ದೇಶದಲ್ಲಿ ಲೋಕಸಭೆ ಚುನಾವಣೆಯ (lok sabha election) ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ (ಏಪ್ರಿಲ್ 26) ಶುಕ್ರವಾರ ನಡೆಯುತ್ತಿದೆ. ಮತದಾನವನ್ನು ಶಾಂತಿಯುತವಾಗಿ ಹಾಗೂ ಯಾವುದೇ ಲೋಪದೋಷಗಳಿಲ್ಲದೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದರ ಜತೆಗೆ, ಮತದಾನ ಪ್ರಮಾಣವನ್ನೂ ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಆಯೋಗ ಘೋಷಿಸಿದೆ. ಭಾರತದಲ್ಲಿ ಚುನಾವಣೆ ನಡೆಯುತ್ತದೆ ಎಂದರೆ ಜಗತ್ತೇ ಅದನ್ನು ಕುತೂಹಲದಿಂದ ವೀಕ್ಷಿಸುತ್ತದೆ. ಯಾಕೆಂದರೆ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ, 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದಲ್ಲಿ, ಯಾವುದೇ ಹಿಂಸಾಚಾರವಿಲ್ಲದೆ, ಒಂದೇ ಒಂದು ಜೀವಹಾನಿಯಿಲ್ಲದೆ, ಯಾವ ಲೋಪದೋಷವೂ ಇಲ್ಲದಂತೆ, ಜಗತ್ತಿಗೇ ಮಾದರಿಯಾಗಿ ನಡೆಯುವ ಮತದಾನ ಪ್ರಕ್ರಿಯೆ ಹಲವು ದೇಶಗಳಿಗೆ ಅಧ್ಯಯನ ಯೋಗ್ಯವಾಗಿ ಕಾಣುತ್ತದೆ. ದಾಖಲೆ ಸಂಖ್ಯೆಯ ಜನರು ಮತದಾನ ಮಾಡಲು ಏಳೆಂಟು ಹಂತಗಳನ್ನು ತೆಗೆದುಕೊಂಡರೂ, ಒಂದೇ ದಿನದಲ್ಲಿ ಸಂಶಯಕ್ಕೆಡೆಯಿಲ್ಲದಂತೆ ಫಲಿತಾಂಶವನ್ನು ಪಡೆಯುವುದು ವಿಶೇಷ. ಅಮೆರಿಕದಂಥ ದೇಶದಲ್ಲೇ ಚುನಾವಣೆ ಹಲವು ಸಲ ಗೊಂದಲಮಯವಾಗಿರುತ್ತದೆ ಎಂಬುದನ್ನು ನೋಡಿದರೆ, ನಮ್ಮದು ಅಧ್ಯಯನಯೋಗ್ಯವೇ ಸರಿ.
ಪ್ರಸ್ತುತ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಏರಲು ಜನತೆಯ ಆಶೀರ್ವಾದ ಕೋರಿದೆ. ನರೇಂದ್ರ ಮೋದಿಯವರು ಪಕ್ಷಕ್ಕೆ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಸಮರ್ಥ ನಾಯಕತ್ವ ನೀಡಿದ್ದಾರೆ. ಹಲವು ದಶಕಗಳ ಕಾಲ ದೇಶವನ್ನು ಆಳಿ ಸದ್ಯ ಅಧಿಕೃತ ವಿಪಕ್ಷ ಸ್ಥಾನಮಾನವನ್ನೂ ಹೊಂದಿಲ್ಲದ ಕಾಂಗ್ರೆಸ್, ಮರಳಿ ಅಧಿಕಾರಕ್ಕೆ ಬರಲು ಹಾತೊರೆಯುತ್ತಿದೆ. ಕಾಂಗ್ರೆಸ್ ಪಕ್ಷ ಹಲವು ಮಿತ್ರಪಕ್ಷಗಳನ್ನು ಸೇರಿಸಿಕೊಂಡು ಇಂಡಿಯಾ ಬ್ಲಾಕ್ ರಚಿಸಿಕೊಂಡು ಬಿಜೆಪಿಯ ಅಶ್ವಮೇಧವನ್ನು ಕಟ್ಟಿಹಾಕಲು ಯತ್ನಿಸುತ್ತಿದೆ. ಚುನಾವಣೆಯ ಪ್ರಚಾರ ಕಣದಲ್ಲಿ ಹಲವು ವಾದವಿವಾದಗಳು, ವಾಗ್ವಾದಗಳು ನಡೆದುಹೋಗಿವೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದು ಮತದಾರನಿಗೆ ಬಿಟ್ಟ ವಿಷಯ. ಮತದಾರ ಸಾಕಷ್ಟು ಬುದ್ಧಿವಂತನಾಗಿದ್ದು, ತನ್ನ ಆಯ್ಕೆಯನ್ನು ಆತ ಮಾಡಬಲ್ಲ.
ಆದರೆ, ಚಿಂತಿಸಬೇಕಾದ ಒಂದು ವಿಷಯವೆಂದರೆ, ಮತದಾನದ ಪ್ರಮಾಣ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಿದೆ. ವಿದ್ಯಾವಂತರೇ ಮತದಾನ ಮಾಡುತ್ತಿಲ್ಲ ಎಂಬುದು ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲಾಗಿರುವ ಕೊರಗುಗಳಲ್ಲಿ ಒಂದು. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸಬೇಕಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ (2019) ಇಡೀ ರಾಜ್ಯದಲ್ಲೇ ಕನಿಷ್ಠ ಪ್ರಮಾಣ (ಶೇ 53.7) ಮತದಾನವಾಗಿತ್ತು. ಬೆಂಗಳೂರು ಸೆಂಟ್ರಲ್‌ನಲ್ಲಿ ಮತದಾನ ಪ್ರಮಾಣ ಸೇಕಡ 54.3, ಬೆಂಗಳೂರು ಉತ್ತರದಲ್ಲಿ ಮತದಾನ ಪ್ರಮಾಣ ಶೇಕಡ 54.7 ಇತ್ತು. ಇದೇ ವೇಳೆ ಬೆಂಗಳೂರು ಗ್ರಾಮಾಂತರದಲ್ಲಿ ಮತದಾನ ಪ್ರಮಾಣ ಶೇಕಡ 64.9 ಇತ್ತು. ಕರ್ನಾಟಕದ ಒಟ್ಟು ಮತದಾನ ಪ್ರಮಾಣ ಶೇಕಡ 68 ಇತ್ತು. ಆದ್ದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂಬ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವುಗಳಿಗೆ ಪೂರಕವಾಗಿ ಎಲ್ಲರೂ ಸ್ಪಂದಿಸಬೇಕಿದೆ. ಸಾಮಾನ್ಯವಾಗಿ ವಾರಾಂತ್ಯ ಅಥವಾ ವಾರದ ಆರಂಭದಲ್ಲಿ ಮತದಾನ ದಿನ ನಿಗದಿಪಡಿಸಿದರೆ ಒಂದಿಷ್ಟು ಸಂಖ್ಯೆಯ ಮತದಾರರು ಪ್ರವಾಸಕ್ಕೆ ಹೊರಡುವ ಪ್ರವೃತ್ತಿಯನ್ನು ನಾವು ಈ ಹಿಂದಿನ ಚುನಾವಣೆಗಳಲ್ಲಿ ಗಮನಿಸಿದ್ದೇವೆ. ಅದನ್ನು ತಪ್ಪಿಸಲು ಆಯೋಗ ವಾರದ ನಡುವೆ ಮತದಾನದ ದಿನ ನಿಗದಿಪಡಿಸಿದೆ. ಹಾಗೆಯೇ ಈ ದಿನ ಸಾರ್ವತ್ರಿಕ ರಜೆಯನ್ನು ನೀಡಲಾಗಿದೆ. ರಜೆಯೆಂದು ಪ್ರವಾಸ ಹೋಗುವ ನಗರದ ಮತದಾರರ ಚಾಳಿಯನ್ನು ತಪ್ಪಿಸಲು ಹೆಚ್ಚಿನ ಪ್ರವಾಸೀ ತಾಣಗಳನ್ನು ಕ್ಲೋಸ್ ಮಾಡಲಾಗುತ್ತಿದೆ.
ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರಕ್ಕೆ ಬರಲು ಆಗದ 80 ವರ್ಷಕ್ಕೂ ಮೇಲ್ಪಟ್ಟವರು, ಗಂಭೀರ ಅನಾರೋಗ್ಯ ಬಾಧಿತರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಮತದಾನ ಕೇಂದ್ರದಲ್ಲೂ ಇವರಿಗೆ ವಿಶೇಷ ಸೌಲಭ್ಯ ಮಾಡಲಾಗಿದೆ. ಮೊದಲೇ ಈ ಬಗ್ಗೆ ನೋಂದಾಯಿಸಿಕೊಳ್ಳಬೇಕು. ಅಂಥ ಒಂದು ಮತದ ಸಂಗ್ರಹಕ್ಕೆ ಮೂರ್ನಾಲ್ಕು ಮಂದಿಯನ್ನು ನಿಯೋಜಿಸಲಾಗುತ್ತದೆ ಎಂದರೆ, ಒಂದೊಂದು ಮತವನ್ನೂ ಆಯೋಗ ಎಷ್ಟು ಗಂಭಿರವಾಗಿ ಪರಿಗಣಿಸಿದೆ ಎಂಬುದನ್ನು ಗಮನಿಸಬಹುದು. ಅಗತ್ಯವಿದ್ದವರು ಇದರ ಸದ್ಬಳಕೆ ಮಾಡಿಕೊಂಡಿದ್ದಾರೆ. ಭಾರತೀಯ ಚುನಾವಣಾ ಆಯೋಗವು ನವೀನ ಮತ್ತು ವಿನೂತನ ಮತದಾರರ ಜಾಗೃತಿ ಅಭಿಯಾನಗಳನ್ನು ಆಯೋಜಿಸಿರುವುದರ ಜೊತೆಗೆ ಹೋಟೆಲ್ ಉದ್ಯಮಿಗಳು, ಕಂಪನಿಗಳು ಮತ್ತು ಇತರ ಸಂಸ್ಥೆಗಳು ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮತದಾರರನ್ನು ಓಲೈಸಲು ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಯುವ ಮತದಾರರಿಗೆ, ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬುಡಕಟ್ಟು ಸಮುದಾಯಗಳಿಗೆ ವಿಶೇಷ ಮತಗಟ್ಟೆ ರಚಿಸಲಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರೈಲ್ವೇ ಇಲಾಖೆಯ ಸುಧಾರಣೆ ಕ್ರಮಗಳು ಪ್ರಶಂಸಾರ್ಹ
ಪ್ರತಿ ಮತವೂ ಅಮೂಲ್ಯ. ಆದರೆ ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಶೇ.60ನ್ನು ದಾಟುವುದಿಲ್ಲ. ಸುಶಿಕ್ಷಿತರು ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಇದಕ್ಕೆ ಪರಿಹಾರ. ಪ್ರಜಾಪ್ರಭುತ್ವವೆಂಬುದು ಸುಮ್ಮನೇ ಯಾರೋ ನಮಗೆ ತಟ್ಟೆಯಲ್ಲಿಟ್ಟು ಕೊಟ್ಟ ಉಡುಗೊರೆಯಲ್ಲ. ಪ್ರತಿ ಪ್ರಜೆಯೂ ಪ್ರತಿ ಕಾಲದಲ್ಲೂ ತಮ್ಮ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು. ಸಂವಿಧಾನದ ಪ್ರಕಾರ ಪ್ರತೀ ಪ್ರಜೆಗೂ ಮತದಾನ ಎಂಬುದು ಮೂಲಭೂತ ಹಕ್ಕು. ಮತದಾನದ ಒಂದು ದಿನದಂದು ಮಾತ್ರವೇ ಪ್ರಜೆ ಪ್ರಭುವಾಗಿರುತ್ತಾನೆ. ಅಂದು ಸರಿಯಾಗಿ ತಮ್ಮ ಅಧಿಕಾರ ಚಲಾಯಿಸದೇ ಹೋದರೆ ಮುಂದಿನ ಐದು ವರ್ಷ ತಮಗಿಷ್ಟವಿಲ್ಲದ ವ್ಯಕ್ತಿಗಳ ಗುಲಾಮರಾಗಿರಬೇಕಾಗುತ್ತದೆ. ಚುನಾವಣೆ ಆಯೋಗದ ಸುಧಾರಣಾವಾದಿ ಕ್ರಮಗಳನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಾಗರಿಕರು ಪರಿಗಣಿಸಬೇಕು. ಆಗ ಮಾತ್ರ ಮತದಾನ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ.