Site icon Vistara News

Lokayukta Raid: ಶಾಸಕರ ಪುತ್ರ ತಂದ ಕಳಂಕ, ರಾಜ್ಯ ನಾಯಕರ ವಿರುದ್ಧ ಅಮಿತ್ ಶಾ ಸಿಡಿಮಿಡಿ, ಮೋದಿ ನೇತೃತ್ವದಲ್ಲಿ ಚುನಾವಣೆ?

Amit Shah

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ ಪಕ್ಷಕ್ಕೆ ನೆಗೆಟವ್‌ ಆಗಬಹುದು ಎಂಬ ಆತಂಕ ತಲೆದೋರಿದ್ದು, ಬಿಜೆಪಿ ಸುಪ್ರೀಂ ನಾಯಕ ಅಮಿತ್‌ ಶಾ ಇದರಿಂದ ಗರಂ ಆಗಿದ್ದಾರೆ.

ಚುನಾವಣೆ ಸಮಯಕ್ಕೆ ಸರಿಯಾಗಿ ಪಕ್ಷದ ಶಾಸಕರ ಮಗ ಲೋಕಾಯುಕ್ತ ಟ್ರಾಪ್‌ಗೆ ಬಿದ್ದಿರುವುದರಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂದು ಸಿಡಿಮಿಡಿಯಾಗಿರುವ ಶಾ, ಕೂಡಲೇ ಡ್ಯಾಮೇಜ್ ಕಂಟ್ರೋಲ್ ಮಾಡುವಂತೆ ಸಿಎಂಗೆ ಖಡಕ್ ಸೂಚನೆ ನೀಡಿದ್ದಾರೆ.

ವಿಪಕ್ಷ ಕಾಂಗ್ರೆಸ್‌ಗೆ ಪಕ್ಷದ ವಿರುದ್ಧ ಅಸ್ತ್ರದ ಮೇಲೆ ಅಸ್ತ್ರ ಕೊಡುತ್ತಿರುವುದಕ್ಕೆ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಆರೋಪ ಮಾಡುತ್ತಿದ್ದ 40% ಕಮಿಷನ್ ಆರೋಪಕ್ಕೆ ದಾಖಲೆ ಒದಗಿಸಿಕೊಟ್ಟಿರುವುದಕ್ಕೆ ಅವರು ಈ ಮೊದಲೇ ಅಸಮಾಧಾನ ಸೂಚಿಸಿದ್ದರು. ನಿನ್ನೆ ಇಡೀ ದಿನ ರಾಜ್ಯ ನಾಯಕರ ಮೇಲೆ ಅಮಿತ್ ಶಾ ಹಾರಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಶಾಸಕರ ಪುತ್ರನ ವಿಚಾರ ದೊಡ್ಡ ಸುದ್ದಿಯಾಗಿದ್ದೇ ಶಾ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ಬಂದು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತಾಡುತ್ತಿದ್ದರೆ, ನೀವು ಇಲ್ಲಿ ದಿನನಿತ್ಯ ಭ್ರಷ್ಟಾಚಾರದ ಆರೋಪದಲ್ಲಿ ಸಿಕ್ಕಿಬೀಳುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ

ಈ ಪ್ರಕರಣದಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ಕಳಂಕ ಮೆತ್ತಿಕೊಂಡಿದ್ದು, ರಾಜ್ಯ ನಾಯಕರ ನಾಯಕತ್ವದಲ್ಲಿ ಚುನಾವಣೆ ನಡೆಸಲು ಹೈಕಮಾಂಡ್ ಹಿಂದೇಟು ಹಾಕಿದಂತಿದೆ. ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಚುನಾವಣೆ ನಡೆಸುವ ಬಗ್ಗೆ ಅಮಿತ್ ಶಾ ಗಂಭೀರ ಚಿಂತನೆ ನಡೆಸಿದ್ದಾರೆ. ಸ್ವಚ್ಛ ಆಡಳಿತದ ಬಗ್ಗೆ ಪ್ರಸ್ತಾಪ ಮಾಡಲು ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಬಗ್ಗೆ ಅಮಿತ್ ಶಾ ಚಿಂತಿಸಿದ್ದಾರೆ. ನಿನ್ನೆ ರಾಜ್ಯದಲ್ಲಿದ್ದ ಅವರು ಬರೀ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮಾತ್ರ ಪ್ರಸ್ತಾಪ ಮಾಡಿದ್ದರು. ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಇದು ರಾಜ್ಯದಲ್ಲಿ ಮೋದಿ ನೇತೃತ್ವದಲ್ಲಿ ಚುನಾವಣೆ ನಡೆಸಲು ಶಾ ಹಾಕಿದ ಮುನ್ನುಡಿ ಎಂದು ಭಾವಿಸಲಾಗಿದೆ.

ಇದನ್ನೂ ಓದಿ: Lokayukta raid : ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿದ್ದು 8.13 ಕೋಟಿ ಹಣ, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಂ. 1 ಆರೋಪಿ

Exit mobile version