ಕೋಲ್ಕತ್ತಾ: ಕೋಲ್ಕತ್ತಾ ಹೈಕೋರ್ಟ್ (Cautta high court) ಆದೇಶವೊಂದು ಪಶ್ಚಿಮ ಬಂಗಾಳದ (West Bengal) ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (Trinamool Congress) ಸರಕಾರಕ್ಕೆ ಬರಸಿಡಿಲಿನಂತೆ ಬಂದೆರಗಿದೆ. ರಾಜ್ಯ ಸರ್ಕಾರ 2016ರಲ್ಲಿ ಮಾಡಿದ್ದ 25,753 ಶಿಕ್ಷಕರ ನೇಮಕಾತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೀಗೆ ರದ್ದಾದವರು, 2016ರಿಂದ ತಾವು ಪಡೆದ ಸಂಬಳವನ್ನೂ ಬಡ್ಡಿ ಸಹಿತ ವಾಪಸ್ ನೀಡಬೇಕಿದೆ. ಇದೀಗ ವಜಾಗೊಂಡ ಶಿಕ್ಷಕರ ಸಿಟ್ಟು ಈ ಬಾರಿ ಚುನಾವಣೆಯಲ್ಲಿ ತೃಣಮೂಲದ ವಿರುದ್ಧ ತಿರುಗುವ ಸಾಧ್ಯತೆ ಇದೆ.
2016ರ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿ, ಹೀಗೆ ನೇಮಕಗೊಂಡ 25,753 ಮಂದಿ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಮತ್ತು ಆದೇಶದ ಪ್ರಕಾರ 12% ಬಡ್ಡಿಯೊಂದಿಗೆ ತಾವು ಪಡೆದ ಅವರು ಹಿಂದಿರುಗಿಸಬೇಕಿದೆ.
ಖಾಲಿ OMR ಹಾಳೆಗಳನ್ನು ಸಲ್ಲಿಸಿದ ನಂತರ ಕಾನೂನುಬಾಹಿರವಾಗಿ ನೇಮಕಗೊಂಡ ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನವನ್ನು ಹಿಂದಿರುಗಿಸಬೇಕು ಎಂದು ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರ ವಿಭಾಗೀಯ ಪೀಠ ಹೇಳಿದೆ. ಈ ಶಿಕ್ಷಕರಿಂದ ಹಣ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ಪೀಠ, ನೇಮಕಾತಿ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿದೆ. ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗವನ್ನು (WBSSC) ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕೇಳಿದೆ. ಈ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸೇರಿದಂತೆ ಹಲವು ತೃಣಮೂಲ ನಾಯಕರು ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ.
ನ್ಯಾಯಾಲಯದ ಆದೇಶದ ನಂತರ ಬಿಜೆಪಿ, ತೃಣಮೂಲ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಟು ಟೀಕೆ ಮಾಡಿದೆ. “ಹೈಕೋರ್ಟ್ 2016ರಿಂದ ನಡೆದ ಸುಮಾರು 24,000 ಎಸ್‌ಎಸ್‌ಸಿ ನೇಮಕಾತಿಗಳನ್ನು ರದ್ದುಗೊಳಿಸಿದೆ. ಸಿಬಿಐ ಈ ಕೇಸ್‌ನಲ್ಲಿ ಈಗ ಕೆಲವರನ್ನು ಕಸ್ಟಡಿಗೆ ತೆಗೆದುಕೊಳ್ಳಬಹುದು. ಯೋಗ್ಯರ ಮುಖದಲ್ಲಿ ನಗು ಮೂಡಿದೆ. ಈ ಬಾರಿ ಸೋದರಳಿಯ ಮತ್ತು ಅವನ ಚಿಕ್ಕಮ್ಮನನ್ನು ಸೋಲಿಸಲಾಗುತ್ತದೆ. #TMCE ಎಕ್ಸ್‌ಪೋಸ್ಡ್” ಎಂದು ಬಿಜೆಪಿ ಟೀಕಿಸಿದೆ.
ಕೆಲವು ಅರ್ಜಿದಾರರ ಪರ ವಕೀಲರ ಪ್ರಕಾರ, 24,640 ಖಾಲಿ ಹುದ್ದೆಗಳಿಗೆ 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016ಗೆ ಹಾಜರಾಗಿದ್ದರು ಮತ್ತು 25,753 ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಇದು 9, 10, 11 ಮತ್ತು 12 ನೇ ತರಗತಿಗಳ ಶಿಕ್ಷಕರು ಮತ್ತು ಗುಂಪು-C ಮತ್ತು D ಸಿಬ್ಬಂದಿಗಳ ಹುದ್ದೆಗಳನ್ನು ಒಳಗೊಂಡಿತ್ತು.
ಕಲ್ಕತ್ತಾ ಹೈಕೋರ್ಟ್ 2016ರಲ್ಲಿ WBSCC ಸ್ಥಾಪಿಸಿದ್ದ ಮಂಡಳಿಗಳನ್ನು ಕಳೆದ ವರ್ಷ ವಜಾಗೊಳಿಸಿತ್ತು. 36,000 ತರಬೇತಿ ಪಡೆಯದ ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿತ್ತು. ನಂತರ ಇದನ್ನು 32,000ಕ್ಕೆ ಮಾರ್ಪಡಿಸಲಾಯಿತು. ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸಿದ್ದ ನ್ಯಾಯಾಧೀಶರಾದ ಅಭಿಜಿತ್ ಗಂಗೂಲಿ ಅವರು ಆಡಳಿತಾರೂಢ ತೃಣಮೂಲದೊಂದಿಗೆ ಹಲವು ಬಾರಿ ತಿಕ್ಕಾಟ ನಡೆಸಿದ್ದರು. ಇದೀಗ ಅವರು ರಾಜೀನಾಮೆ ನೀಡಿದ್ದು, ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಆರಂಭಿಕ ತೀರ್ಪಿನ ಕೆಲವು ದಿನಗಳ ನಂತರ, ಮತ್ತೊಂದು ಏಕಸದಸ್ಯ ಪೀಠವು ಮುಂದಿನ ಆದೇಶದವರೆಗೆ ಅದನ್ನು ವಿರಾಮಗೊಳಿಸಿತ್ತು. ನೇಮಕಾತಿ ಪ್ರಕರಣದಲ್ಲಿ ಅರ್ಜಿಗಳು ಮತ್ತು ಮೇಲ್ಮನವಿಗಳ ವಿಚಾರಣೆಗೆ ವಿಭಾಗೀಯ ಪೀಠವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ನಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿತು ಮತ್ತು ನೇಮಕಾತಿಗಳ ರದ್ದಾದವರಿಗೆ ಆರು ತಿಂಗಳ ರಕ್ಷಣೆ ನೀಡಿತು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಶ್ಚಿಮ ಬಂಗಾಳದಲ್ಲಿನ ಪುಂಡಾಟಕ್ಕೆ ಮಮತಾ ಸರ್ಕಾರದ ಕುಮ್ಮಕ್ಕು ಆತಂಕಕಾರಿ