ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿಯೆಂದು (Makar Sankranti 2023) ಆಚರಣೆ ಮಾಡಲಾಗುತ್ತದೆ. ಸೂರ್ಯನ ಈ ಚಲನೆ ಪ್ರಕೃತಿಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ರಾಜ್ಯದ ಬಹುತೇಕ ಕಡೆ ಸಂಕ್ರಾಂತಿಯನ್ನು ಸುಗ್ಗಿ ಹಬ್ಬವಾಗಿ ಆಚರಿಸಲಾಗುತ್ತದೆ. ಆಯಾ ಪ್ರದೇಶದ ಸಂಪ್ರದಾಯಕ್ಕೆ ತಕ್ಕಂತೆ ಸಂತಸದಿಂದ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬಕ್ಕೆ ಪೌರಾಣಿಕ ಕಾರಣಗಳು ಸಹ ಇವೆ. ಇದನ್ನು ತಿಳಿದುಕೊಂಡರೆ ಹಬ್ಬಕ್ಕೆ ಮತ್ತಷ್ಟು ಮೆರಗು ಮೂಡುತ್ತದೆ.
ದೇವತೆಗಳಿಗೆ ಹಗಲು ಪ್ರಾರಂಭ
ಕೆಲವು ಶಾಸ್ತ್ರಗಳ ಪ್ರಕಾರ ಮಕರ ಸಂಕ್ರಾಂತಿಯಂದು ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ತನ್ನ ಗತಿಯನ್ನು ಪ್ರಾರಂಭಿಸುತ್ತಾನೆ. ಈ ದಿನದಿಂದ ದೇವತೆಗಳಿಗೆ ಹಗಲು ಆರಂಭವಾಗಲಿದ್ದು, ಇದು ಆರು ತಿಂಗಳ ಕಾಲ ಮುಂದುವರಿಯಲಿದೆ. ಅಂದರೆ, ಆಷಾಢ ಮಾಸದವರೆಗೆ ಇರಲಿದೆ.
ಈ ದಿನ ಸೂರ್ಯ ತನ್ನ ಪುತ್ರನಾದ ಶನಿಯ ಮನೆಗೆ ಪ್ರವೇಶಿಸಲಿದ್ದಾನೆ. ಒಂದು ತಿಂಗಳುಗಳ ಕಾಲ ಅಲ್ಲಿಯೇ ಸ್ಥಿತನಾಗಿರಲಿದ್ದಾನೆ. ಶನಿಯನ್ನು ಮಕರ ರಾಶಿಯ ಅಧಿಪತಿ ಗ್ರಹವೆಂದು ಕರೆಯಲಾಗುತ್ತದೆ. ಹೀಗಾಗಿ ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡಿದ್ದಾನೆಂದರೆ, ಶನಿಯ ಮನೆಗೆ ಹೋಗಿದ್ದಾನೆಂದರ್ಥ.
ಗಂಗೆ ಸಮುದ್ರಕ್ಕೆ ವಿಲೀನವಾದ ದಿನ
ಗಂಗಾ ದೇವಿಯು ಭಗೀರಥನ ಹಿಂದೆ ಹಿಂದೆಯೇ ಹೋಗಿ ಕಪಿಲ ಮುನಿ ಆಶ್ರಮದ ಮೂಲಕ ಸಾಗರವನ್ನು ಸೇರಿದ್ದೂ ಸಹ ಇದೇ ಮಕರ ಸಂಕ್ರಾಂತಿಯ ದಿನವಾಗಿದೆ. ಮಹಾರಾಜ ಭಗೀರಥ ತನ್ನ ಪೂರ್ವಜರಿಗಾಗಿ ಈ ದಿನ ತರ್ಪಣ ಕೊಟ್ಟಿದ್ದ. ಹಾಗಾಗಿ ಅಂದಿನಿಂದ ಮಾಘ ಮಕರ ಸಂಕ್ರಾಂತಿ ಸ್ನಾನ ಮತ್ತು ಮಕರ ಸಂಕ್ರಾಂತಿ ಶ್ರಾದ್ಧ ತರ್ಪಣ ಸಂಪ್ರದಾಯ ಚಾಲ್ತಿಯಲ್ಲಿದೆ.
ಆ ದಿನವೇ ಕಪಿಲ ದಿನ ಆಶ್ರಮಕ್ಕೆ ಗಂಗೆ ಪ್ರವೇಶಿಸಿದ್ದಳು. ಗಂಗೆಯ ಸ್ಪರ್ಶದಿಂದ ಭಗೀರಥನ ಪೂರ್ವಜರಿಗೆ ಸ್ವರ್ಗ ಪ್ರಾಪ್ತಿಯಾಯಿತು. ಆಗ ಗಂಗೆಯಲ್ಲಿ ತ್ರಿಕಾಲ ಸ್ನಾನ ಮಾಡಿ, ಗಂಗಾಜಲವನ್ನು ಸ್ವೀಕರಿಸಿದಲ್ಲಿ ಜನ್ಮಜನ್ಮಗಳ ಪಾಪ ನಾಶವಾಗಿ ಭಕ್ತರ ಏಳು ಪೀಳಿಗೆಯವರೆಗೆ ಮೋಕ್ಷ ಸಿಗುತ್ತದೆ ಎಂದು ಕಪಿಲ ಮುನಿ ವರ ನೀಡಿದನೆಂದು ಹೇಳಲಾಗುತ್ತಿದೆ.
ದೇವತೆ ಮತ್ತು ಅಸುರರ ಸಂಗ್ರಾಮ
ಭಗವಾನ್ ವಿಷ್ಣು ಅಸುರರ ಅಂತ್ಯ ಮಾಡಿ ಯುದ್ಧ ಸಮಾಪ್ತಿಯನ್ನು ಘೋಷಣೆ ಮಾಡಿದ ದಿನವೂ ಇದೆ ಆಗಿದೆ. ಹಾಗಾಗಿ ಕೆಟ್ಟದ್ದು ಮತ್ತು ನಕಾರಾತ್ಮಕತೆಯನ್ನು ಅಂತ್ಯ ಮಾಡುವ ದಿನ ಇದಾಗಿದೆ.
ಭೀಷ್ಮನ ದೇಹತ್ಯಾಗ
ಮಹಾಭಾರತ ಕಾಲದಲ್ಲಿ ಭೀಷ್ಮ ಪಿತಾಮಹ ದೇಹ ತ್ಯಾಗ ಮಾಡಲು ಸೂರ್ಯನು ಉತ್ತರಾಯಣಕ್ಕೆ ಬರುವವರೆಗೂ ಜೀವವನ್ನು ಹಿಡಿದಿಟ್ಟುಕೊಂಡಿದ್ದರು. ಉತ್ತರಾಯಣದಲ್ಲಿ ದೇಹತ್ಯಾಗ ಮಾಡಿದವರ ಆತ್ಮವು ದೇವಲೋಕಕ್ಕೆ ಪ್ರವೇಶಿಸಲಿದೆಯಲ್ಲದೆ, ಪುನರ್ಜನ್ಮ ಇರಲಾರದು ಎಂಬುದೇ ಇದಕ್ಕೆ ಕಾರಣವಾಗಿತ್ತು. ಅಲ್ಲದೆ, ಅವರ ಶ್ರಾದ್ಧ ಸಂಸ್ಕಾರಗಳೂ ಸೂರ್ಯನು ಉತ್ತರಾಯಣದಲ್ಲಿದ್ದಾಗಲೇ ಆಗಲಿದೆ. ಅದರ ಫಲವಾಗಿ ಪಿತೃಗಳ ಪ್ರಸನ್ನತೆಗೆ ಎಳ್ಳಿನ ಅರ್ಘ್ಯ ಮತ್ತು ಜಲ ತರ್ಪಣದ ಪದ್ಧತಿಯು ಮಕರ ಸಂಕ್ರಾಂತಿಯಲ್ಲಿ ಪ್ರಚಲಿತವಾಗಿದೆ. ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನೇ ಉತ್ತರಾಯಣದ ಮಹತ್ವನ್ನು ಹೇಳಿದ್ದಾನೆ.
ಸೂರ್ಯನ ಏಳನೇ ಕಿರಣ
ಭಾರತದ ಪವಿತ್ರ, ಪುಣ್ಯ ನದಿಗಳಾದ ಗಂಗೆ, ಯಮುನಾಗಳ ಮೇಲೆ ಸೂರ್ಯನ ಏಳನೇ ಕಿರಣವು ಬೀಳುವ ಸಮಯವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಹೆಚ್ಚು ಸಮಯ ಸೂರ್ಯನ ಕಿರಣಗಳು ನದಿಗಳ ಮೇಲೆ ಬೀಳಲಿದೆ. ಈ ಭೌಗೋಳಿಕ ಬದಲಾವಣೆಯ ಕಾರಣದಿಂದಾಗಿ ಮಾಘ ಮೇಳದ ವಿಶೇಷ ಹಬ್ಬಗಳಾದ ಮಕರ ಸಂಕ್ರಾಂತಿ ಅಥವಾ ಪೂರ್ಣ ಇಲ್ಲವೇ ಅರ್ಧ ಕುಂಭ ಉತ್ಸವಗಳನ್ನು ಹರಿದ್ವಾರ ಮತ್ತು ಪ್ರಯಾಗದಲ್ಲಿ ಆಯೋಜಿಸಲಾಗುತ್ತದೆ.
ಇದನ್ನೂ ಓದಿ | Makar Sankranti 2023 | ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ: ಹಬ್ಬ ಒಂದೇ ನಾಮ ಹಲವು!