Site icon Vistara News

ವಿಸ್ತಾರ ಸಂಪಾದಕೀಯ: ನೂತನ ಸಂಸತ್ ಕಟ್ಟಡ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ

New parliament Building

ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೀಕರ್ ಓಂ ಬಿರ್ಲಾ ಭಾನುವಾರ ಉದ್ಘಾಟಿಸಲಿದ್ದಾರೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ನೂತನ ಸಂಸತ್ ಭವನ ನಿರ್ಮಾಣ ಅಗತ್ಯವಾಗಿತ್ತು. ಈಗ ಬಳಕೆಯಾಗುತ್ತಿರುವ ಸಂಸತ್‌ ಭವನ ಶತಮಾನವನ್ನು ಸಮೀಪಿಸುತ್ತಿದ್ದು, ಅದರ ಗರಿಷ್ಠ ಬಳಕೆಯಾಗಿದೆ. ಮುಂದೆ ಸಂಸತ್ ಸದಸ್ಯರ ಸಂಖ್ಯೆ ಕೂಡ ಹೆಚ್ಚಾಗಲಿರುವುದರಿಂದ ಆಸನಗಳ ಸಂಖ್ಯೆಯೂ ಹೆಚ್ಚಿಸುವುದು ಅವಶ್ಯವಾಗಿತ್ತು. ಹಿಂದಿನ ಸಂಸತ್ ಭವನದಲ್ಲಿ ಲೋಕಸಭೆಯ ಆಸನಗಳ ಸಂಖ್ಯೆ 550 ಇದ್ದರೆ, ಹೊಸ ಕಟ್ಟಡದಲ್ಲಿ ಈ ಸಂಖ್ಯೆ 888ಕ್ಕೆ ಏರುತ್ತದೆ. ರಾಜ್ಯಸಭೆಯ ಆಸನಗಳ ಸಂಖ್ಯೆ 250ರಿಂದ 384ಕ್ಕೆ ಏರುತ್ತದೆ. ಪ್ರಾಕೃತಿಕ ಮತ್ತು ಭದ್ರತೆಯ ದೃಷ್ಟಿಯಿಂದ ಈಗಿನ ಕಟ್ಟಡ ಹಿಂದಿನ ಕಟ್ಟಡಕ್ಕಿಂತ ಹೆಚ್ಚು ಸುರಕ್ಷಿತವಾಗಿದೆ.

ಹಿಂದಿನ ಕಟ್ಟಡ ವಿಸ್ತೀರ್ಣ 24,281 ಚ.ಮೀ. ಇದ್ದರೆ, ಈಗಿನ ಕಟ್ಟಡ ವಿಸ್ತೀರ್ಣ 64,500 ಚ.ಮೀ ಇದೆ. ಪ್ರಜಾತಂತ್ರದ ದೇಗುಲ ಎನ್ನಲಾಗುವ ನೂತನ ಕಟ್ಟಡದ ಪಕ್ಷಿನೋಟವೇ ಅದ್ಭುತವಾಗಿದೆ. 971 ಕೋಟಿ ರೂ. ವೆಚ್ಚದ ಈ ಭವ್ಯ ಕಟ್ಟಡ ಕೇವಲ ಎರಡೇ ವರ್ಷದೊಳಗೆ ನಿರ್ಮಾಣ ಆಗಿರುವುದು ಅದ್ಭುತವೇ ಸರಿ. ಆಧುನಿಕ ತಂತ್ರಜ್ಞಾನವನ್ನೂ ಕಲಾಪಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಳಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು 60,000 ಕಾರ್ಮಿಕರನ್ನು ಸನ್ಮಾನಿಸಲಿರುವುದು ಕೂಡ ಅರ್ಥಪೂರ್ಣವಾಗಿದೆ. ಕ್ರಿ.ಶ. 3ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಚೋಳ ರಾಜರು ಬಳಸಿದ್ದ ಚಿನ್ನದ ಸೆಂಗೋಲ್ (ರಾಜದಂಡ) ಅನ್ನು ನೂತನ ಸಂಸತ್ ಭವನದಲ್ಲಿ ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿ ಇರಿಸುತ್ತಿರುವುದು ಕೂಡ ಭಾರತೀಯ ಪರಂಪರೆಗೆ ನೀಡುತ್ತಿರುವ ಮಹತ್ವದ ಅಂಶ.

ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಮಹತ್ತು, ಭವ್ಯತೆಗಳನ್ನು ಹೊಂದಿರುವ ವಾಸ್ತುಶಿಲ್ಪಗಳನ್ನು ಸೃಷ್ಟಿಸುತ್ತದೆ. ಭಾರತದ ಹಳೆಯ ಸಂಸತ್ತು ಕೂಡ ಭವ್ಯವಾದುದು; ಆದರೆ ಅದು ಬ್ರಿಟಿಷರಿಂದ ನಿರ್ಮಿತವಾದುದು. ಬ್ರಿಟಿಷರಿಂದ ನಿರ್ಮಿತ ಎಂಬ ಕಾರಣಕ್ಕೇ ತ್ಯಾಜ್ಯವಾಗಬೇಕಿಲ್ಲ. ಆದರೆ, ನಮ್ಮನ್ನು ಆಳುವ ಸ್ವಾತಂತ್ರ್ಯ ಹಾಗೂ ಅಧಿಕಾರಗಳನ್ನು ನಾವೇ ಪಡೆದುಕೊಂಡಂತೆ, ಹಾಗೆ ಆಳುವ ಸರ್ಕಾರ ಕಾರ್ಯಾಚರಿಸುವ ಸಂಸತ್‌ ಭವನ ಕೂಡ ನಮ್ಮ ನಿರ್ಮಾಣವೇ ಆಗಿರಬೇಕು ಎಂಬ ಕನಸು ನಮಗಿರುವುದೂ ಸಹಜ. ನೂತನ ಹಾಗೂ ಸುಸಜ್ಜಿತ ಸಂಸತ್‌ ಭವನ ನಮ್ಮ ಈಗಿನ ಹಾಗೂ ಭವಿಷ್ಯದ ಅಗತ್ಯ. ಮುಂದೆ ಅದೇ ಭಾರತದ ಪ್ರಜಾತಂತ್ರದ ಭವ್ಯ ಲಾಂಛನವೂ ಆಗಿರಲಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ

ಈ ಮಧ್ಯೆ, ಉದ್ಘಾಟನೆ ಸಮಾರಂಭಕ್ಕೆ ಕೆಲವು ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ. ಲೋಕಸಭೆ- ರಾಜ್ಯಸಭೆ ನಡೆಯುತ್ತಿರುವಾಗ ನೆಪ ತೆಗೆದು ಮಾಡುವ ಸಭಾತ್ಯಾಗವೇ ಸಮಂಜಸವಲ್ಲ ಎಂದಾಗ, ದೇಶದ ಹೆಮ್ಮೆಯಾದ ನೂತನ ಸಂಸತ್‌ ಭವನದ ಉದ್ಘಾಟನೆಯನ್ನೇ ಬಹಿಷ್ಕರಿಸುವ ನಡೆ ಎಷ್ಟು ಸರಿ? ಇದು ಪ್ರಜಾಪ್ರಭುತ್ವದ ನೈಜ ಚೈತನ್ಯಕ್ಕೇ ಕೊಡಲಿಯೇಟು. ಪ್ರಧಾನಿ ಮೋದಿ, ನೂರ ಮೂವತ್ತು ಕೋಟಿ ಪ್ರಜೆಗಳ ಪ್ರತಿನಿಧಿಯಾಗಿ ಸಂಸತ್ತನ್ನು ಉದ್ಘಾಟಿಸುತ್ತಿದ್ದಾರೆ. ಇನ್ನೂ ನೂರಾರು ವರ್ಷಗಳ ಕಾಲ ಇದು ಅರ್ಥಪೂರ್ಣ ಕಲಾಪಗಳ ತಾಣವಾಗಬೇಕಿದೆ. ರಾಷ್ಟ್ರದ ವಿವೇಕಯುತ ಮುನ್ನಡೆಯನ್ನು ನಿರ್ಣಯಿಸುವ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಳವಾಗಿರಲಿದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳು ತಮ್ಮ ನಿರ್ಧಾರ ಮರುಪರಿಶೀಲಿಸಿ ಸಮಾರಂಭದಲ್ಲಿ ಭಾಗವಹಿಸುವುದು ವಿವೇಕಯುತವಾಗಿರುತ್ತದೆ. ಅವರ ಸಮಾರಂಭ ಬಹಿಷ್ಕಾರದ ಕರೆಯ ನಡುವೆಯೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮುಂತಾದ ಪ್ರತಿಪಕ್ಷಗಳ ನಾಯಕರು ಭಾಗವಹಿಸುತ್ತಿರುವುದು ವಿವೇಕದ ನಿರ್ಧಾರ. ಅವರ ಈ ನಡೆ ಇತರರಿಗೆ ಮಾದರಿಯಾಗಲಿ. ನೂತನ ಸಂಸತ್ ಭವನ ಭಾರತದ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ.

Exit mobile version