ಮಹಾರಾಷ್ಟ್ರದ ರಾಜಕೀಯ ಕ್ಷಿಪ್ರ ಬೆಳವಣಿಗೆಗಳಿಂದ ದೇಶದ ಗಮನ ಸೆಳೆಯುತ್ತಿದೆ. ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಬೆಂಬಲ ಸೂಚಿಸಿದ್ದು, ಡಿಸಿಎಂ ಆಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಮುಂದುವರಿದ ಬೆಳವಣಿಗೆಯಾಗಿ ಅಜಿತ್ ಪವಾರ್‌ಗೆ ಬೆಂಬಲ ನೀಡಿದ್ದ ಮೂವರು ಎನ್‌ಸಿಪಿ ನಾಯಕರನ್ನು ಪಕ್ಷದ ಅಧಿನಾಯಕ ಶರದದ್ ಪವಾರ್ ಅವರು ಅಮಾನತುಗೊಳಿಸಿದ್ದಾರೆ. ಹಾಗೆಯೇ 9 ಶಾಸಕರು ಹಾಗೂ ಇಬ್ಬರು ಸಂಸದರ ಅನರ್ಹತೆಗೂ ಮನವಿ ಮಾಡಿದ್ದಾರೆ. ಪಕ್ಷದ ಅಧ್ಯಕ್ಷರ ಅರಿವಿಗೆ ಬಾರದೆ, ಒಪ್ಪಿಗೆಯಿಲ್ಲದೆ ಪಕ್ಷಾಂತರ ನಡೆಸಿರುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಇದು ಶಾಸಕರ ಅನರ್ಹತೆಗೆ ದಾರಿ ಮಾಡಿಕೊಡುತ್ತದೆ ಎಂದು ರಾಜ್ಯ ಶಿಸ್ತು ಸಮಿತಿಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆ ಮುನ್ನೆಲೆಗಳು ಹಾಗೂ ಇಲ್ಲಿ ಒಳಗೊಂಡಿರುವ ಮೂರು ಪಕ್ಷಗಳ ಕಾರ್ಯತಂತ್ರಗಳು ಕುತೂಹಲಕರವಾಗಿವೆ. ಎನ್‌ಸಿಪಿ, ಬಿಜೆಪಿ ಹಾಗೂ ಶಿವಸೇನೆ ಬಣ ನಡೆಸುತ್ತಿರುವ ರಾಜಕೀಯ ಆಟ ಈಗ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಎರಡು ತಿಂಗಳ ಹಿಂದೆ ಎನ್‌ಸಿಪಿಯ ಮಹಾನಾಯಕ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾಗಿದ್ದುದು ಈ ಬೆಳವಣಿಗೆಯ ಮೊದಲಿನ ಹಂತ. ಮೇ ತಿಂಗಳಲ್ಲೇ ಪಕ್ಷದಿಂದ ಹೊರಬರಲು ಪ್ರಯತ್ನಿಸಿದ್ದ ಅಜಿತ್ ಪವಾರ್ ಅವರ ಪ್ರಯತ್ನವನ್ನು ತಮ್ಮ ರಾಜೀನಾಮೆ ಎಂಬ ಚಾಣಾಕ್ಷ ನಡೆಯಿಂದ ಶರದ್ ಪವಾರ್ ಕೆಡವಿದ್ದರು. ಕಾರ್ಯಕರ್ತರ ಕಣ್ಣೀರಿಗೆ ಕರಗಿದಂತೆ ನಟಿಸಿ ಮತ್ತೆ ರಾಜೀನಾಮೆ ಹಿಂದೆಗೆದುಕೊಂಡಿದ್ದರು. ಸಹಜವಾಗಿಯೇ, ಎನ್‌ಸಿಪಿಯ ಎರಡನೇ ಪವರ್‌ಫುಲ್ ಸ್ಥಾನದಲ್ಲಿದ್ದ ಅಜಿತ್ ಪವಾರ್ ಅವರಿಗೆ ಅಧಿಕಾರ ಹಸ್ತಾಂತರ ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದರು. ಇದರಿಂದ ಕೆರಳಿರುವ ಅಜಿತ್ ಪವಾರ್, ಶಿವಸೇನೆ ಹಾಗೂ ಬಿಜೆಪಿಯ ಬೆಂಬಲ ಪಡೆದು ಅತ್ತ ಹಾರಿದ್ದಾರೆ.
ಇಲ್ಲಿ ಶರದ್ ಪವಾರ್ ಅವರ ಪಾತ್ರ ಏನೂ ಇಲ್ಲ ಎಂದು ಹೇಳಲಾಗುತ್ತದಾದರೂ, ಅವರ ಕೈವಾಡವನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಹಾಗೆಯೇ ಅಜಿತ್ ಪವಾರ್ ಅವರಂಥ ಪ್ರಭಾವಿ ರಾಜಕಾರಣಿಯನ್ನು ಬುಟ್ಟಿಗೆ ಕೆಡವಿಕೊಳ್ಳುವ ಮೂಲಕ ಬಿಜೆಪಿ ಹಾಗೂ ಶಿವಸೇನೆ ಮಹಾರಾಷ್ಟ್ರದಲ್ಲಿ ತಮ್ಮ ಅಧಿಕಾರ- ಮತ ಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿವೆ. ಇದನ್ನು ರಾಜಕೀಯ ಚಾಣಾಕ್ಷತನ ಅನ್ನುವುದಕ್ಕಿಂತಲೂ, ಅನುಕೂಲಸಿಂಧು ರಾಜಕಾರಣ ಎನ್ನುವುದೇ ವಿಹಿತ. ಇಂಥ ರಾಜಕೀಯ ನಾಟಕಗಳು ಜನರನ್ನು ಭ್ರಮನಿರಸನಗೊಳಿಸುತ್ತಿವೆ. ಎನ್‌ಸಿಪಿಯ ಸಿದ್ಧಾಂತ ಬೇರೆ, ಬಿಜೆಪಿಯ ಸಿದ್ಧಾಂತ ಬೇರೆ, ಶಿವಸೇನೆಯ ಸಿದ್ಧಾಂತ ಬೇರೆ ಎಂದೆಲ್ಲಾ ನಂಬಿ ಮತ ಹಾಕುವ ಮತದಾರ, ಎಲ್ಲ ಪಕ್ಷಗಳೂ ಒಂದೇ ತೀರ್ಮಾನಕ್ಕೆ ಬರುವಂತೆ ಈ ಬೆಳವಣಿಗೆಗಳಿಂದ ಆಗುತ್ತಿದೆ. ಪದೇ ಪದೆ ಹೊಸ ಹೊಸ ಮೈತ್ರಿಕೂಟ, ಪಕ್ಷಾಂತರ, ಅಧಿಕಾರ ದಾಹದ ನಡೆಗಳು, ಅಧಿಕಾರ ಕಬಳಿಕೆ, ಸರ್ಕಾರ ಪತನ, ಹೊಸ ಸರ್ಕಾರ ರಚನೆ…ಇವೆಲ್ಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಅಭಿವೃದ್ಧಿ ರಾಜಕಾರಣಕ್ಕಿಂತ ಇಂಥ ಅನುಕೂಲ ಸಿಂಧು ರಾಜಕಾರಣವೇ ವಿಜೃಂಭಿಸುತ್ತಿರುವುದು ವಿಪರ್ಯಾಸ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ : ವಿಶ್ವಕಪ್ಗೆ ವೆಸ್ಟ್ ಇಂಡೀಸ್ ತಂಡ ಅರ್ಹತೆಯನ್ನೇ ಪಡೆಯದಿರುವುದು ಕ್ರಿಕೆಟ್ ದುರಂತ
Party with difference ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿಯೇ ಇಂಥ ರಾಜಕೀಯ ನಾಟಕಗಳ ಸೂತ್ರಧಾರಿ ಆಗುತ್ತಿರುವುದು ವಿಪರ್ಯಾಸ. ಕರ್ನಾಟಕದಲ್ಲಿ ನಡೆದುದು ನಮ್ಮ ಕಣ್ಣ ಮುಂದೆಯೇ ಇದೆ. ಗೋವಾ, ಮಧ್ಯಪ್ರದೇಶ ಮುಂತಾದ ಕಡೆಯೂ ಈ ಚಾಳಿಯನ್ನು ಬಿಜೆಪಿ ಮುಂದುವರಿಸಿದೆ. ದಶಕಗಳ ಹಿಂದೆ ಕಾಂಗ್ರೆಸ್‌ನ ದರಬಾರಿನ ಕಾಲದಲ್ಲಿ ಅನ್ಯ ಪಕ್ಷಗಳ ಸರ್ಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತ ಜಾರಿ ಮಾಡುವುದು, ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವುದು ನಡೆಯುತ್ತಿತ್ತು. ಅದನ್ನು ಆಗ ಬಿಜೆಪಿ ಟೀಕಿಸುತ್ತಿತ್ತು. ಟೀಕಿಸಿ ಅದರ ವಿರುದ್ಧ ಜನಾಭಿಪ್ರಾಯ ರೂಪಿಸಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾದ ಬಿಜೆಪಿ ಈಗ ಅದೇ ಹಾದಿಯನ್ನು ಹಿಡಿದಿರುವುದು, ಇಂಥ ಕೃತ್ಯವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ದುರಂತ. ಇಂಥ ಪಕ್ಷಾಂತರಗಳ ಹಿಂದೆ ಎಷ್ಟು ಪ್ರಮಾಣದ ಕುದುರೆ ವ್ಯಾಪಾರ ನಡೆದಿದೆಯೋ ಯಾರೂ ಬಲ್ಲವರಿಲ್ಲ. ಹೀಗೆ ಧನಬಲದ ದುರ್ವಿನಿಯೋಗದ ಮೂಲಕ ಅಧಿಕಾರ ಪಡೆಯುವವರು ಅದನ್ನು ಜನಹಿತಕ್ಕಾಗಿ ಬಳಸಿಕೊಂಡಾರೇ? ಇಂಥ ಕಪಟ ರಾಜಕಾರಣಕ್ಕೆ ಅಂತ್ಯ ಯಾವಾಗ ಎಂದು ಮತದಾರ ಕೇಳುತ್ತಿದ್ದಾನೆ. ಇಂಥ ರಾಜಕೀಯ ರೋಸಿಹೋದಾಗ ಮತದಾರ ನೀಡುವ ಏಟುಗಳು, ರಾಜಕಾರಣಿಗಳು ಮುಟ್ಟಿ ನೋಡಿಕೊಳ್ಳುವಂತಿರುತ್ತವೆ ಎಂಬುದನ್ನು ಮಾತ್ರ ಮರೆಯಬಾರದು.