ಮಂಗಳೂರು: ವಾರಾಣಸಿಯ ಜ್ಞಾನವಾಪಿ ಮಾದರಿಯಲ್ಲೇ (Gyanavapi row) ಹಿಂದೂ ದೇವಾಲಯವನ್ನು ಒಡೆದು ಮಳಲಿ ಮಸೀದಿಯನ್ನು (Malali Masjid row) ನಿರ್ಮಿಸಲಾಗಿದೆ. ಹೀಗಾಗಿ ಅಲ್ಲಿ ಸರ್ವೆಗೆ ಅನುಮತಿ ನೀಡಿದಂತೆ ಇಲ್ಲೂ ಸಮೀಕ್ಷೆ ನಡೆಸಿ ಮಸೀದಿಯೊಳಗೆ (Survey in Malali Masjid) ಇರುವ ಹಿಂದು ಕುರುಹುಗಳ ಬಗ್ಗೆ ಗಮನ ಸೆಳೆಯಬೇಕು ಎಂದು ವಿಶ್ವಹಿಂದು ಪರಿಷತ್ (Vishwa hindu parishat) ಆಗ್ರಹಿಸಿದೆ. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ (Third Additional Civil Court) ವಿಶ್ವಹಿಂದು ಪರಿಷತ್‌ನ ಈ ಅರ್ಜಿಯ ವಿಚಾರಣೆ ಬುಧವಾರ (ಫೆಬ್ರವರಿ 6ರಂದು) ವಿಚಾರಣೆಗೆ ಬಂದಿದ್ದು, ಕೋರ್ಟ್ ಇದರ ವಿಚಾರಣೆಯನ್ನು ಫೆಬ್ರವರಿ 8ಕ್ಕೆ ನಿಗದಿ ಮಾಡಿದೆ.
ಮಂಗಳೂರಿನ ಹೊರವಲಯದ ಮಳಲಿ ಜುಮ್ಮಾ ಮಸೀದಿಯ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದ ವೇಳೆ ಕಳೆದ ವರ್ಷ ಮಸೀದಿಯ ಕೆಲವು ಭಾಗಗಳನ್ನು ಕೆಡವಲಾಗಿತ್ತು. ಆಗ ಇದರ ಮೇಲ್ಚಾವಣಿ ಹಿಂದೂ ದೇವಸ್ಥಾನದ ಶೈಲಿಯಲ್ಲಿ ಇರುವುದು ಕಂಡುಬಂದಿತ್ತು. ದೇವಸ್ಥಾನದಲ್ಲಿ ಪಾಣಿ ಪೀಠ ಸೇರಿದಂತೆ ದೇವಸ್ಥಾನದ ಹಲವು ಕುರುಹುಗಳಿರುವುದು ಕಂಡುಬಂದಿತ್ತು. ಹೀಗಾಗಿ ಮಸೀದಿಯ ಒಳಗಿರುವುದು ಶಿವ ಸಾನಿಧ್ಯ. ಹೀಗಾಗಿ ಕಾಮಗಾರಿ ನಿಲ್ಲಿಸಬೇಕು ಮತ್ತು ಮಸೀದಿಯ ಸರ್ವೇ ಕಾರ್ಯ ನಡೆಸಬೇಕು ಎಂದು ಕೋರಿ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದಾವೆ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಳಲಿ ಮಸೀದಿ ಕಮಿಟಿ ಈ ಮಸೀದಿ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೆ ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಜ.31ರಂದು ಆದೇಶಿಸಿತ್ತು.
ಅದರ ಪ್ರಕಾರ, ಫೆಬ್ರವರಿ 6ರಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಶ್ವ ಹಿಂದೂ ಪರಿಷತ್‌ನ ಅರ್ಜಿಯ ವಿಚಾರಣೆ ನಡೆದಿದೆ. ಇದು ವಕ್ಫ್ ಬೋರ್ಡ್ ಆಸ್ತಿ ಹೌದೋ ಅಲ್ಲವೋ ಎಂದು ತೀರ್ಮಾನ ಮಾಡಬೇಕಾಗಿದೆ. ಇದು ಕೆಳ ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದೇ ಅಥವಾ ಮತ್ತೆ ಹೈಕೋರ್ಟೇ ತೀರ್ಮಾನಿಸಬೇಕೇ ಎಂಬ ಗೊಂದಲದ ನಡುವೆ ಸತ್ರ ನ್ಯಾಯಾಲಯವರು ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿದೆ.
ಈ ಮಸೀದಿ ವಕ್ಫ್ ಆಸ್ತಿ ಎನ್ನುವುದಕ್ಕೆ ಸುಮಾರು 700 ವರ್ಷಗಳ ದಾಖಲೆಗಳು ಇವೆ ಎಂದು ವಕ್ಫ್ ಬೋರ್ಡ್ ಅಭಿಪ್ರಾಯಪಟ್ಟಿದೆ. ಅದನ್ನು ಕೋರ್ಟ್ ಮುಂದೆ ಸಾಬೀತುಪಡಿಸಲು ಮಸೀದಿ ಸಮಿತಿ ಸಿದ್ಧತೆ ನಡೆಸಿದೆ. ಫೆಬ್ರವರಿ 8ರಂದು ಸತ್ರ ನ್ಯಾಯಾಲಯವು ಮುಂದಿನ ವಿಚಾರಣೆಯಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: Malali Masjid: ಮಳಲಿ ಮಸೀದಿಯಲ್ಲಿ ಮಂದಿರ ನಿರ್ಮಾಣ ಸಂಕಲ್ಪ; ಹಿಂದು ಸಂಘಟನೆಗಳಿಂದ ಮಸೀದಿ ಮಣ್ಣು ಸಮರ್ಪಿಸಿ ಗಣಹೋಮ
ಮಳಲಿ ವಿವಾದ ನಡೆದು ಬಂದ ದಾರಿ
2022ರ ಏಪ್ರಿಲ್ : ಮಸೀದಿ ಕಾಮಗಾರಿ ವೇಳೆ ದೇವಾಲಯದ ಕುರುಹುಗಳು ಹೊರ ಜಗತ್ತಿಗೆ ಕಂಡಿವೆ.
2022ರ ಏಪ್ರಿಲ್ 22: ಮಸೀದಿಯಲ್ಲಿ ಹಿಂದು ಕುರುಹುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಕೋರಿ ವಿಶ್ವಹಿಂದು ಪರಿಷತ್‌ನಿಂದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ.
2022ರ ಮೇ 25: ವಿಶ್ವ ಹಿಂದು ಪರಿಷತ್ ತಾಂಬೂಲ ಪ್ರಶ್ನೆಯನ್ನು ಆಯೋಜಿಸಿತ್ತು. ಅದರಲ್ಲಿ ಮಸೀದಿಯ ಕಟ್ಟಡದಲ್ಲಿ ದೈವ ಸಾನಿಧ್ಯ ಇದೆ ಎನ್ನುವುದು ತಿಳಿದುಬಂದಿತ್ತು.
2024ರ ಜನವರಿ 31: ಮಳಲಿ ಮಸೀದಿ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿಯಾಗಿದ್ದು, ಕಳೆದ 700 ವರ್ಷಗಳಿಂದ ತನ್ನ ಸುಪರ್ದಿಯಲ್ಲಿದೆ ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್ ಈ ಅಂಶವೂ ಸೇರಿದಂತೆ ಎಲ್ಲ ವಿಚಾರಗಳ ವಿಚಾರಣೆಗೆ ಕೆಳ ನ್ಯಾಯಾಲಯಕ್ಕೆ ಸೂಚಿಸಿದೆ.
ಹಾಗಿದ್ದರೆ ಪ್ರಕರಣದ ಮುಂದಿನ ಹಾದಿ ಏನು?
ಇದೀಗ ಫೆಬ್ರವರಿ 8ರಂದು ಮರು ನಿಗದಿಯಾಗಿರುವ ಅರ್ಜಿಯ ವಿಚಾರಣೆ ಸಂದರ್ಭ ವಿಶ್ವ ಹಿಂದು ಪರಿಷತ್ ಇದು ಹಿಂದುಗಳ ಆಸ್ತಿ ಎಂದು ವಾದ ಮಾಡಲಿದ್ದರೆ ಮಳಲಿ ಮಸೀದಿ ಇದು ವಕ್ಫ್ ಬೋರ್ಡ್ ಸ್ವತ್ತು ಎಂಬುದನ್ನು ಸಾಬೀದು ಪಡಿಸಬೇಕಾಗುತ್ತದೆ.
ಒಂದು ವೇಳೆ ಇದು ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎನ್ನುವುದು ಪ್ರೂವ್ ಆದರೆ ಮುಂದಿನ ವಿಚಾರಣೆ ಸತ್ರ ನ್ಯಾಯಾಲಯದಲ್ಲಿ ನಡೆಯುವುದಿಲ್ಲ. ಬದಲಾಗಿ ವಕ್ಫ್ ಟ್ರಿಬ್ಯುಬಲ್ ಕೋರ್ಟ್ ಗೆ ಮಳಲಿ ಮಸೀದಿ ಪ್ರಕರಣ ವರ್ಗಾವಣೆಯಾಗು ಸಾಧ್ಯತೆ ಇದೆ. ವಕ್ಫ್ ಕೋರ್ಟ್ ಗೆ ವರ್ಗಾವಣೆಯಾದರೆ ಪ್ರಕರಣ ದೀರ್ಘ ಕಾಲದವರೆಗೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.