Site icon Vistara News

DK Shivakumar: ಡಿಕೆ ಶಿವಕುಮಾರ್‌ಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟೀಸ್

DCM DK Shivakumar

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DCM DK Shivakumar) ಅವರಿಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಪೊಲೀಸರು (Lokayukta police) ನೋಟೀಸ್‌ (Notice) ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ (disproportionate assets) ಪ್ರಕರಣದಲ್ಲಿ ಈ ನೋಟೀಸ್‌ ನೀಡಲಾಗಿದೆ.

ಈ ಪ್ರಕರಣದ ತನಿಖೆಯನ್ನು ಹಿಂದಿನ ಸರ್ಕಾರ ಸಿಬಿಐಗೆ ನೀಡಿತ್ತು. ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ಸು ಪಡೆದು ಲೋಕಾಯುಕ್ತ ತನಿಖೆಗೆ ರಾಜ್ಯ ಸರ್ಕಾರ ವಹಿಸಿದೆ. ಈ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಇಂದು ಕ್ಯಾಬಿನೆಟ್‌ ಸಭೆಯಲ್ಲಿ ಡಿಸಿಎಂ ಭಾಗವಹಿಸಿದ್ದು, ಅದು ಮುಗಿದ ಬಳಿಕ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಇದೇ ವರ್ಷದ ಫೆಬ್ರವರಿಯಲ್ಲಿ ಡಿಕೆಶಿಯವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದ ಈ ಹಿಂದಿನ ರಾಜ್ಯ ಸರ್ಕಾರದ ನಿರ್ಧಾರವನ್ನು ಸಿದ್ದರಾಮಯ್ಯನವರ ಸರ್ಕಾರ ಹಿಂಪಡೆದಿತ್ತು. ಸಿಬಿಐನಿಂದ ಹಿಂಪಡೆಯಲಾದ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಲಾಗಿತ್ತು. ಅದಾದ ನಂತರ, ಲೋಕಾಯುಕ್ತ ಸಂಸ್ಥೆಯು ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಆ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸಲ್ಲಿಸುವಂತೆಯೂ ಹಿಂದೆ ನೋಟಿಸ್ ನೀಡಲಾಗಿತ್ತು.

ಈ ಹಿಂದೆ, ರಾಜ್ಯ ಸರ್ಕಾರ ಡಿಕೆಶಿಯವರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ಮೇಲೆ ಸಿಬಿಐ, ಡಿಕೆಶಿಯವರ ವಿರುದ್ಧ ಕೆಲವು ಆರೋಪಗಳನ್ನು ದಾಖಲಿಸಿತ್ತು. ಮೂಲಗಳ ಪ್ರಕಾರ, ಆ ಆರೋಪಪಟ್ಟಿಯಲ್ಲಿ, 2013ರಲ್ಲಿ ಡಿಕೆ ಶಿವಕುಮಾರ್ ಅವರ ಕುಟುಂಬ 33 ಕೋಟಿ ರೂ.ಗಳ ಆಸ್ತಿ ಹೊಂದಿತ್ತು. ಆದರೆ, ಆನಂತರದ ಐದು ವರ್ಷಗಳಲ್ಲಿ, ಅಂದರೆ 2018ರಲ್ಲಿ ಅವರ ಕುಟುಂಬದ ಆಸ್ತಿ 166.79 ಕೋಟಿ ರೂ. ಗಳಿಗೆ ಏರಿಕೆಯಾಗಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಇದೇ ಅವಧಿಯಲ್ಲಿ 113.20 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂಬ ಮತ್ತೊಂದು ಆರೋಪವನ್ನೂ ಮಾಡಲಾಗಿತ್ತು. ಅವರ ಆದಾಯಕ್ಕೆ, ಅವರು ಗಳಿಸಿರುವ ಆಸ್ತಿಗೆ ಹಾಗೂ ಅವರು ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ ಅವರಿಗೆ ಅವರ ಆದಾಯಕ್ಕಿಂತ ಶೇ. 44.93ರಷ್ಟು ಹೆಚ್ಚು ಆಸ್ತಿಯಿದೆ ಎಂದು ತನ್ನ ಪ್ರಾಥಮಿಕ ವರದಿಯಲ್ಲಿ ಸಿಬಿಐ ಉಲ್ಲೇಖಿಸಿತ್ತು.

ಯಾರು ಬೇಕಾದರೂ ಬಯ್ಯಲಿ, ನೀರು ಬೆಲೆ ಏರಿಕೆ ಮಾಡೋನೇ ನಾನು: ಡಿಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಏರಿಕೆ ಮಾಡಲೇಬೇಕಿದೆ. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಹಣವಿಲ್ಲ. ಯಾರು ಏನು ಹೇಳಿದರೂ ನಾನು ನೀರಿನ ಬೆಲೆ ಏರಿಸುವವನೇ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ‌ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ‌ ಸಭೆ ಮತ್ತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ಇಂದಿನ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಈ ವಿಷಯ ಇಲ್ಲ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ನಾಗರಿಕರಿಗೆ ಎಷ್ಟು ಮಾಡಿದರೂ ಅಷ್ಟೆ, ಅವರಿಗೆ ಉಪಕಾರ ಸ್ಮರಣೆ ಇಲ್ಲ. ಬೈತಾರೆ, ಕಾಮೆಂಟ್ ಮಾಡ್ತಾರೆ, ವಾಟ್ಸ್ಯಾಪ್‌ನಲ್ಲಿ ಹಾಕ್ತಾರೆ. ನಂತರ ಮರೆತು ಬಿಡ್ತಾರೆ. ನೀರು ಕೊಟ್ಟರೆ ತಗೋತಾರೆ ಅಷ್ಟೆ. ಕೆಲವರು ದುಡ್ಡು ಕಟ್ಟುವವರು ಕಟ್ಟುತ್ತಾರೆ, ಕೆಲವರು ಕಟ್ಟಲ್ಲ. ಮೀಡಿಯಾದವರಾದರೂ ಬೈಯಲಿ, ಜನರಾದರೂ ಬಯ್ಯಲಿ, ವಿರೋಧ ಪಕ್ಷದವರಾದರೂ ವಿರೋಧ ಮಾಡಲಿ. ಕಂಪನಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ‌ ಮಾಡಿಯೇ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರಾ? ಡಿಕೆ ಶಿವಕುಮಾರ್ ಏನಂದ್ರು?

Exit mobile version