎಂದು ಮೊಹಾಂತಿ ಹೇಳಿದರು.

ಹಣದ ಕೊರತೆ ಪುರಿಯಲ್ಲಿನ ನಮ್ಮ ಗೆಲುವನ್ನು ತಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಪಕ್ಷದ ಧನಸಹಾಯವಿಲ್ಲದೆ, ಪುರಿಯಲ್ಲಿ ಪ್ರಚಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ನಾನು ವಿಷಾದಿಸುತ್ತೇನೆ. ಆದ್ದರಿಂದ ನಾನು ಪುರಿ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಹಿಂದಿರುಗಿಸುತ್ತೇನೆ” ಎಂದಿರುವ ಸುಚರಿತಾ ಪಕ್ಷ ಮತ್ತು ರಾಹುಲ್ ಗಾಂಧಿಗೆ ತಮ್ಮ ಬೆಂಬಲ ಮುಂದುವರಿಸಿದ್ದಾರೆ.

ಪ್ರಸ್ತುತ ಬಿಜು ಜನತಾ ದಳದ (ಬಿಜೆಡಿ) ಪಿನಾಕಿ ಮಿಶ್ರಾ ಅವರ ವಶದಲ್ಲಿರುವ ಪುರಿ ಕ್ಷೇತ್ರದಿಂದ ಬಿಜೆಪಿ ಸಂಬಿತ್ ಪಾತ್ರಾ ಅವರನ್ನು ಕಣಕ್ಕಿಳಿಸಿದೆ. ಪುರಿಯಲ್ಲಿ ಮೇ 25 ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

Exit mobile version