Site icon Vistara News

ವಿಸ್ತಾರ ಸಂಪಾದಕೀಯ: ಪಶ್ಚಿಮ ಬಂಗಾಳದಲ್ಲಿನ ಪುಂಡಾಟಕ್ಕೆ ಮಮತಾ ಸರ್ಕಾರದ ಕುಮ್ಮಕ್ಕು ಆತಂಕಕಾರಿ

Loksabha Election

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳ ಮೇಲೆಯೇ ಜನರ ಗುಂಪು ದಾಳಿ ಮಾಡಿದೆ. ಪಶ್ಚಿಮ ಬಂಗಾಳದ ಭೂಪತಿನಗರದಲ್ಲಿ 2022ರಲ್ಲಿ ಟಿಎಂಸಿ ನಾಯಕರೊಬ್ಬರ ಮನೆಯಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್‌ಐಎ ಅಧಿಕಾರಿಗಳು ಶನಿವಾರ (ಏಪ್ರಿಲ್‌ 6) ತೆರಳಿದ್ದರು. ಇದೇ ವೇಳೆ ಮಹಿಳೆಯರು ಸೇರಿ ಒಂದಷ್ಟು ಜನ ಎನ್‌ಐಎ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ದಾಳಿಯ ವೇಳೆ ಎನ್‌ಐಎ ತಂಡದ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಎನ್‌ಐಎ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೊ ಕೂಡ ಲಭ್ಯವಾಗಿದೆ. ದೊಣ್ಣೆಗಳಿಂದಲೂ ಜನ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದು ಈ ಬಗೆಯ ಹೊಸ ಪ್ರಕರಣವಲ್ಲ. ಸಂದೇಶ್‌ಖಾಲಿಯಲ್ಲೂ ನಡೆದದ್ದು ಇದೇ. ಕಳೆದ ಜನವರಿಯಲ್ಲಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ತೆರಳಿದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ವಾಹನದ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ದಾಳಿಯ ತೀವ್ರತೆಗೆ ಇ.ಡಿ ಅಧಿಕಾರಿಗಳು ಇದ್ದ ವಾಹನದ ನಾಲ್ಕೂ ಕಿಟಕಿಗಳು ಪುಡಿಪುಡಿಯಾಗಿದ್ದವು. ಇದೇ ಪ್ರಕರಣದಲ್ಲಿ ಸಂದೇಶ್‌ಖಾಲಿಯ ಟಿಎಂಸಿ ಸ್ಥಳೀಯ ಮುಖಂಡ ಶಹಜಹಾನ್ ಶೇಖ್‌ ಎಂಬವನ ಮನೆಯ ಮೇಲೆ ದಾಳಿ ನಡೆಸಲು ಇ.ಡಿ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ, ದಾಳಿ ನಡೆದಿತ್ತು. ದಾಳಿಯಲ್ಲಿ ಕೆಲ ಅಧಿಕಾರಿಗಳಿಗೆ ಗಾಯಗಳಾಗಿದ್ದವು. ನಂತರ ಇದನ್ನು ವಿರೋಧಿಸಿ ವ್ಯಾಪಕವಾದ ಪ್ರತಿಭಟನೆ ನಡೆದಿತ್ತು. ಶಹಜಹಾನ್‌ನ ದೌರ್ಜನ್ಯದ ಕರಾಳತೆ ಬಯಲಾಗಿದ್ದು, ಆತನ ಬಂಧನಕ್ಕೆ ಸುಪ್ರೀಂ ಕೋರ್ಟೇ ನಿರ್ದೇಶನ ನೀಡಬೇಕಾಗಿ ಬಂದಿತ್ತು. ಆತನ ಬಂಧನ ಆದ ಬಳಿಕವೇ ಪಕ್ಷದಿಂದ ಆತನನ್ನು ಟಿಎಂಸಿ ಉಚ್ಚಾಟಿಸಿತ್ತು. ಅಂದರೆ ಅಲ್ಲಿಯವರೆಗೂ ಪಾತಕಿಯನ್ನು ಪಕ್ಷ ಸಾಕಿಕೊಂಡಿತ್ತು.

ಪಶ್ಚಿಮ ಬಂಗಾಳದಲ್ಲಿ ಹೀಗೆ ಸರ್ಕಾರಿ ಕುಮ್ಮಕ್ಕಿನಿಂದಲೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳು, ಹಿಂಸಾಚಾರ ಆಗಾಗ ನಡೆಯುತ್ತಲೇ ಇರುತ್ತವೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತವೆ. ಇತ್ತೀಚೆಗೆ, ತನಿಖಾ ಸಂಸ್ಥೆಗಳ ಅಧಿಕಾರಿಗಳ ಮೇಲೆಯೂ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದು ನಡೆಯುತ್ತಿರುವುದು ಆಡಳಿತ ಪಕ್ಷದ ಕುಮ್ಮಕ್ಕಿನಿಂದ ಎಂಬುದು ರಹಸ್ಯವಲ್ಲ. ಸಂದೇಶ್‌ಖಾಲಿಯಲ್ಲಿ ಏನು ನಡೆಯುತ್ತಿದೆ ಎಂಬ ವೀಕ್ಷಣೆಗೆ ಹೋಗಿದ್ದ ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷರನ್ನೂ ಅಡ್ಡಗಟ್ಟಿ ಬೆದರಿಸಿ ವಾಪಸ್‌ ಕಳಿಸಲಾಗಿತ್ತು. ಅಲ್ಲಿಗೆ ಹೊರಟಿದ್ದ ಬಿಜೆಪಿ ನಿಯೋಗಕ್ಕೂ ಹಲ್ಲೆ ಮಾಡಲಾಗಿತ್ತು. ಅಂದರೆ, ತನ್ನ ಪಕ್ಷದವರು ನಡೆಸುತ್ತಿರುವ ದೌರ್ಜನ್ಯಗಳನ್ನೆಲ್ಲ ಮುಚ್ಚಿಹಾಕಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಮತಾ ಬ್ಯಾನರ್ಜಿ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಆರ್‌ಬಿಐ ಸುಧಾರಣಾ ಕ್ರಮಗಳು ಉಪಯುಕ್ತ, ಶ್ಲಾಘನಾರ್ಹ

ಹಗರಣ, ಅಕ್ರಮಗಳ ತನಿಖೆಗೆ ಮುಂದಾಗುವ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರಗಳು ಬೆಂಬಲ ನೀಡಬೇಕು. ಆಗ ಮಾತ್ರ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಇರಬಲ್ಲುದು. ಒಕ್ಕೂಟ ವ್ಯವಸ್ಥೆಯ ಸೌಹಾರ್ದದ ಮೂಲಭೂತ ಸೂತ್ರವೇ ಇದು. ಆದರೆ ಪಶ್ಚಿಮ ಬಂಗಾಳ ಆಡಳಿತ ಪಕ್ಷ ಮಾತ್ರ ಬೆಂಬಲದ ಮಾತಂತಿರಲಿ, ಸಿಬಿಐ ತನಿಖೆಗೆ ಅಸಹಕಾರ, ತನಿಖಾ ಸಂಸ್ಥೆಗಳ ಮೇಲೆ ಹಲ್ಲೆ ಇತ್ಯಾದಿಗಳನ್ನು ಸ್ವತಃ ನಡೆಸುತ್ತಿರುವುದು ಆಘಾತಕಾರಿ; ಶೋಚನೀಯ. ಮಮತಾ ಅವರ ಪಕ್ಷದ ಮುಖಂಡರೇ ರಾಷ್ಟ್ರೀಯ ಏಜೆನ್ಸಿಗಳ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದರೆ ಏನರ್ಥ? ಅವರು ಭಾರತ ಒಕ್ಕೂಟದ ಒಳಗೆ ಇಲ್ಲವೇ? ಈಗ ನಡೆದ ಘಟನೆಗೂ, ರಾತ್ರಿ ಹೊತ್ತು ಯಾಕೆ ಬಂಧಿಸಲು ಹೋಗಬೇಕಿತ್ತು? ಜನ ಮಾಡಿದ್ದು ಸರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದು ಕುತರ್ಕ; ಪುಂಡರು ನಡೆಸಿದ ಹಿಂಸೆಗೆ ಸ್ವತಃ ಸರ್ಕಾರವೇ ನೀಡುತ್ತಿರುವ ಬೆಂಬಲ. ಪುಂಡರ ಆಡಳಿತಕ್ಕೆ ಯಾವುದೇ ತಡೆ ಹಾಕದ ಸರ್ಕಾರ ಇದ್ದೂ ಉಪಯೋಗವಿಲ್ಲ. ಇಂಥ ಭಂಡತನಕ್ಕೆ ಜನ ತಕ್ಕ ಪಾಠ ಕಲಿಸಬಲ್ಲರು.

Exit mobile version