Site icon Vistara News

Mayawati: ವಜಾಗೊಳಿಸಿದ ತಿಂಗಳಲ್ಲೇ ಸೋದರಳಿಯನಿಗೆ ಉತ್ತರಾಧಿಕಾರಿ ಪಟ್ಟ ಮರಳಿಸಿದ ಮಾಯಾವತಿ!

Mayawati

Mayawati sacks nephew Akash Anand from key party posts till he becomes ‘mature’

ಲಖನೌ: ಬಹುಜನ ಸಮಾಜ ಪಕ್ಷದ (BSP) ವರಿಷ್ಠ ನಾಯಕಿ ಮಾಯಾವತಿ (Mayawati) ಅವರು ಸೋದರಳಿಯ ಆಕಾಶ್‌ ಆನಂದ್‌ (Akash Anand) ಅವರನ್ನೇ ಮತ್ತೆ ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದಾರೆ. ಒಂದು ತಿಂಗಳ ಹಿಂದೆಯೇ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂದಲೂ ಮಾಯಾವತಿಯವರು ವಜಾಗೊಳಿಸಿದ್ದರು. ಇದಕ್ಕೂ ಐದು ತಿಂಗಳು ಮೊದಲು ಅವರು ಎರಡೂ ಹುದ್ದೆಗಳನ್ನು ವಹಿಸಿದ್ದರು. ಈಗ ವಜಾಗೊಳಿಸಿದ ಒಂದೇ ತಿಂಗಳಲ್ಲಿ ಮತ್ತೆ ಎರಡೂ ಹುದ್ದೆಗಳನ್ನು ಮರಳಿ ನೀಡಿದ್ದಾರೆ. ಲಖನೌನಲ್ಲಿ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಈ ತೀರ್ಮಾನ ಘೋಷಣೆ ಮಾಡಿದ್ದಾರೆ.

ಆಕಾಶ್‌ ಆನಂದ್‌ ಅವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಿರುವ ಕುರಿತು ಮಾಯಾವತಿಯವರೇ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. “ಆಕಾಶ್‌ ಆನಂದ್‌ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಗಳನ್ನು ನಿಯೋಜಿಸಲಾಗಿತ್ತು. ಆದರೆ, ಬದಲಾದ ಸಾಮಾಜಿಕ ವ್ಯವಸ್ಥೆ, ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಈಗಲೂ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಚಿಂತನೆಗಳನ್ನು ಪಾಲಿಸಲು ಕಟಿಬದ್ಧವಾಗಿದೆ” ಎಂದು ತಿಳಿಸಿದ್ದರು.

ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಮಾಯಾವತಿ ಅವರು ತೆಗೆದುಕೊಂಡಿದ್ದ ಈ ತೀರ್ಮಾನ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಮಾಯಾವತಿ ಅವರ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಭಾರಿ ಭಿನ್ನಮತ ಸ್ಫೋಟವಾಗಿದೆ. ಆಕಾಶ್‌ ಆನಂದ್‌ ಅವರು ಮಾಯಾವತಿಯವರ ಮಾತು ಕೇಳುತ್ತಿಲ್ಲ. ಇದೇ ಕಾರಣಕ್ಕಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಯಾರಿವರು ಆಕಾಶ್‌ ಆನಂದ್?

ಆಕಾಶ್ ಆನಂದ್ ತಮ್ಮ 22ನೇ ವಯಸ್ಸಿನಲ್ಲಿ 2017ರಲ್ಲಿ ರಾಜಕಾರಣವನ್ನು ಪ್ರವೇಶಿಸಿದರು. ಲಂಡನ್‌ನಲ್ಲಿ ಓದಿರುವ ಆಕಾಶ್ ಎಂಬಿಎ ಪದವೀಧರರು. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ಅವರ ರಾಜಕೀಯ ಚೊಚ್ಚಲ ಪ್ರವೇಶವಾಗಿತ್ತು, ಅಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ, ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಬಿಎಸ್‌ಪಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Akash Anand: ಯಾರಿವರು ಮಾಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್?

Exit mobile version