ಇಂದು (ಮಾರ್ಚ್ 8) ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿಕೊಳ್ಳಲಾಗುತ್ತಿದೆ. ವಿಶ್ವದ ಸರಿಸುಮಾರು ಅರ್ಧದಷ್ಟು ಜನಸಂಖ್ಯೆ ಸ್ತ್ರೀಯರು. ಆದರೆ ಇಂದಿಗೂ ವಿಶ್ವದ ಹಲವು ಕಡೆ ಸ್ತ್ರೀ ಎರಡನೇ ದರ್ಜೆಯ ಪ್ರಜೆ. ಹೀಗಾಗಿ ಸ್ತ್ರೀಯರ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು, ಮಹಿಳಾ ಹಕ್ಕುಗಳ ಹೋರಾಟಗಾರರಿಗೆ ಗೌರವ ಸಲ್ಲಿಸುವುದು, ಮಹಿಳೆಯರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣದ ಉಪಕ್ರಮಗಳನ್ನು ಕೈಗೆತ್ತಿಕೊಳ್ಳುವುದು, ಈ ನಿಟ್ಟಿನಲ್ಲಿ ಸಾಧನೆಗೈದವರನ್ನು ಸ್ಮರಿಸುವುದು, ಮಹಿಳೆಯರಿಗೆ ಗೌರವ, ಮೆಚ್ಚುಗೆ ಮತ್ತು ಪ್ರೀತಿ ತೋರಿಸುವುದು- ಇವೆಲ್ಲವೂ ಇಂದು ನಡೆಯಬೇಕು. ಮಹಿಳೆಯರ ವಿರುದ್ಧದ ಹಿಂಸೆ ಮತ್ತು ನಿಂದನೆಯಂತಹ ವಿಷಯಗಳ ಬಗ್ಗೆಯೂ ಹೆಚ್ಚು ಸೂಕ್ಷ್ಮವಾದ ಕಾನೂನುಗಳು ರಚನೆಯಾಗುತ್ತಿವೆ. ಇದೂ ಗಮನಾರ್ಹ.
ʼಲಿಂಗ ಸಮಾನತೆಗಾಗಿ ಆವಿಷ್ಕಾರಗಳು ಮತ್ತು ತಂತ್ರಜ್ಞಾನʼ ಎಂಬುದು ಈ ವರ್ಷದ ಮಹಿಳಾ ದಿನಾಚರಣೆಯ ಥೀಮ್. ಜನತೆ ಲಿಂಗ ಸಮಾನತೆಯ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿರುವುದಂತೂ ನಿಜ. ಸಮಾಜದ ಎಲ್ಲ ವಲಯಗಳಲ್ಲೂ ಹೆಚ್ಚುತ್ತಿರುವ ಮಹಿಳೆಯರ ಸ್ಥಾನಮಾನಗಳನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಭಾರತದಲ್ಲಿನ ಉದಾಹರಣೆಗೆ ನೋಡುವುದಾದರೆ, ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಮುಂತಾದ ಅತ್ಯುನ್ನತ ಸ್ಥಾನಗಳನ್ನು ಮಹಿಳೆ ಅಲಂಕರಿಸಿದ್ದಾಳೆ. ಮಿಲಿಟರಿಯ ಪ್ರಮುಖ ಅತ್ಯುನ್ನತ, ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆ ಇದ್ದಾಳೆ. ಖ್ಯಾತ ಬೃಹತ್ ಕಂಪನಿಗಳ ಅತ್ಯುನ್ನತ ಸಿಇಒ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಆದರೆ ಪ್ರಾತಿನಿಧ್ಯ ಎಂಬ ವಿಚಾರಕ್ಕೆ ಬಂದಾಗ, ಆಳುವ ಶಾಸಕಾಂಗದಲ್ಲಿ ಮಹಿಳೆಗೆ ಎಷ್ಟು ಸ್ಥಾನವಿದೆ ಎಂಬುದೂ ಮುಖ್ಯವಾಗುತ್ತದೆ. ನಮ್ಮ ದೇಶದ ಲೋಕಸಭೆಯಲ್ಲಿ 543 ಹಾಗೂ ರಾಜ್ಯಸಭೆಯಲ್ಲಿ 245 ಸದಸ್ಯ ಸ್ಥಾನಗಳಿವೆ. ಜನಸಂಖ್ಯೆಯಲ್ಲಿ ಅರ್ಧ ಎಂದರೆ ಇದರ ಅರ್ಧದಷ್ಟಾದರೂ, ಅಂದರೆ 394ರಷ್ಟಾದರೂ ಮಹಿಳಾ ಎಂಪಿಗಳಿರಬೇಕಿತ್ತು. ಆದರೆ ಅಂಥ ಕನಸನ್ನೂ ಕಾಣಬೇಕಿಲ್ಲ. ಈಗ ಲೋಕಸಭೆಯಲ್ಲಿ ಇರುವ ಮಹಿಳಾ ಸದಸ್ಯರ ಸಂಖ್ಯೆ 78 ಆಗಿದ್ದರೆ, ರಾಜ್ಯಸಭೆಯಲ್ಲಿ ಇವರ ಪ್ರಮಾಣ 25 ಮಾತ್ರ. ಅಂದರೆ ಒಟ್ಟು ಸಂಸತ್ ಸದಸ್ಯರಲ್ಲಿ ಮಹಿಳೆಯರ ಪಾಲು ಶೇ.13 ಮಾತ್ರ (ಒಟ್ಟು 103). ದೇಶದ ಮೊದಲ ಚುನಾವಣೆ ನಡೆದಾಗಲೂ ಹೆಚ್ಚು ಕಡಿಮೆ ಇಷ್ಟೇ ಇತ್ತು. ಕರ್ನಾಟಕದಲ್ಲಿ ಇದಕ್ಕಿಂತ ಕಡಿಮೆ ಪ್ರಮಾಣದ ಅಂಕಿಅಂಶಗಳನ್ನು ಕಾಣಬಹುದು. 224 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರ ಸಂಖ್ಯೆ ಕೇವಲ 11 (ಶೇ.5). ಅಂದರೆ ಮಹಿಳಾ ಪ್ರಾತಿನಿಧ್ಯದಲ್ಲಿ ಏನು ಸಾಧಿಸಿದಂತಾಯಿತು?
ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು ಎಂಬುದು ಮುತ್ಸದ್ದಿಗಳ ಆಶಯ. ಸಂವಿಧಾನವೂ ಇದನ್ನೇ ಸಾರುತ್ತದೆ. ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಆಶಯದ ʼಮಹಿಳಾ ಮೀಸಲು ವಿಧೇಯಕʼ ಸಂಸತ್ತಿನಲ್ಲಿ 27 ವರ್ಷಗಳಿಂದ ನನೆಗುದಿಯಲ್ಲಿ ಬಿದ್ದಿದೆ! ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳನ್ನು ಮೀಸಲಿಡಬೇಕು ಎಂಬುದು ಈ ವಿಧೇಯಕದ ಪ್ರಮುಖ ಅಂಶ. ಈವರೆಗೆ ಒಟ್ಟು ಐದು ಬಾರಿ ಈ ವಿಧೇಯಕ ಮತ್ತೆ ಮತ್ತೆ ಮಂಡನೆಯಾಗಿದೆ. ಆದರೆ ಮತಕ್ಕೆ ಹಾಕದೆ, ಹಾಕಿದರೇ ಅಂಗೀಕಾರವಾಗದೆ ಉಳಿಯುತ್ತಿದೆ. ಇದಕ್ಕೆ ಕಾರಣ ಪಕ್ಷಗಳ ಹಿಂಜರಿಕೆ, ಮೌಢ್ಯ, ಇಚ್ಛಾಶಕ್ತಿಯ ಕೊರತೆ. ಮಹಿಳಾ ಸಬಲೀಕರಣದ ಮಂತ್ರವನ್ನು ಆಯಕಟ್ಟಿನ ಹೊತ್ತಿನಲ್ಲಿ ಪಠಿಸುವ ರಾಜಕೀಯ ಪಕ್ಷಗಳ್ಯಾವುವೂ ಈ ವಿಧೇಯಕವನ್ನು ಅಂಗೀಕಾರ ಮಾಡುವ ಗೋಜಿಗೇ ಹೋಗಿಲ್ಲ. ಇದು ಒಂದು ರೀತಿಯಲ್ಲಿ ಇಡೀ ದೇಶದ ಮಹಿಳಾ ಸಂಕುಲಕ್ಕೇ ನಮ್ಮನ್ನಾಳುವವರು ಮಾಡಿದ ಅವಮಾನ. ಗ್ರಾಮೀಣ ಪಂಚಾಯಿತಿ ವ್ಯವಸ್ಥೆಯಲ್ಲಿ ಈ ಶೇ.33 ವ್ಯವಸ್ಥೆ ಯಶಸ್ವಿಯಾಗಿ ಜಾರಿಯಲ್ಲಿದೆ. ಉನ್ನತ ಮಟ್ಟದಲ್ಲಿ ಜಾರಿ ಮಾಡಲು ಮಾತ್ರ ಪಕ್ಷಗಳ ಹಿಂಜರಿಕೆ ಎದ್ದು ಕಾಣಿಸುತ್ತಿದೆ. ಮಹಿಳೆಯರು ಶಾಸನ ಮಾಡಬಾರದೇ? ಹಾಗಿದ್ದರೆ ಪಕ್ಷಗಳಿಗೆ ಈ ಹಿಂಜರಿಕೆಯೇಕೆ?
ವಿಧೇಯಕ ಅಂಗೀಕೃತವಾಗದೇ ಶಾಸನವಾಗದು ಎಂದಿದ್ದರೆ, ಹೋಗಲಿ, ರಾಜಕೀಯ ಪಕ್ಷಗಳು ಸ್ವ ಇಚ್ಛೆಯಿಂದಲಾದರೂ ಮಹಿಳೆಯರಿಗೆ ಚುನಾವಣೆಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಸದ್ಯಕ್ಕೆ ಲಿಂಗ ಸಮಾನತೆ ಸಾಧಿಸಲು ಅದೊಂದೇ ಪರಿಹಾರ. ಆದರೆ ನಮ್ಮ ಪಕ್ಷಗಳು ಸಾಮಾನ್ಯವಾಗಿ ಅನುಕಂಪದ ಅಲೆಯ ಲಾಭ ಪಡೆಯಲು ಮಾತ್ರ ಮಹಿಳೆಯರನ್ನು ಬಳಸಿಕೊಳ್ಳುತ್ತಿವೆ. ಬಾಯಿ ಮಾತಿನಲ್ಲಿ ತಾನು ಮಹಿಳೆಯರ ಪರ ಎಂದು ಎಲ್ಲ ಪಕ್ಷಗಳ ಮುಖಂಡರೂ ಹೇಳಿಕೊಳ್ಳುತ್ತಾರೆ; ಆದರೆ ಟಿಕೆಟ್ ನೀಡುವ ವಿಷಯಕ್ಕೆ ಬಂದಾಗ ಹಿಂಜರಿಯುತ್ತಾರೆ. ಇದು ನಿಲ್ಲಬೇಕು. ಮಹಿಳೆ ಕೂಡ ಆಳ್ವಿಕೆಯಲ್ಲಿ ಸಮರ್ಥಳು ಎಂಬುದನ್ನು ಮತ್ತೆ ಮತ್ತೆ ರುಜುವಾತುಪಡಿಸಬೇಕಿಲ್ಲ. ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬಂದಿದೆ. ಈ ಸಲವಾದರೂ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರಲು ಸಾಧ್ಯವಾದರೆ ಆಗ ಮಹಿಳಾ ದಿನದ ಆಶಯ ಸಾರ್ಥಕವಾಗುತ್ತದೆ.