Site icon Vistara News

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Lok Sabha Speaker

ನವದೆಹಲಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಲೋಕಸಭಾ ಸ್ಪೀಕರ್ (Lok Sabha Speaker) ಹುದ್ದೆಗೆ ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು ಬೆಂಬಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವತ್ರಿಕ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಟಿಡಿಪಿಯಿಂದ ಸೋಲನುಭವಿಸಿದ ವೈಎಸ್ಆರ್​ಪಿ ಲೋಕಸಭೆಯಲ್ಲಿ ನಾಲ್ಕು ಸಂಸದರನ್ನು ಹೊಂದಿದೆ. 2019 ರ ಚುನಾವಣೆಯಲ್ಲಿ ಪಕ್ಷವು ದಕ್ಷಿಣ ರಾಜ್ಯವನ್ನು 25 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಈ ವರ್ಷ ನಿರಾಸೆಯಾಗಿತ್ತು. ಚಂದ್ರಬಾಬು ನಾಯ್ಡು ಅವರ ಟಿಡಿಪಿ 16 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಐದು ಸ್ಥಾನಗಳನ್ನು ಗೆದ್ದಿವೆ. ಸ್ಥಳೀಯವಾಗಿ ವಿರೋಧ ಇರುವ ಹೊರತಾಗಿಯೂ ಡೆಲ್ಲಿಯಲ್ಲಿ ಬಿರ್ಲಾ ಅವರನ್ನು ಬೆಂಬಲಿಸಲು ವೈಎಸ್​ಆರ್​ ನಿರ್ಧರಿಸಿದೆ.

ಬೆಂಬಲದ ಪ್ರಸ್ತಾಪವು ಹೆಚ್ಚಿನ ಬದಲಾವಣೆ ಉಂಟು ಮಾಡದು. ಬಿರ್ಲಾ ಮತ್ತು ಬಿಜೆಪಿ ಈಗಾಗಲೇ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಖ್ಯಾಬಲ ಹೊಂದಿದೆ. ಆದಾಗ್ಯೂ ಜಗನ್ ಬಿಜೆಪಿ ಕಡೆಗೆ ಒಲವು ತೋರಿದೆ. ವೈಎಸ್ಆರ್​ಪಿ ಆಗಾಗ್ಗೆ ಸಂಸತ್ತಿನಲ್ಲಿ ವಿಶೇಷವಾಗಿ ರಾಜ್ಯಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ. ಸಂಖ್ಯಾಬಲದ ಕೊರತೆಯಿದ್ದಾಗ ಕಾನೂನುಗಳನ್ನು ಅಂಗೀಕರಿಸಲು ನೆರವಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೆಗೆದುಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರ ಮತ್ತು ಜಮ್ಮು ಮತ್ತು 370 ನೇ ವಿಧಿಯನ್ನು ರದ್ದುಪಡಿಸುವುದನ್ನು ರೆಡ್ಡಿ ಬೆಂಬಲಿಸಿದ್ದರು.

ವೈಎಸ್ಆರ್​ಪಿಯಂತೆ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದರು. ಆದಾಗ್ಯೂ, ವೈಎಸ್ಆರ್​​ಪಿಗಿಂತ ಭಿನ್ನವಾಗಿ ಬಿಜೆಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭಾ ಸಂಸದರನ್ನು ಹೊಂದಿಲ್ಲ.

ಇದನ್ನೂ ಓದಿ: Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

ವೈಎಸ್​ಆರ್​​ಪಿ ಹೆಚ್ಚುವರಿ ಮತಗಳು ಬಿರ್ಲಾ ಅವರಿಗೆ 297 ಮತಗಳ ಬೆಂಬಲವನ್ನು ನೀಡುತ್ತದೆ. ಇದು ಅವರಿಗೆ ಭರ್ಜರಿ ಮುನ್ನಡೆ ನೀಡುತ್ತದೆ. ಬಿಜೆಪಿ ಈಗಾಗಲೇ ತನ್ನದೇ ಸಂಸದರಿಂದ 240 ಮತಗಳನ್ನು ಮತ್ತು ಎನ್ಡಿಎ ಪಾಲುದಾರರಿಂದ 53 ಮತಗಳನ್ನು ಹೊಂದಿದೆ. ಇದರಲ್ಲಿ ವೈಎಸ್ಆರ್​ಪಿಯ ಪ್ರತಿಸ್ಪರ್ಧಿ – ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16 ಸಂಸದರೂ ಸೇರಿಕೊಂಡಿದ್ದಾರೆ. ಮತ್ತೊಂದೆಡೆ, ಪ್ರತಿಪಕ್ಷಗಳು 232 ಸಂಸದರನ್ನು ಹೊಂದಿವೆ.

ಸ್ಪೀಕರ್ ಚುನಾವಣೆ ಸರಳ ಬಹುಮತದ ಮೇಲೆ ಆಧಾರಿತವಾಗಿದೆ. 17ನೇ ಲೋಕಸಭೆಯ ಸ್ಪೀಕರ್ ಆಗಿದ್ದ ಬಿರ್ಲಾ ಅವರು ಕೇರಳದ ಮಾವೆಲಿಕರದಿಂದ ಎಂಟು ಬಾರಿ ಸಂಸದರಾಗಿರುವ ಕೋಡಿಕುನ್ನಿಲ್ ಸುರೇಶ್ ಅವರನ್ನು ಎದುರಿಸುತ್ತಿದ್ದಾರೆ.

ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಬಿಜೆಪಿ ವಿರೋಧ ಪಕ್ಷಗಳನ್ನು ಸಂಪರ್ಕಿಸಿತ್ತು. ಬಿಜೆಪಿಯೇತರ ಸಂಸದರಿಗೆ ಉಪಸಭಾಪತಿ ಸ್ಥಾನ ನೀಡಿದರೆ ಮಾತ್ರ ಬಿರ್ಲಾ ಅವರನ್ನು ಬೆಂಬಲಿಸುವುದಾಗಿ ಪ್ರತಿಪಕ್ಷಗಳು ಸೂಚಿಸಿದ್ದವು.

Exit mobile version