Site icon Vistara News

ವಿಸ್ತಾರ ಸಂಪಾದಕೀಯ: ಶತಕೋಟಿ ಭಾರತೀಯರನ್ನು ಬೆಸೆದ ಮನ್‌ ಕಿ ಬಾತ್‌

Prime minister Modi in 103th Mann ki Baat

ಪ್ರಧಾನಿ ನರೇಂದ್ರ ಮೋದಿ ಅವರು 2014ರ ಅಕ್ಟೋಬರ್ 3ರ ವಿಜಯ ದಶಮಿಯಂದು ಆರಂಭಿಸಿದ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ 2023ರ ಏಪ್ರಿಲ್ 30 ಭಾನುವಾರ 100ನೇ ಸಂಚಿಕೆಯನ್ನು ಪೂರೈಸಿದೆ. ಪ್ರಧಾನಿ ಮೋದಿ ಅವರು ದೇಶದ ಜನರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ಈ ಕಾರ್ಯಕ್ರಮ ಐತಿಹಾಸಿಕ ಎನ್ನಬಹುದು. ಏಕೆಂದರೆ ಈ ಹಿಂದೆ ಯಾವ ಪ್ರಧಾನಿಯೂ ಈ ರೀತಿ ವಿಶಿಷ್ಟ ಮಾಧ್ಯಮದ ಮೂಲಕ ದೇಶವಾಸಿಗಳ ಕಷ್ಟ – ಸುಖಗಳಿಗೆ ಸ್ಪಂದಿಸಿರಲಿಲ್ಲ. ಸ್ಫೂರ್ತಿದಾಯಕ ಮಾತುಗಳ ಮೂಲಕ ಜನಸಾಮಾನ್ಯರ ಹೃದಯ ತಟ್ಟಿರಲಿಲ್ಲ. ಈ ಹಿಂದಿನ ಪ್ರಧಾನಿಗಳು ಆಗಾಗ ರೇಡಿಯೋವನ್ನು ತಮ್ಮ ಸರ್ಕಾರದ ಸಾಧನೆಗಳನ್ನು ಸಾರಲು ಅಥವಾ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲು ಬಳಸಿಕೊಂಡಿದ್ದಿದೆ. ಆದರೆ, ನಿರಂತರವಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು, ಇಷ್ಟೊಂದು ಪರಿಣಾಮಕಾರಿಯಾಗಿ ರೇಡಿಯೊ ಬಳಸಿಕೊಂಡಿದ್ದು ಮೋದಿ ಅವರ ಹೆಗ್ಗಳಿಕೆಯಾಗಿದೆ.

ಶತಕದ ಸಂಚಿಕೆಯಲ್ಲೂ ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ಭಾವುಕವಾಗಿ ಮಾತನಾಡಿದರು. ಇದು ತಮ್ಮ ಪಾಲಿಗೆ ವ್ರತವಿದ್ದಂತೆ ಎಂದು ಹೇಳಿಕೊಂಡರು. ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವು ಭಾರತದ ರೇಡಿಯೋ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಿ ಪರಿಣಮಿಸಿದೆ. ಈ ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ; ಅನೇಕ ಸಂಕಟಗಳು ಎದುರಾಗಿವೆ; ಮಾನವ ಕುಲ ಕಂಡು ಕೇಳರಿಯದಂಥ ಕೋವಿಡ್ ಮಹಾಮಾರಿಯೂ ಬಂದು ಹೋಗಿದೆ. ಇಷ್ಟೆಲ್ಲ ಅಡೆ ತಡೆಗಳು, ವೈಯಕ್ತಿಕ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳ ಕೊನೆಯ ಭಾನುವಾರ ಮನ್‌ ಕಿ ಬಾತ್ ಕಾರ್ಯಕ್ರಮವನ್ನು ಎಂದೂ ತಪ್ಪಿಸಿಲ್ಲ. ಆ ಮೂಲಕ ಅವರು ತಮ್ಮ ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ.

ಮೋದಿ ಅವರ ರಾಜಕೀಯ ವಿರೋಧಿಗಳು ಮನ್ ಕಿ ಬಾತ್ ಕಾರ್ಯಕ್ರಮವನ್ನು ಏಕಮುಖ ಸಂಹವನ ಎಂದು ಟೀಕಿಸಿದ್ದೂ ಇದೆ. ಆದರೆ, ಅವರು ಅರಿಯದೇ ಹೋದ ಸಂಗತಿ ಏನೆಂದರೆ, ಮೋದಿ ಅವರು ರೇಡಿಯೊ ಮೂಲಕ ಪ್ರತಿ ತಿಂಗಳು ಆಡುವ ಮಾತಿಗೆ ಕೋಟ್ಯಂತರ ಜನ ಕಿವಿಯಾಗುತ್ತಿದ್ದರು. ರೋಹ್ಟಕ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ- ರೋಹ್ಟಕ್) ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ 21 ಕೋಟಿ ಜನರು ಪ್ರತಿ ತಿಂಗಳೂ ತಪ್ಪದೆ ರೇಡಿಯೋದಲ್ಲಿ ಮನ್ ಕಿ ಬಾತ್ ಕೇಳುತ್ತಾರೆ. ದೇಶದ ಕನಿಷ್ಠ 100 ಕೋಟಿ ಜನರು ಒಮ್ಮೆಯಾದರೂ ಮನ್ ಕಿ ಬಾತ್ ಆಲಿಸಿದ್ದಾರೆ. ಅಂದರೆ ದೇಶದ ಬಹುತೇಕ ಜನರ ಜತೆಗೆ ಪ್ರಧಾನಿ ಮೋದಿ ಅಪರೋಕ್ಷವಾಗಿ ಸಂಪರ್ಕದಲ್ಲಿದ್ದಂತಾಯಿತು ಅಲ್ಲವೇ? ಒಬ್ಬ ನಾಯಕನ ಕ್ರಿಯಾಶೀಲತೆ ಮತ್ತು ದೂರದೃಷ್ಟಿಯ ಯೋಚನೆ-ಯೋಜನೆಗೆ ಇದು ಸಾಕ್ಷಿಯಲ್ಲವೆ? ಮೋದಿಯೇನು ಟೀಕೆಗಳಿಗೆ ಅತೀತರಲ್ಲ. ಆದರೆ, ಮನ್‌ ಕೀ ಬಾತ್‌ನಂಥ ಅವರ ಕಾರ್ಯಕ್ರಮಗಳನ್ನು ಮೆಚ್ಚಲೇಬೇಕಾಗುತ್ತದೆ.

ಮನ್ ಕಿ ಬಾತ್ ವೈವಿಧ್ಯಮಯ ವಿಷಯಗಳೊಂದಿಗೆ ಪ್ರಸಾರವಾಗುತ್ತಿದೆ. ಚಿಕ್ಕಮಗುವಿನ ಚಿಕ್ಕ ಸಾಧನೆಯಿಂದ ಹಿಡಿದು, ದೊಡ್ಡವರ ದೊಡ್ಡ ಸಾಧನೆಗಳ ತನಕ, ಲೋಕಲ್‌ನಿಂದ ಗ್ಲೋಬಲ್ ತನಕ, ಪ್ರಾಚೀನ ಪರಂಪರೆಯಿಂದ ಆಧುನಿಕ ಜಗತ್ತಿನ ನಾನಾ ಮಜಲುಗಳ ತನಕ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಸಂಗೀತ ಹೀಗೆ ಮನ್‌ ಕಿ ಬಾತ್‌ನಲ್ಲಿ ಮೂಡಿಬರದ ಸಂಗತಿಗಳೇ ಇಲ್ಲ. ಈ ಕುರಿತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್(IIMC) ಸಮೀಕ್ಷೆಯನ್ನೇ ನಡೆಸಿದೆ. ಈ ಸರ್ವೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.75 ಜನ, ಭಾರತೀಯ ಕೇಳುಗರಿಗೆ “ನಿಜವಾದ ಭಾರತ’ವನ್ನು ಪರಿಚಯಿಸಲು ಮನ್ ಕಿ ಬಾತ್ ನೆರವಾಗಿದೆ ಎಂದಿದ್ದಾರೆ. ಶೇ.40ರಷ್ಟು ಜನ ಶಿಕ್ಷಣ ಮಾಹಿತಿ, ಶೇ.26ರಷ್ಟು ಜನ ನೆಲಮೂಲದ ಸಂಶೋಧಕರ-ಸಾಧಕರ ಪರಿಚಯದ ವಿಷಯಗಳು ಹೆಚ್ಚು ಪ್ರಭಾವ ಬೀರಿದ ಸಂಗತಿಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ “ವಿವಿಧತೆಯಲ್ಲಿ ಏಕತೆʼ ಎಂಬ ಭಾರತದ ಮಂತ್ರಕ್ಕೆ ಅನುಗುಣವಾಗಿಯೇ ಈ ಕಾರ್ಯಕ್ರಮ ನಡೆದುಕೊಂಡು ಹೋಗುತ್ತಿದೆ.

ಕನ್ನಡಿಗರಾಗಿ ನಾವು ತುಸು ಹೆಚ್ಚೇ ಸಂತಸಪಡಲು ಕಾರಣವಿದೆ. ಮನ್ ಕಿ ಬಾತ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಕರ್ನಾಟಕ, ಕನ್ನಡಿಗರಿಗೆ ಸಂಬಂಧಿಸಿದ ಸಂಗತಿಗಳು ಉಲ್ಲೇಖವಾಗಿವೆ. ಸಿರಿ ಧಾನ್ಯ ಬೆಳೆಯುವ ಬೀದರ್ ಜಿಲ್ಲೆಯ ಹುಲ್ಸೂರು ರಾಗಿ ಉತ್ಪಾದಕ ಕಂಪನಿಯ ಮಹಿಳೆಯರು, ಅಮೃತ ಭಾರತಿ ಕನ್ನಡದಾರತಿ ಅಭಿಯಾನ, ಇ-ತ್ಯಾಜ್ಯ ನಿರ್ವಹಣೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ತೊಡಗಿರುವ ಬೆಂಗಳೂರಿನ ಇ-ಪರಿಸರ ಸಂಸ್ಥೆ, ಗ್ರಾಮೀಣ ಭಾರತದ ಕಥೆಗಳನ್ನು ಜನಪ್ರಿಯಗೊಳಿಸುತ್ತಿರುವ ಗತಸ್ಟೋರಿ ಡಾಟ್ ಇನ್(Gathastory.in), ದೇವದಾಸಿಯರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಕರ್ನಾಟಕದ ಸೀತವ್ವ ಜೋಡಟ್ಟಿ, ಅಮೈ ಮಹಾಲಿಂಗ ನಾಯಕ್, 107 ವರ್ಷದ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಚನ್ನಪಟ್ಟಣದ ಗೊಂಬೆಗಳು, ಶೌಚಾಲಯಕ್ಕಾಗಿ ಸತ್ಯಾಗ್ರಹ ನಡೆಸಿದ್ದ ಕೊಪ್ಪಳದ ಮಲ್ಲಮ್ಮ… ಹೀಗೆ ಕನ್ನಡ ನಾಡಿಗೆ ಸೇರಿದ ಅನೇಕ ವ್ಯಕ್ತಿಗಳು, ಸಂಗತಿಗಳು, ಸಾಧನೆಗಳ ಕುರಿತು ಪ್ರಧಾನಿಗಳು ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ: Mann Ki Baat: ಪ್ರಧಾನಿ ಮೋದಿಯವರ ಮಾರ್ಗದರ್ಶಕ ಯಾರು?; ಮನ್​ ಕೀ ಬಾತ್​​ನಲ್ಲಿ ಸ್ಮರಣೆ

ಮನ್ ಕಿ ಬಾತ್ ಈಗ ಕೇವಲ ರೇಡಿಯೋ ಕಾರ್ಯಕ್ರಮವಾಗಿ ಉಳಿದಿಲ್ಲ. ಭಾರತವನ್ನು ಬೆಸೆಯುವ ತಂತಾಗಿ ರೂಪುಗೊಂಡಿದೆ. ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಹೊಸ ಹೊಳಪು ನೀಡಲಿ. ಇದು ದೇಶವಾಸಿಗಳಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಲಿ.

Exit mobile version