Site icon Vistara News

Lok Sabha Election: ಚಿರಾಗ್‌ಗೆ ಮಣೆ ಹಾಕಿದ ಎನ್‌ಡಿಎ, ಸಿಟ್ಟಿಗೆದ್ದ ಕೇಂದ್ರ ಸಚಿವ ಪಶುಪತಿ ಕುಮಾರ್‌ ಪರಾಸ್‌ ರಾಜೀನಾಮೆ

Pashupati Kumar Paras

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ (Lok Sabha Election) ಮುನ್ನ ಲೋಕಜನ ಶಕ್ತಿ ಪಕ್ಷ (ರಾಮ್‌ವಿಲಾಸ್‌) (Lok Janshakti party- Ram Vilas) ನಾಯಕ ಚಿರಾಗ್ ಪಾಸ್ವಾನ್ (Chirag Paswan) ಅವರೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿರುವುದರಿಂದ ಸಿಟ್ಟಿಗೆದ್ದಿರುವ ಚಿರಾಗ್‌ ಚಿಕ್ಕಪ್ಪ ಹಾಗೂ ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ (Pashupati Kumar Paras) ಮಂಗಳವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

“ಎನ್‌ಡಿಎ ಮಿತ್ರಪಕ್ಷಗಳನ್ನು ಘೋಷಿಸಲಾಗಿದೆ. ನಾನು ಪ್ರಧಾನಿಗೆ ಕೃತಜ್ಞನಾಗಿದ್ದೇನೆ. ನನ್ನ ಪಕ್ಷ ಮತ್ತು ನಾನು ಅನ್ಯಾಯಕ್ಕೆ ಒಳಗಾಗಿದ್ದೇವೆ. ಹಾಗಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪರಾಸ್ ಹೇಳಿದ್ದಾರೆ.

ಪರಾಸ್‌ ಅವರು ಚಿರಾಗ್‌ ಪಾಸ್ವಾನ್‌ ಅವರ ಚಿಕ್ಕಪ್ಪ ಆಗಿದ್ದು, ಅವರ ಪ್ರತಿಸ್ಪರ್ಧಿ ಬಣದ ನಾಯಕನಾಗಿದ್ದಾರೆ. 2021ರಲ್ಲಿ ಎಲ್‌ಜೆಪಿ ಅದರ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಬಿಹಾರದಲ್ಲಿ ವಿಭಜನೆಯಾಯಿತು. ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ಪರಾಸ್ ಅವರು ಪಕ್ಷದಲ್ಲಿ ಪ್ರಾಬಲ್ಯ ಹೊಂದಿದ್ದು, ಐವರು ಸಂಸದರನ್ನು ತಮ್ಮೊಂದಿಗೆ ಕರೆದುಕೊಂಡರು. ಪಾಸ್ವಾನ್ ಅವರ ಮಗ ಚಿರಾಗ್ ಪ್ರತ್ಯೇಕ ಪಕ್ಷವನ್ನು (ಲೋಕಜನ ಶಕ್ತಿ ಪಕ್ಷ- ರಾಮ್‌ವಿಲಾಸ್‌) ರಚಿಸಬೇಕಾಗಿ ಬಂದಿತ್ತು.

ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ, ಚಿರಾಗ್‌ ಅವರ ವಯಸ್ಸು ಮತ್ತು ರಾಜ್ಯದಲ್ಲಿ ಅವರ ಆಕ್ರಮಣಕಾರಿ ಬೆಳವಣಿಗೆಯನ್ನು ಕಂಡಿದ್ದು, ಅವರನ್ನು ಬಿಹಾರ ರಾಜಕೀಯದ ದೀರ್ಘಾವಧಿಯ ಆಟಗಾರನಾಗಿ ಗುರುತಿಸಿದೆ. ರ್ಯಾಲಿಗಳಲ್ಲಿ ದೊಡ್ಡ ಜನಸಮೂಹವನ್ನು ಸೆಳೆಯುವ ಚಿರಾಗ್ ಪಾಸ್ವಾನ್ ಅವರ ಸಾಮರ್ಥ್ಯವನ್ನು ಗ್ರಹಿಸಿದ ಎನ್‌ಡಿಎ, ಬಿಹಾರದಲ್ಲಿ ಎಲ್‌ಜೆಪಿ (ರಾಮ್‌ವಿಲಾಸ್) ಗಾಗಿ ಐದು ಲೋಕಸಭಾ ಸ್ಥಾನಗಳನ್ನು ಹಂಚಿತು. ದಿವಂಗತ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ವಾರಸುದಾರರು ಚಿರಾಗ್‌ ಎಂದು ಬಿಜೆಪಿ ಈ ನಡೆಯ ಮೂಲಕ ಒತ್ತಿಹೇಳಿದಂತಾಗಿದೆ.

ಇದರಿಂದ ರೊಚ್ಚಿಗೆದ್ದಿರುವ ಪಾರಸ್ ಅವರು ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದರು. ಅಲ್ಲಿ ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರಕ್ಕೆ ಬರಲಾಯಿತು. “ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವಾಗ ನಮ್ಮ ಪಕ್ಷಕ್ಕೆ ಸರಿಯಾದ ಗೌರವ ನೀಡಿಲ್ಲ. ಈಗ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಂತ್ರರಾಗಿದ್ದೇವೆ” ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಸೋಮವಾರದ ಸಭೆಯಲ್ಲಿ ಪರಾಸ್ ಅವರಲ್ಲದೆ, ಸಂಸದರಾದ ಪ್ರಿನ್ಸ್ ರಾಜ್ (ಸಮಸ್ತಿಪುರ), ಚಂದನ್ ಸಿಂಗ್ (ನವಾಡ), ಮತ್ತು ಮಾಜಿ ಸಂಸದ ಸೂರಜ್‌ಭಾನ್ ಸಿಂಗ್ ಉಪಸ್ಥಿತರಿದ್ದರು. ಬಿಹಾರದಲ್ಲಿ ಆಪ್ ಮಹಾ ಮೈತ್ರಿಕೂಟದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆದಿದೆ. ವರದಿಗಳ ಪ್ರಕಾರ, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್) ಗೆ ಹಂಚಿಕೆಯಾಗಿರುವ ಹಾಜಿಪುರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಪರಾಸ್ ತಿಳಿಸಿದ್ದಾರೆ.

ಸೀಟು ಹಂಚಿಕೆಯಾದ ನಂತರ ಚಿರಾಗ್ ಪಾಸ್ವಾನ್ ಶಿಬಿರ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಪರಾಸ್ ನೇತೃತ್ವದ ಪ್ರತಿಸ್ಪರ್ಧಿ ಬಣವನ್ನು ಬಿಜೆಪಿ ನಿರ್ಲಕ್ಷಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಸಂತೋಷಗೊಂಡರು.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ; ಯಾವ ಸಮೀಕ್ಷೆ, ಎಷ್ಟು ಸೀಟು?

Exit mobile version