ಬೆಂಗಳೂರು: ಮೇಕೆದಾಟು ಯೋಜನೆ ಕುರಿತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ ಚರ್ಚಿಸಬಾರದು ಎಂದು ತಮಿಳುನಾಡು ಪಟ್ಟು ಹಿಡಿದಿದ್ದರೂ, ಈ ಯೋಜನೆ ಕುರಿತು ತೀರ್ಮಾನಿಸುವ ಅಧಿಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕಿದೆ ಎಂಬುದು ಈಗ ಸ್ಪಷ್ಟವಾಗಿದೆ.
ಹೌದು, ಈ ವಿಷಯವನ್ನು ಕೇಂದ್ರ ಸರ್ಕಾರದ ಸಾಲಿಟರ್ ಜನರಲ್ ತುಷಾರ್ ಮೇಹ್ತಾ ಜೂನ್ 4 ರಂದೇ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಈ ಬಾರಿಯ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ʼʼಈ ಪ್ರಾಧಿಕಾರವು ಸುಪ್ರೀಂಕೋರ್ಟ್‌ನ ಸೂಚನೆಯಂತೆಯೇ ರಚನೆಗೊಂಡಿದೆ. ಕೋರ್ಟ್‌ನ ಐತೀರ್ಪಿನ ಅಡಿಯಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಬಹುದೇ ಇಲ್ಲವೇ ಎಂಬುದರ ಕುರಿತು ಸ್ವತಂತ್ರವಾಗಿ ತೀರ್ಮಾನಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆʼʼ ಎಂದು ಮೇಹ್ತಾ ಜಲಶಕ್ತಿ ಸಚಿವಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಸರ್ಕಾರವು ಪ್ರಾಧಿಕಾರವು ಈ ಯೋಜನೆಯ ಕುರಿತು ಚರ್ಚಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಜಲಶಕ್ತಿ ಸಚಿವಾಲಯವು ಸಲಹೆ ಕೇಳಿದ್ದರಿಂದ ಸಾಲಿಟರ್ ಜನರಲ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಐತೀರ್ಪಿನ ಅನುಷ್ಠಾನವಷ್ಟೇ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ವಿಚಾರವಾಗಿದೆ. ಹೀಗಾಗಿ ಇದು ಹೊಸ ಯೋಜನೆಯಾದ ಮೇಕೆದಾಟು ಯೋಜನೆ ಕುರಿತು ಯಾವುದೇ ನಿರ್ಧಾರಕ್ಕೆ ಬರುವ ಅಧಿಕಾರ ಹೊಂದಿಲ್ಲ. ಹೀಗಾಗಿ ಈ ವಿಷಯವನ್ನು ಚರ್ಚೆಗೆ ಕೂಡ ಕೈಗೆತ್ತಿಕೊಳ್ಳಬಾರದು ಎಂಬುದು ತಮಿಳುನಾಡಿನ ವಾದವಾಗಿದೆ.
ಸಾಲಿಟರ್ ಜನರಲ್ ಮೇಹ್ತಾ ಅವರ ಸಲಹೆಯಿಂದಾಗಿ ಈಗ ಜೂನ್ 17 ಜೂನ್ ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| Mekedatu Row | ಮತ್ತೆ ತಮಿಳುನಾಡಿನ ತಗಾದೆಗೆ ವ್ಯಾಪಕ ವಿರೋಧ