ಬ್ರಿಟನ್‌ನಲ್ಲಿ ನೂತನ ರಾಜ ರಾಣಿಯರಾದ ಕಿಂಗ್ಸ್ ಚಾರ್ಲ್ಸ್-III ಮತ್ತು ರಾಣಿ ಕ್ಯಾಮಿಲ್ಲಾ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ವಿಶೇಷ ಏನೆಂದರೆ, ಬ್ರಿಟನ್ ರಾಣಿ ಸಾಂಪ್ರದಾಯಿಕವಾಗಿ ಧರಿಸುತ್ತಿದ್ದ ಕೊಹಿನೂರ್ ವಜ್ರ ಇರುವ ಕಿರೀಟವನ್ನು ಧರಿಸಲು ರಾಣಿ ಕ್ಯಾಮಿಲ್ಲಾ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕೊಹಿನೂರ್ ವಜ್ರವನ್ನು ಭಾರತಕ್ಕೆ ಇನ್ನಾದರೂ ಮರಳಿಸಿ ಎಂಬ ಆಗ್ರಹ ಭಾರತೀಯರಿಂದ ಕೇಳಿ ಬರುತ್ತಿದೆ. ಬ್ರಿಟನ್‌ನ ವಸಾಹತುಶಾಹಿ ಹಿನ್ನೆಲೆ ಗೊತ್ತಿರುವ ಇತರರೂ ಇದೇ ಮಾತನ್ನು ಹೇಳುತ್ತಿದ್ದಾರೆ. ತನ್ನ ಬರ್ಬರ ವಸಾಹತುಶಾಹಿ ಆಡಳಿತದ ಕರಿನೆನಪನ್ನು ತೊಡೆದುಕೊಳ್ಳಲು ಬ್ರಿಟನ್‌ಗೆ ಇದು ಸಕಾಲ.
ಇದೇ ಮೊದಲ ಬಾರಿಯಲ್ಲ ಕೊಹಿನೂರನ್ನು ಭಾರತ ಕೇಳುತ್ತಿರುವುದು. 1947ರಲ್ಲಿ ಭಾರತ ಸ್ವತಂತ್ರಗೊಂಡಾಗಲೂ ನಮ್ಮ ವಜ್ರವನ್ನು ಮರಳಿಸಿ ಎಂದು ಕೇಳಿತ್ತು. 1952ರಲ್ಲಿ ಕ್ವೀನ್ ಎಲಿಜಬೆತ್ ಅವರ ಕಿರೀಟಧಾರಣೆಯಾದ ಸಂದರ್ಭದಲ್ಲೂ, ನಮ್ಮ ವಜ್ರ ನಿಮ್ಮ ಕಿರೀಟದಲ್ಲಿದೆ, ಅದನ್ನು ಕೊಡಿ ಎಂದು ವಿನಂತಿಸಲಾಗಿತ್ತು. ಆದರೆ ರಾಣಿ ಎಲಿಜಬೆತ್ ಅದನ್ನು ಎಪ್ಪತ್ತು ವರ್ಷ ಕಾಲ ತಲೆ ಮೇಲೆ ಧರಿಸಿ ಮೆರೆದರೇ ಹೊರತು ಮರಳಿಸುವ ಪ್ರಯತ್ನ ಮಾಡಲಿಲ್ಲ. 2022ರ ಸೆಪ್ಟೆಂಬರ್‌ನಲ್ಲಿ ಅವರು ನಿಧನರಾದ ಬಳಿಕ ಈಗ ರಾಣಿ ಕ್ಯಾಮೆಲ್ಲಾ ರಾಣಿಯ ಸಿಂಹಾಸನ ಅಲಂಕರಿಸಿದ್ದಾರೆ. ಆದರೆ ಅವರು ಈ ಕಿರೀಟ ಧರಿಸದೆ ಬೇರೆ ಕಿರೀಟ ಧರಿಸಿದ್ದಾರೆ. ಸದ್ಯ ಲಂಡನ್‌ನ ಜ್ಯುವೆಲ್ ಹೌಸ್‌ನಲ್ಲಿ ಇದು ಕುಳಿತಿದ್ದು, ಲಕ್ಷಾಂತರ ಮಂದಿ ನೋಡುಗರನ್ನು ಆಕರ್ಷಿಸುತ್ತಿದೆ. ವಸಾಹತುಶಾಹಿಯ ರಕ್ತಸಿಕ್ತ ಇತಿಹಾಸ ಹೊಂದಿರುವ ಈ ವಜ್ರ ತಮಗೆ ಬೇಡ ಎಂಬ ಭಾವ ರಾಜ- ರಾಣಿಯರದಾಗಿದ್ದರೆ, ಈಗಲಾದರೂ ಅದನ್ನು ತಿರುಗಿ ಕೊಡುವ ಬಗೆಗೆ ಅವರು ಯೋಚಿಸಬಹುದು.
ಕೊಹಿನೂರ್ ವಜ್ರ ಭಾರತದ ಅಸ್ಮಿತೆ. ಇದು ವಿಶ್ವದ ಅತ್ಯಂತ ದೊಡ್ಡ ಗಾತ್ರದ ಮತ್ತು ಅತ್ಯಂತ ಮೌಲ್ಯಯುತ ರತ್ನವಾಗಿದೆ. ಆಂಧ್ರಪ್ರದೇಶದ ಗೋಲ್ಕೊಂಡ ಗಣಿಯಿಂದ ಇದನ್ನು ಅಗೆದು ತೆಗೆಯಲಾಯಿತು ಎನ್ನಲಾಗುತ್ತದೆ. ಇದರ ಮೊತ್ತಮೊದಲ ಉಲ್ಲೇಖ ನಮಗೆ 1740ರಲ್ಲಿ ಸಿಗುತ್ತದೆ. ಪರ್ಷಿಯನ್ ಇತಿಹಾಸಕಾರ ಮೊಹಮ್ಮದ್ ಕಾಜಿಂ ಮಾರ್ವಿ ಎಂಬಾತ, ಸುಲ್ತಾನ ನಾದಿರ್ ಶಾ ದಿಲ್ಲಿಯ ಮೇಲೆ ದಾಳಿ ನಡೆಸಿದಾಗ ಈ ವಜ್ರವನ್ನು ದಿಲ್ಲಿಯ ದೊರೆಯಿಂದ ವಶಪಡಿಸಿಕೊಂಡ ಎಂದು ಉಲ್ಲೇಖಿಸುತ್ತಾನೆ. ಅಲ್ಲಿಂದಾಚೆಗೆ ಇದು ಅನೇಕ ಕೈಗಳನ್ನು ಬದಲಿಸಿದೆ. 1849ರಲ್ಲಿ ಬ್ರಿಟಿಷರು ಪಂಜಾಬನ್ನು ವಶಪಡಿಸಿಕೊಂಡಾಗ, ಆಗಿನ ಪಂಜಾಬ್‌ನ ಅಪ್ರಾಪ್ತ ವಯಸ್ಕ ರಾಜ ದುಲೀಪ್ ಸಿಂಗನ ಬಳಿ ಇದ್ದ ಈ ವಜ್ರವನ್ನು ಬಲಾತ್ಕಾರವಾಗಿ ಅವನಿಂದ ಸೆಳೆದುಕೊಂಡಿದ್ದರು. ʼಲಾಹೋರ್ ಒಪ್ಪಂದʼ ಎಂದು ಕರೆಯಲಾಗುವ ಒಪ್ಪಂದದ ಮೂಲಕ, ಆಗಿನ ಈಸ್ಟ್ ಇಂಡಿಯಾ ಕಂಪನಿಯು ಪಂಜಾಬ್ ರಾಜ್ಯದ ಮೇಲಿನ ಅಧಿಕಾರವನ್ನು ಪಡೆದಿದ್ದಷ್ಟೇ ಅಲ್ಲದೆ, ರಾಜನ ಬಳಿ ಇದ್ದ ವಜ್ರವನ್ನೂ ಕಿತ್ತುಕೊಂಡಿತ್ತು. ಇದಕ್ಕೆ ಸಾಕಷ್ಟು ದಾಖಲೆಗಳೂ ಸಿಗುತ್ತವೆ. ಆಗಿನ ಕಾಲದ ಹಲವಾರು ಬ್ರಿಟಿಷ್ ಅಧಿಕಾರಿಗಳು ಈ ಬಗ್ಗೆ ಬರೆದಿಟ್ಟಿದ್ದಾರೆ. 1849ಕ್ಕೂ ಮೊದಲು ಈ ವಜ್ರ ಬ್ರಿಟನ್ ಬಳಿ ಇತ್ತೆಂಬುದಕ್ಕೆ ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಇದು ಬ್ರಿಟಿಷರು ಭಾರತದಿಂದ ಕೊಳ್ಳೆ ಹೊಡೆದದ್ದು ಎಂಬುದು ನಿಶ್ಚಿತ. ಹಾಗಾಗಿ ಇದನ್ನು ಇರಿಸಿಕೊಳ್ಳುವ ನೈತಿಕ ಹಕ್ಕು ಬ್ರಿಟನ್‌ಗಿಲ್ಲ.
ಇದನ್ನೂ ಓದಿ ವ: ವಿಸ್ತಾರ ಸಂಪಾದಕೀಯ: ಐಪಿಎಲ್ ಕೋಳಿ ಜಗಳ: ಹಿರಿಯ ಆಟಗಾರರಿಗೆ ಇದು ಭೂಷಣವಲ್ಲ
ಬ್ರಿಟನ್ ತಾನು ಕೊಳ್ಳೆ ಹೊಡೆದ ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸುವುದೇ ಇಲ್ಲ ಎಂದೇನೂ ಇಲ್ಲ. ಭಾರತದಿಂದ ಕೊಂಡೊಯ್ದಿದ್ದ, ಗ್ಲಾಸ್ಗೋ ಮ್ಯೂಸಿಯಂನಲ್ಲಿದ್ದ ಸುಮಾರು 1000 ವರ್ಷಗಳಷ್ಟು ಹಳೆಯದಾದ 7 ಕಲಾಕೃತಿಗಳು, ಖಡ್ಗ ಮತ್ತಿತರ ವಸ್ತುಗಳನ್ನು ಭಾರತಕ್ಕೆ ಮರಳಿಸಲು ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು. 19ನೇ ಶತಮಾನದಲ್ಲಿ ನೈಜೀರಿಯಾದಿಂದ ಬ್ರಿಟನ್ ಯೋಧರು ದರೋಡೆ ಮಾಡಿ ತಂದಿದ್ದ ʼಬೆನಿನ್ ಬ್ರಾಂಝಸ್ʼ ಎಂಬ ಹೆಸರಿನ ಅಮೂಲ್ಯ ಕಲಾಕೃತಿಗಳನ್ನು ಇತ್ತೀಚೆಗೆ ಆ ದೇಶಕ್ಕೆ ಮರಳಿಸಿದೆ. ಪ್ರಾಚೀನ ವಸಾಹತುಶಾಹಿ ದೇಶಗಳಾದ ಸ್ಪೇನ್, ಪೋರ್ಚುಗಲ್ ಮುಂತಾದವುಗಳು ಕೂಡ ಹೀಗೆ ತಾವು ಲೂಟಿ ಮಾಡಿದ ಹಲವು ವಸ್ತುಗಳನ್ನು ಆಯಾ ದೇಶಗಳಿಗೆ ಸ್ನೇಹಭಾವದಿಂದ ಮರಳಿಸಿವೆ. ಅಮೆರಿಕ ಕೂಡ ತನ್ನ ಮ್ಯೂಸಿಯಂಗಳಿಗೆ ಆಕಸ್ಮಿಕವಾಗಿ ಬಂದಿರುವ ಪ್ರಾಚೀನ ವಸ್ತುಗಳನ್ನು ಮರಳಿಸಿದೆ. ಹೀಗೆಯೇ ಕೊಹಿನೂರ್ ಅನ್ನು ಕೂಡ ಮರಳಿಸಬಹುದಾಗಿದೆ. ಭಾರತ ಸರ್ಕಾರ ಕೂಡ ಈ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ತಕ್ಕ ಪ್ರಯತ್ನವನ್ನು ಮಾಡಬಹುದು. ವಜ್ರವನ್ನು ಮರಳಿ ನೀಡುವುದರಿಂದ ಬ್ರಿಟನ್‌ನ ಘನತೆ ಕಡಿಮೆಯಾಗುವುದಿಲ್ಲ, ಬದಲಾಗಿ ಹೆಚ್ಚಾಗುತ್ತದೆ. ಉಭಯ ದೇಶಗಳ ನಡುವಿನ ಮೈತ್ರಿಭಾವವೂ ವೃದ್ಧಿಸಬಹುದು. ಈಗ ಬ್ರಿಟನ್‌ನ ಆಡಳಿತದ ಚುಕ್ಕಾಣಿ ಹಿಡಿದಿರುವ ರಿಷಿ ಸುನಕ್ ಭಾರತೀಯ ಮೂಲದವರೇ ಆಗಿರುವುದರಿಂದ, ಕೊಹಿನೂರ್ ವಜ್ರ ಭಾರತಕ್ಕೆ ಬೇಗ ಮರಳಲಿ ಎಂದು ಆಶಿಸೋಣ.