ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಮತ್ತೊಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣದ ಸಾವಿರಾರು ರೈತರು ದೆಹಲಿ ಸಮೀಪ ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಳೆದ ಬಾರಿಯ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲು ರೈತರ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಬಾರಿ ಲೋಕಸಭೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮತ್ತೊಂದು ಬೃಹತ್ ರೈತ ಚಳವಳಿ ರೂಪುಗೊಂಡಿದೆ. ಚುನಾವಣೆಗೆ ಮೊದಲು ಈ ರೀತಿ ರೈತ ಪ್ರತಿಭಟನೆ ನಡೆಯುವುದು ರಾಜಕೀಯ ಪ್ರೇರಿತ ಎಂದು ಬಿಜೆಪಿ ಆಪಾದಿಸುತ್ತಿದೆ. ಆದರೆ, ಆಳುವ ಸರಕಾರಗಳು ಬೇಡಿಕೆಗೆ ಬೇಗ ಸ್ಪಂದಿಸುವುದೇ ಚುನಾವಣೆ ಹತ್ತಿರವಾದಾಗ; ಹಾಗಾಗಿ ರೈತರು ಚುನಾವಣೆಗೆ ಮೊದಲು ಪ್ರತಿಭಟನೆಗೆ ಇಳಿಯುವುದು ಸಹಜ ಎಂದು ಕಾಂಗ್ರೆಸ್ ಮತ್ತಿತರರ ಪ್ರತಿಪಕ್ಷಗಳ ಅಭಿಮತವಾಗಿದೆ. (Vistara Editorial)
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು “ದೆಹಲಿ ಚಲೋʼಗೆ ಕರೆ ನೀಡಿವೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ರೈತ ಪ್ರತಿಭಟನೆಯಿಂದಾಗಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಗಡಿಗಳಲ್ಲಿನ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ವಾಹನ, ಜನ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಳೆದ ಬಾರಿಯ ರೈತ ಪ್ರತಿಭಟನೆ ವೇಳೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಹಾಗಾಗಿ ಈ ಬಾರಿ ರೈತರು ದಿಲ್ಲಿ ಪ್ರವೇಶಿಸದಂತೆ ಪೊಲೀಸರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ದಿಲ್ಲಿಯ ಗಡಿಗಳಲ್ಲಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ. ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿಗಳಲ್ಲಿ ಭದ್ರತಾ ಸಿಬ್ಬಂದಿ ರೈತರನ್ನು ತಡೆದು ನಿಲ್ಲಿಸಿದ್ದಾರೆ. ಆದರೆ ರೈತರು ವಾಪಸ್ ಹೋಗದೆ ಗಡಿ ಪ್ರದೇಶಗಳಲ್ಲಿ ಠಿಕಾಣಿ ಹೂಡಿದ್ದಾರೆ.
ಈ ನಡುವೆ ರೈತರ ಪ್ರತಿಭಟನೆಯಿಂದಾಗಿ ಆಹಾರ ಸಾಮಗ್ರಿ ಪೂರೈಕೆ ಸರಪಳಿಯ ಮೇಲೆ ಅಡ್ಡ ಪರಿಣಾಮ ಬೀರಲಾರಂಭಿಸಿದೆ. ತರಕಾರಿ, ದವಸ ಧಾನ್ಯಗಳ ದರ ಗಗನಕ್ಕೇರುತ್ತಿದೆ. ಪಂಜಾಬ್‌ನಿಂದ ಸಮರ್ಪಕ ಪೂರೈಕೆಯಾಗದ ಕಾರಣ 15 ದಿನಗಳಲ್ಲಿ ಕ್ಯಾರೆಟ್ ಬೆಲೆಯಲ್ಲಿ 5 ರೂ. ಹೆಚ್ಚಳವಾಗಿದೆ. ಪ್ರತಿಭಟನೆ ಹೀಗೆಯೇ ಮುಂದುವರಿದರೆ, ಆಹಾರ ಧಾನ್ಯಗಳ ದರ ಮತ್ತಷ್ಟು ಏರುವ ಸಾಧ್ಯತೆ ಇದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜ್ಞಾನಪೀಠ ಪುರಸ್ಕೃತರ ಆಯ್ಕೆ ಸಮಯೋಚಿತ
ಈ ಮಧ್ಯೆ ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದೆ. ಬೇಡಿಕೆ ಈಡೇರದ ಹೊರತು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತ ಮಖಂಡರು ಈಗಾಗಲೇ ಘೋಷಿಸಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು (MSP) ಜಾರಿಗೆ ತರಬೇಕು ಎನ್ನುವುದು ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆ ಬಹು ಕಾಲದಿಂದಲೂ ಇದೆ. ಕೇಂದ್ರ ಸರ್ಕಾರ ಹಲವು ಬೆಳೆಗಳಿಗೆ ಕಾಲಕಾಲಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ. ಆದರೆ ವಾಸ್ತವಿಕವಾಗಿ ಇದರ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ, ಸಕಾಲದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದಿಲ್ಲ ಎಂಬ ದೂರು ಕೇಳಿ ಬರುತ್ತಲೇ ಇರತ್ತದೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಪ್ರತಿನಿಧಿಗಳು ತ್ವರಿತವಾಗಿ ಆಲಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಚಳವಳಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಅಸ್ತ್ರವಾಗಿ ಮಾರ್ಪಡದಂತೆ ರೈತ ಸಂಘಟನೆಗಳು ಎಚ್ಚರ ವಹಿಸಬೇಕು. ಈ ಹಿಂದೆ ನಡೆದ ರೈತ ಚಳವಳಿಯಲ್ಲಿ ದೇಶ ವಿರೋಧಿ ಶಕ್ತಿಗಳು ಸೇರಿಕೊಂಡು ಅಶಾಂತಿ ಸೃಷ್ಟಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಬಾರಿಯ ರೈತ ಹೋರಾಟ ಶಾಂತಿಯುತವಾಗಿ ತಾರ್ಕಿಕ ಅಂತ್ಯ ಕಾಣಲಿ. ರೈತ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಸಂಧಾನ ಮಾತುಕತೆ ನಡೆಸುವ ಮೂಲಕ ನೈಜ ರೈತರ ಬೇಡಿಕೆಗಳು ಸೌಹಾರ್ದಯುತವಾಗಿ ಆದಷ್ಟು ಬೇಗ ಈಡೇರುವಂತಾಗಲಿ.