Site icon Vistara News

LPG Subsidy: ಎಲ್‌ಪಿಜಿ ಸಬ್ಸಿಡಿ ಸಿಗಬೇಕೆಂದರೆ ಡಿಸೆಂಬರ್‌ 31ರೊಳಗೆ ಈ ಕೆಲಸ ಮಾಡಲೇಬೇಕು!

lpg

lpg

ನವದೆಹಲಿ: ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಎಲ್‌ಪಿಜಿ ಸಬ್ಸಿಡಿ (LPG Subsidy) ಪಡೆಯಲು ಪ್ರತಿಯೊಬ್ಬರೂ ಇ-ಕೆವೈಸಿ (e-kyc) ಮಾಡಿಸಲು ಸೂಚಿಸಿದೆ. ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದೆ. ಎಲ್‌ಪಿಜಿ ಸಂಪರ್ಕ ಹೊಂದಿರುವ ಎಲ್ಲ ಫಲಾನುಭವಿಗಳು ಈ ವರ್ಷದ ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡಿಸಬೇಕು. ಇದುವರೆಗೆ ಕೇವಲ ಅರ್ಧದಷ್ಟು ಜನರು ಇ-ಕೆವೈಸಿಯನ್ನು ಮಾಡಿಸಿದ್ದು, ಉಳಿದವರು ಕೂಡಲೇ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ತಿಳಿಸಿದೆ.

ಯಾಕೆ ಅಗತ್ಯ?

ಗ್ಯಾಸ್ ಸಿಲಿಂಡರ್ ರೀಫಿಲ್ ಮೇಲೆ ಸಬ್ಸಿಡಿ ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯ. ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸೂಚನೆಯ ಪ್ರಕಾರ, ಇ-ಕೆವೈಸಿ ಮಾಡಲು ಗ್ರಾಹಕರು ಬಳಸುತ್ತಿರುವ ಗ್ಯಾಸ್ ಸಿಲಿಂಡರ್ ಏಜೆನ್ಸಿಯನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ ಗ್ರಾಹಕರಿಗೆ ಲಭ್ಯವಿರುವ ಸಬ್ಸಿಡಿ ಮರುಪಾವತಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅರ್ಹವುಳ್ಳ ಜನರಿಗೆ ಮಾತ್ರ ಈ ಸಬ್ಸಿಡಿಯ ಸಹಾಯಧನವು ದೊರೆಯಬೇಕು. ಕೆಲವು ಜನರು ಅರ್ಹತೆ ಇಲ್ಲದಿದ್ದರೂ ವಂಚನೆಯಿಂದ ಸಹಾಯಧನವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ವಂಚನೆಗೆ ಬ್ರೇಕ್‌ ಹಾಕಲು ಸರ್ಕಾರವು ಈ ಮಹತ್ವದ ಸೂಚನೆ ನೀಡಿದೆ.

ಎಲ್ಲಿ ಇ-ಕೆವೈಸಿ ಮಾಡಿಸಬೇಕು?

ಬಯೋಮೆಟ್ರಿಕ್ ವಿಧಾನದ ಮೂಲಕ ಇ-ಕೆವೈಸಿ ಮಾಡಲಾಗುತ್ತಿದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಗ್ಯಾಸ್ ಸಂಪರ್ಕದ ಡೀಲರ್‌ ಕಚೇರಿಗೆ ಭೇಟಿ ನೀಡಬೇಕು. ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಸಂಪರ್ಕದ ನಕಲು ಪ್ರತಿಯನ್ನು ಕೊಂಡೊಯ್ಯುವುದನ್ನು ಮರೆಯಬೇಡಿ. ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಇ-ಕೆವೈಸಿ ಮಾಡಿಕೊಡಲಾಗುತ್ತದೆ. ಸರ್ಕಾರದ ಸೂಚನೆಯ ಮೇರೆಗೆ ಇ-ಕೆವೈಸಿಯನ್ನು ನವೆಂಬರ್ 25ರಂದೇ ಪ್ರಾರಂಭಿಸಲಾಗಿದೆ. ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸೂಚನೆಗಳಿಗೆ ಅನುಸಾರವಾಗಿ ಗ್ರಾಹಕರ ಇ-ಕೆವೈಸಿ ಕೆಲಸ ನಡೆಯುತ್ತಿದೆ.

ಎಲ್‌ಪಿಜಿ ಗ್ರಾಹಕರ ಖಾತೆಗೆ ಈ ಸಬ್ಸಿಡಿ ಹಣವನ್ನು ನೇರವಾಗಿ ಜಮೆ ಮಾಡಲಾಗುತ್ತದೆ. ವಾರ್ಷಿಕ ಆದಾಯ 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ಇರುವವರಿಗೆ ಯಾವುದೇ ಸಬ್ಸಿಡಿ ಸಿಗುವುದಿಲ್ಲ. ಈ ಮಧ್ಯೆ ಒಂದು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಎರಡು ಬಾರಿ ಪರಿಷ್ಕರಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಕಡಿಮೆ ಆದಾಯದ ಕುಟುಂಬಗಳಿಗೆ ಸಿಲಿಂಡರ್‌ಗೆ 300 ರೂ.ಗೆ ಸಬ್ಸಿಡಿ ಹೆಚ್ಚಿಸಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಬಗ್ಗೆ ಮಾಹಿತಿ ನೀಡಿ, “ಉಜ್ವಲ ಯೋಜನೆಯ ಫಲಾನುಭವಿಗಳು ಈಗ ಹಿಂದಿನ 200 ರೂ.ಗಳ ಬದಲು 300 ರೂ.ಗಳ ಸಬ್ಸಿಡಿಯನ್ನು ಪಡೆಯುತ್ತಾರೆ” ಎಂದು ಹೇಳಿದ್ದರು. ಇದರಿಂದ ದೇಶದ ಸುಮಾರು 9.6 ಕೋಟಿ ಬಡ ಕುಟುಂಬಗಳಿಗೆ ಪ್ರಯೋಜನವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಪಕ್ಷಗಳು ದೂರಿವೆ.

ಇದನ್ನೂ ಓದಿ: LPG Price: ಎಲ್‌ಪಿಜಿ ಸಿಲಿಂಡರ್‌ ಬೆಲೆ 57 ರೂ. ಇಳಿಕೆ; ಹೊಸ ದರ ಚೆಕ್‌ ಮಾಡಿಕೊಳ್ಳಿ

Exit mobile version