ರಾಂಚಿ: ಲೋಕ ಸಭಾ ಚುನಾವಣೆ (Lok Sabha Election) ಕೊನೇ ಹಂತದ ಮತದಾದನ ಹಿನ್ನೆಲೆಯಲ್ಲಿ ಜಾರ್ಖಂಡ್ನಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಮ್ಎಮ್) ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಜಾರ್ಖಂಡ್ನ ದುಮ್ಕಾದಲ್ಲಿ ಮಂಗಳವಾರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ‘ಲವ್ ಜಿಹಾದ್’ ಆರಂಭಗೊಂಡಿರುವುದೇ ಜಾರ್ಖಂಡ್ನಿಂದ ಎಂದು ಹೇಳಿಕೆ ನೀಡಿದ್ದಾರೆ.
ಜೆಎಂಎಂ ನಿರಂತರವಾಗಿ ಕೋಮುವಾದಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ ಮೋದಿ, ಜಾರ್ಖಂಡ್ ನ ಒಂದು ಜಿಲ್ಲೆಯಲ್ಲಿ ಭಾನುವಾರದ ಸಾಂಪ್ರದಾಯಿಕ ರಜಾದಿನವನ್ನು ಶುಕ್ರವಾರಕ್ಕೆ ಬದಲಾಯಿಸಲಾಗಿದೆ ಎಂದು ಹೇಳಿದರು. ವಾಸ್ತವದಲ್ಲಿ ಭಾನುವಾರ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದೆ. 200-300 ವರ್ಷಗಳಿಂದ ರಜಾದಿನವಾಗಿ ಪರಿಗಣಿಸಲಾಗಿದೆ. ಈಗ ಅದನ್ನು ಶುಕ್ರವಾರಕ್ಕೆ ಬದಲಾಯಿಸಲಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.
ಲೂಟಿ ಆರೋಪಗಳು
ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಜೆಎಂಎಂ ಮತ್ತು ಕಾಂಗ್ರೆಸ್ ಮಿತಿಮೀರಿದ ಲೂಟಿಯಲ್ಲಿ ತೊಡಗಿವೆ ಎಂದು ಆರೋಪಿಸಿದರು, ಜಾರ್ಖಂಡ್ ರಾಜ್ಯದಲ್ಲಿ ಹಣದ ಶಿಖರಗಳು ನಿರ್ಮಾಣಗೊಂಡಿವೆ. ಜೆಎಂಎಂ-ಕಾಂಗ್ರೆಸ್ ವ್ಯಾಪಕ ಲೂಟಿಯಲ್ಲಿ ತೊಡಗಿದೆ ಎಂದು ಹೇಳಿದರು. ಜೂನ್ 4 ರ ನಂತರ ತಮ್ಮ ನೇತೃತ್ವದ ನೂತನ ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ತನ್ನ ಕ್ರಮ ತೀವ್ರಗೊಳಿಸುತ್ತದೆ ಎಂದು ಅವರು ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ: Lok Sabha Election : ಕನ್ಯಾಕುಮಾರಿಯಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಮೋದಿ
2014ಕ್ಕೂ ಮೊದಲು ಕಾಂಗ್ರೆಸ್ ದಿನದ 24 ಗಂಟೆಯೂ ಲೂಟಿಯಲ್ಲಿ ತೊಡಗಿದ್ದರಿಂದ ಹಗರಣಗಳು ಸಾಮಾನ್ಯವಾಗಿದ್ದವು, ಆದರೆ ತಾವು ಅಧಿಕಾರಕ್ಕೆ ಬಂದ ನಂತರ ಅದನ್ನು ನಿಲ್ಲಿಸಿಸಲಾಯಿತು ಎಂದು ಹೇಳಿದರು
ನುಸುಳುಕೋರರ ಸಮಸ್ಯೆ
ಒಳನುಸುಳುವಿಕೆಯಿಂದಾಗಿ ಸಂತಾಲ್ ಪರಗಣಗಳಲ್ಲಿ ಬುಡಕಟ್ಟು ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೋದಿ ಆರೋಪಿಸಿದರು. ಜಾರ್ಖಂಡ್ನಲ್ಲಿ ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟವು “ನುಸುಳುಕೋರರನ್ನು ಪೋಷಿಸುತ್ತಿದೆ” ಎಂದು ಅವರು ಆರೋಪಿಸಿದರು. ಬುಡಕಟ್ಟು ಜನರ ಭೂಮಿಯನ್ನು ನುಸುಳುಕೋರರು ವಶಪಡಿಸಿಕೊಳ್ಳುತ್ತಿದ್ದಾರೆ. ಅವರು ಮಹಿಳೆಯರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಜಾರ್ಖಂಡ್ನಲ್ಲಿ ದೊಡ್ಡ ಬಿಕ್ಕಟ್ಟು ತಲೆದೋರಿದೆ. ಅದುವೇ ಒಳನುಸುಳುವಿಕೆ. ಸಂತಾಲ್ ಪರಗಣಗಳು ಒಳನುಸುಳುವಿಕೆಯ ಸವಾಲನ್ನು ಎದುರಿಸುತ್ತಿವೆ. ಅನೇಕ ಪ್ರದೇಶಗಳಲ್ಲಿ, ಬುಡಕಟ್ಟು ಜನರ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದೆ ಮತ್ತು ಒಳನುಸುಳುವವರ ಸಂಖ್ಯೆ ಹೆಚ್ಚುತ್ತಿದೆ. ನುಸುಳುಕೋರರು ಬುಡಕಟ್ಟು ಜನರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಬುಡಕಟ್ಟು ಹೆಣ್ಣುಮಕ್ಕಳು ನುಸುಳುಕೋರರ ದಾಳಿಗೆ ಗುರಿಯಾಗಿದ್ದಾರೆ. ಅವರ ಭದ್ರತೆ ಮತ್ತು ಸುರಕ್ಷತೆ ಅಪಾಯದಲ್ಲಿದೆ. ಅವರ ಜೀವವೂ ಅಪಾಯದಲ್ಲಿದೆ” ಎಂದು ಅವರು ಹೇಳಿದರು.
2022 ರ ಘಟನೆಗಳನ್ನು ಉಲ್ಲೇಖಿಸಿದ ಮೋದಿ, “ಬುಡಕಟ್ಟು ಹೆಣ್ಣುಮಕ್ಕಳನ್ನು 50 ತುಂಡುಗಳಾಗಿ ಕತ್ತರಿಸಲಾಗುತ್ತಿದೆ. ಜೀವಂತವಾಗಿ ಸುಡಲಾಗುತ್ತಿದೆ ನಾಲಿಗೆಯನ್ನು ಹೊರತೆಗೆಯಲಾಗಿದೆ. ಬುಡಕಟ್ಟು ಹೆಣ್ಣುಮಕ್ಕಳನ್ನು ಗುರಿಯಾಗಿಸುತ್ತಿರುವ ಈ ಜನರು ಯಾರು? ಜೆಎಂಎಂ ಸರ್ಕಾರ ಅವರನ್ನು ಏಕೆ ಪೋಷಿಸುತ್ತಿದೆ ಎಂದು ಮೋದಿ ಪ್ರಶ್ನಿಸಿದರು. ಮುಂದಿನ ಐದು ವರ್ಷಗಳಲ್ಲಿ ದೇಶವು ಹಿಂದಿನ ದಶಕಕ್ಕಿಂತ ಹೆಚ್ಚಿನ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಎಂದು ಅವರು ಭರವಸೆ ನೀಡಿದರು.