ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದಮೇಲೆ ಉಳಿಸಿಕೊಂಡಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು (LPG Price) 450 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಮಧ್ಯಪ್ರದೇಶದ 40 ಲಕ್ಷ ಮಹಿಳೆಯರು ಇನ್ನು 450 ರೂ.ಗೆ 14.2 ಕೆ.ಜಿಯ ಸಿಲಿಂಡರ್ ಖರೀದಿಸಬಹುದಾಗಿದೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ ಕುರಿತು ಮೋಹನ್ ಯಾದವ್ ಅವರೇ ಮಾಹಿತಿ ನೀಡಿದ್ದಾರೆ. “ಲಾಡ್ಲಿ ಬೆಹನಾ ಯೋಜನೆಗೆ ನೋಂದಣಿ ಮಾಡಿಕೊಂಡಿರುವ 40 ಲಕ್ಷ ಮಹಿಳೆಯರಿಗೆ ಇನ್ನು 450 ರೂ.ಗೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗುತ್ತದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಹಾಗೂ ಪಿಎಂಯುವೈ ಯೋಜನೆ ಅಲ್ಲದೆಯೂ ಲಾಡ್ಲಿ ಬೆಹನಾ ಯೋಜನೆ ಅಡಿಯಲ್ಲಿ 450 ರೂ.ಗೆ ಅಡುಗೆ ಅನಿಲ ಸಿಲಿಂಡರ್ ಖರೀದಿಸಬಹುದಾಗಿದೆ. ಸಾವನ್ ಹಾಗೂ ರಕ್ಷಾ ಬಂಧನದ ಪವಿತ್ರ ಹಬ್ಬಗಳ ಹೊತ್ತಿನಲ್ಲೇ ರಾಜ್ಯ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ” ಎಂದು ಮೋಹನ್ ಯಾದವ್ ತಿಳಿಸಿದ್ದಾರೆ.
प्रदेश की पात्र बहनों को ₹450 में मिलेगा गैस सिलेंडर…#DrMohanYadav#CMMadhyaPradesh pic.twitter.com/NkDEfJ5do9
— Dr Mohan Yadav (@DrMohanYadav51) July 30, 2024
“ನಮ್ಮ ಸರ್ಕಾರವು ಜನ ಕಲ್ಯಾಣ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂಬುದಾಗಿ ಇದಕ್ಕೂ ಮೊದಲು ಹೇಳಿದ್ದೆ. ಈಗಲೂ ಇದನ್ನೇ ಹೇಳುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಹಾಗೆಯೇ, ರಾಜ್ಯದ ಅಭಿವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೂ ಪ್ರಾಮುಖ್ಯತೆ ಕೊಡುತ್ತೇವೆ” ಎಂದು ತಿಳಿಸಿದರು.
ಮೋಹನ್ ಯಾದವ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಕೈಲಾಶ್ ವಿಜಯವರ್ಗೀಯ ಅವರು ಮುಖ್ಯಮಂತ್ರಿ ಲಾಡ್ಲಿ ಬೆಹನಾ (ಮಹಿಳೆಯರಿಗೆ ಹಣಕಾಸು ನೆರವು ನೀಡುವ ದಿಸೆಯಲ್ಲಿ 2023ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆ) ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 450 ರೂ.ಗೆ ಅಡುಗೆ ಅನಿಲ ನೀಡುವ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿತು.
ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಕೈಲಾಶ್ ವಿಜಯವರ್ಗೀಯ ಮಾಹಿತಿ ನೀಡಿದರು. “ರಾಜ್ಯದಲ್ಲಿ ಈಗ ಒಂದು ಎಲ್‌ಪಿಜಿ ಸಿಲಿಂಡರ್ ಬೆಲೆ 848 ರೂ. ಇದೆ. ಲಾಡ್ಲಿ ಬೆಹನಾ ಯೋಜನೆಯ ಫಲಾನುಭವಿಗಳು 450 ರೂ. ಪಾವತಿಸಿದರೆ ಸಾಕು, ಅಡುಗೆ ಅನಿಲ ಸಿಲಿಂಡರ್ ಸಿಗುತ್ತದೆ. ಉಳಿದ 398 ರೂಪಾಯಿಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ 160 ಕೋಟಿ ರೂ. ವಿನಿಯೋಗಿಸಲಾಗಿದೆ” ಎಂಬುದಾಗಿ ತಿಳಿಸಿದರು.
ಇದನ್ನೂ ಓದಿ: LPG Price Cut: ತಿಂಗಳ ಆರಂಭದಲ್ಲೇ ಗುಡ್‌ನ್ಯೂಸ್; ಎಲ್‌ಪಿಜಿ ಬೆಲೆ 19 ರೂ. ಇಳಿಕೆ