ನವ ದೆಹಲಿ: ಭಾರತದ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ಮಾಲ್ಡೀವ್ಸ್ ಪಶ್ಚಾತಾಪ ವ್ಯಕ್ತಪಡಿಸಿದೆ. ಅವಹೇಳನಕಾರಿ ಹೇಳಿಕೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ದ್ವೀಪ ರಾಷ್ಟ್ರ ವಿದೇಶಾಂಗ ಸಚಿವ ಮೂಸಾ ಜಮೀರ್ ಗುರುವಾರ ಭರವಸೆ ನೀಡಿದ್ದಾರೆ. ಭಾರತ ಭೇಟಿಯಲ್ಲಿರುವ ಜಮೀರ್, ಮಾಲ್ಡೀವ್ಸ್ ಮತ್ತು ಭಾರತ ಸರ್ಕಾರಗಳು ಆಗಿರುವ ವಿಷಯಗಳನ್ನು ಅರ್ಥಮಾಡಿಕೊಂಡಿವೆ. ಆ ಹಂತವನ್ನು ದಾಟಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
“ಭಾರತ ವಿರೋಧಿ ಹೇಳಿಕೆಗಳು ನಮ್ಮ ಸರ್ಕಾರದ ನಿಲುವಲ್ಲ ಎಂದು ನಾವು ಆರಂಭದಲ್ಲಿಯೇ ಹೇಳಿದ್ದೇವೆ. ಅದನ್ನು ಮಾಡಬಾರದಿತ್ತು ಎಂಬುದನ್ನೂ ಅರಿತುಕೊಂಡಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ನಾವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ತಿಳುವಳಿಕೆ ಸೃಷ್ಟಿಯಾಗಿದೆ. ಏನಾಯಿತು ಎಂದು ಮಾಲ್ಡೀವ್ಸ್ ಮತ್ತು ಭಾರತದ ಸರ್ಕಾರಗಳು ಅರ್ಥಮಾಡಿಕೊಂಡಿವೆ” ಎಂದು ಮಾಲ್ಡೀವ್ಸ್ ಸಚಿವರು ಹೇಳಿಕೆ ನೀಡಿದ್ದಾರೆ.
Welcomed FM @MoosaZameer of Maldives this afternoon.
— Dr. S. Jaishankar (Modi Ka Parivar) (@DrSJaishankar) May 9, 2024
My remarks at our talks: pic.twitter.com/T8t64bQxLT
ಮಾಜಿ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರು ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಮೋದಿ ಲಕ್ಷ್ಮ ದ್ವೀಪಕ್ಕೆ ಭೇಟಿ ನೀಡಿದ್ದ ಬಳಿಕ ಅವರು ಈ ಅನಪೇಕ್ಷಿತ ಹೇಳಿಕೆಗಳನ್ನು ಕೊಟ್ಟಿದ್ದರು. ನಂತರ ಉಭಯ ದೇಶಗಳ ನಡುವಿನ ಸಂಬಂಧದ ಹದಗೆಟ್ಟಿತ್ತು.
ಭಾರತೀಯ ಮಿಲಿಟರಿ ಸಿಬ್ಬಂದಿ ಮಾಲ್ಡೀವ್ಸ್ ತೊರೆಯಲು ಮೊಹಮ್ಮದ್ ಮುಯಿಝು ಮೇ 10 ರ ಗಡುವನ್ನು ನಿಗದಿಪಡಿಸಿದ ನಂತರ ಸಂಬಂಧಗಳು ಮತ್ತಷ್ಟು ಹಾಳಾಗಿದ್ದವು. ಏತನ್ಮಧ್ಯೆ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮೂಸಾ ಜಮೀರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ-ಮಾಲ್ಡೀವ್ಸ್ ಸಂಬಂಧಗಳ ಅಭಿವೃದ್ಧಿಯು “ಪರಸ್ಪರ ಹಿತಾಸಕ್ತಿಗಳನ್ನು” ಆಧರಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಮಾಲ್ಡೀವ್ಸ್ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಸಂಬಂಧ ವೃದ್ಧಿಸುವ ಮತ್ತು ಪರಸ್ಪರ ವಿನಿಮಯ ಹೆಚ್ಚಿಸುವ ಬಗ್ಗೆ ನಾವು ನಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಜಮೀರ್ ಸಭೆಯ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್ 1100 ಅಂಕಗಳಷ್ಟು ಪತನ
ಪ್ರವಾಸೋದ್ಯಮ ಕುಸಿತದ ಬಗ್ಗೆ ಪ್ರತಿಕ್ರಿಯೆ
ಮಾಲ್ಡೀವ್ಸ್ ಗೆ ಪ್ರಯಾಣಿಸಲು ಬಯಸುವ ಎಲ್ಲಾ ಭಾರತೀಯರಿಗೆ ವೈಯಕ್ತಿಕವಾಗಿ ಮತ್ತು ಮಾಲ್ಡೀವ್ಸ್ ಜನರ ಪರವಾಗಿ ಆತ್ಮೀಯ ಸ್ವಾಗತ ನೀಡಲು ಬಯಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಮಾಲ್ಡೀವ್ಸ್ಗೆ ಭೇಟಿ ನೀಡುವುದನ್ನು ಮುಂದುವರಿಸಲು ನಾವು ಎಲ್ಲಾ ಭಾರತೀಯ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಭಾರತೀಯ ಪ್ರಯಾಣಿಕರು ನಿಜವಾಗಿಯೂ ಮಾಲ್ಡೀವ್ಸ್ಗೆ ಗಮನಾರ್ಹ ಸಂಖ್ಯೆಯಲ್ಲಿ ಆಗಮಿಸಿದರು. ಆ ಪ್ರವೃತ್ತಿ ಮುಂದುವರೆದಿದೆ. ಕಳೆದ ಎರಡು ತಿಂಗಳುಗಳಲ್ಲಿ, ನಾವು 16 ರಿಂದ 17% ಹೆಚ್ಚಳ ಕಂಡಿದ್ದೇವೆ. ಭಾರತೀಯ ಮಾರುಕಟ್ಟೆಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.