ಹುಬ್ಬಳ್ಳಿ: ರಾಜ್ಯದಲ್ಲಿ ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು (Love Jihad) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದು ಯುವತಿಯರ ರಕ್ಷಣೆಗೆ ಶ್ರೀ ರಾಮಸೇನೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯದ ಯಾವುದೇ ಹಿಂದು ಯುವತಿಯರಿಗೆ ಅನ್ಯ ಧರ್ಮದವರು ತೊಂದರೆ ನೀಡಿದರೆ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಶ್ರೀರಾಮ್ ಸೇನೆ ತಿಳಿಸಿದೆ.
ನಗರದ ಕ್ಯುಬಿಕ್ಸ್ ಹೋಟೆಲ್‌ನಲ್ಲಿ ಲವ್ ಜಿಹಾದ್ ಜಾಗೃತಿಗಾಗಿ ಸಹಾಯವಾಣಿಗೆ (9090443444) ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನೇಹಾ ಹಿರೇಮಠ ಕುಟುಂಬಸ್ಥರು, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಶ್ರೀರಾಮಸೇನೆ ಪದಾಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದು ಹೆಣ್ಮಕ್ಕಳ ಮತಾಂತರ, ಅತ್ಯಾಚಾರ ನಡೆಯುತ್ತಿದೆ. ಘಜ್ನಿ, ಘೋರಿ, ಟಿಪ್ಪು ಸುಲ್ತಾನ್‌ವರೆಗೂ ಈ ಪ್ರಕ್ರಿಯೆ ಚಾಲನೆಯಲ್ಲಿದೆ. ಹಿಂದು ಯುವತಿಯರಿಗಾಗಿ ನಾವು ಸಹಾಯವಾಣಿ ಉದ್ಘಾಟನೆ ಮಾಡಿದ್ದೇವೆ. ಯಾವುದೇ ಸಮಸ್ಯೆ ಇದ್ದರೂ ನಮಗೆ ತಿಳಿಸಬೇಕು, ನಾವು 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಹಿಂದು ಹೆಣ್ಮಕ್ಕಳು ಸಾಯಬೇಡಿ, ನೀವು ಸಾಯಿಸೋ ಯೋಚನೆ ಮಾಡಬೇಕು. ನಾವು ನಿಮಗೆ ಟ್ರೇನಿಂಗ್ ಕೊಡ್ತೀವಿ, ಕ್ರೂರತನಕ್ಕೆ ಅಲ್ಲೆ ಉತ್ತರ ಕೊಡಬೇಕು. ಹಾಡಹಗಲೇ ನೇಹಾ ಕೊಲೆಯಾಗುತ್ತೆ ಅಂದ್ರೆ ಅವರಿಗೆ ಎಷ್ಟು ಟ್ರೈನಿಂಗ್ ಕೊಟ್ಟಿರಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರೇ ನೀವು ಮುಸ್ಲಿಂ ಮತಗಳಿಗಾಗಿ ಜೊಲ್ಲು ಸುರಿಸಬೇಡಿ. ಮುಸ್ಲಿಂ ಯುವಕರು ನಿಮ್ಮ ಹೆಣ್ಣುಮಕ್ಕಳನ್ನೂ ಬಿಡೋದಿಲ್ಲ. ಸರ್ಕಾರ, ರಾಜಕಾರಣಿಗಳು ಫೇಲ್ ಆಗಿದ್ದಕ್ಕೆ ನಾವು ಇದಕ್ಕೆ ಮುಂದಾಗಿದ್ದೇವೆ. ಹೌದು, ಇದು ನೈತಿಕ ಪೋಲಿಸ್ ಗಿರಿ. ಸರ್ಕಾರ ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ನಾವು ನೈತಿಕ ಪೊಲೀಸ್ ಗಿರಿ ಆರಂಭಿಸಿದ್ದೇವೆ. ನಾವು ಹಿಂದು ಹೆಣ್ಣುಮಕ್ಕಳಿಗೆ ಬರೀ ತ್ರಿಶೂಲ ಮಾತ್ರ ಅಲ್ಲಾ, ಗನ್, ಲಾಂಗ್ ಮಚ್ಚು ಟ್ರೈನಿಂಗ್ ನೀಡುತ್ತೇವೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೇ ದಾವಣಗೆರೆ, ಕಲಬುರಗಿ, ಬಾಗಲಕೋಟೆ, ಬೆಂಗಳೂರು ಸೇರಿ ವಿವಿಧೆಡೆ ಲವ್ ಜಿಹಾದ್ ತಡೆಗೆ ಶ್ರೀರಾಮಸೇನಿಯ ಸಹಾಯವಾಣಿಗೆ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ.