Site icon Vistara News

ವಿಸ್ತಾರ ಸಂಪಾದಕೀಯ: ಕರಗುತ್ತಿದೆ ಹಿಮಾಲಯ, ಭವಿಷ್ಯದಲ್ಲಿ ಕಾದಿದೆ ಅಪಾಯ

Melting Himalayas, danger awaits in the future

Melting Himalayas, danger awaits in the future

ಕಳೆದ 20 ವರ್ಷಗಳಲ್ಲಿ ಹಿಮಾಲಯದ ವ್ಯಾಪ್ತಿಯಲ್ಲಿರುವ ಹಿಮಸರೋವರಗಳಿಂದ ಸುಮಾರು 57 ಕೋಟಿ ಆನೆಗಳ ತೂಕದಷ್ಟು ಹಿಮವು ಕರಗಿಹೋಗಿದೆಯಂತೆ. ಇದು ಊಹೆಯಲ್ಲ. ಬ್ರಿಟನ್‌ನ ಯುನಿವರ್ಸಿಟಿ ಆಫ್‌ ಆ್ಯಂಡ್ರ್ಯೂಸ್‌, ಚೀನಾದ ಅಕಾಡೆಮಿ ಆಫ್‌ ಸೈನ್ಸಸ್‌, ಆಸ್ಟಿಯಾದ ಗ್ರ್ಯಾಜ್‌ ಯುನಿವರ್ಸಿಟಿ ಆಫ್‌ ಟೆಕ್ನಾಲಜಿ ಹಾಗೂ ಕಾರ್ನೆಜಿ ಮೆಲನ್‌ ಯುನಿವರ್ಸಿಟಿಯ ತಜ್ಞರು ಹಿಮಾಲಯದಲ್ಲಿ ಹಿಮ ಕರಗುವಿಕೆಯ ಕುರಿತು ಅಧ್ಯಯನ ನಡೆಸಿ ಕಂಡುಕೊಂಡ ಫಲಿತಾಂಶ. ಹಿಮನದಿಗಳು ನಾಮಾವಶೇಷವಾಗುತ್ತಿರುವ ಕಾರಣ ಎರಡು ದಶಕಗಳಲ್ಲಿ ಹಿಮದ ಪ್ರಮಾಣ ಶೇ.6.5ರಷ್ಟು ಕುಸಿದಿದೆ. ನೇಚರ್‌ ಜಿಯೋಸೈನ್ಸ್‌ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಕುರಿತ ವಿಜ್ಞಾನಿಗಳ ಸಂಶೋಧನಾ ವರದಿ ಗಾಬರಿ ಮೂಡಿಸುವಂತಿದೆ.

ಭಾರತ, ಚೀನಾ, ನೇಪಾಳ ಮತ್ತು ಭೂತಾನ್‌ಗಳಲ್ಲಿ ಹಬ್ಬಿಕೊಂಡಿರುವ ಹಿಮಾಲಯ ಪ್ರದೇಶದಲ್ಲಿರುವ ನೀರ್ಗಲ್ಲುಗಳ ಕೊರೆತ, ಹಿಮನದಿಗಳು ಬರಿದಾಗುತ್ತಿರುವುದು, ಹಿಮ ಕರಗಿ ಆವಿಯಾಗುತ್ತಿರುವುದು, ಸರೋವರಗಳ ವ್ಯಾಪ್ತಿ ಕಡಿಮೆಯಾಗುತ್ತಿರುವುದು ಸೇರಿ ಹಲವು ರೀತಿಯಲ್ಲಿ ಹಿಮಾಲಯವು ಬರಿದಾಗುತ್ತಿದೆ. 2000-2020ರ ಅವಧಿಯಲ್ಲಿ ಆಗಿರುವ ಹಿಮಾಲಯದ ಹಿಮನದಿಗಳ ನಾಶದ ಪ್ರಮಾಣ ಭಯಾನಕವಾದುದು. ವರ್ಷದಿಂದ ವರ್ಷಕ್ಕೆ ಹಿಮ ಕರಗುವಿಕೆಯ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಹೀಗೆಯೇ ಹಿಮಾಲಯ ಬರಿದಾಗುತ್ತ ಹೋದರೆ 21ನೇ ಶತಮಾನದ ಕೊನೆಯ ವೇಳೆಗೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದಕ್ಕೆ ಕಾರಣ ನಮ್ಮ ಕಣ್ಣ ಮುಂದೆಯೇ ಇದೆ. ಜಾಗತಿಕ ತಾಪಮಾನದ ಪರಿಣಾಮವನ್ನು ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳು ಎದುರಿಸುತ್ತಿವೆ. ಹಿಮಾಲಯದ ಕರಗುವಿಕೆ ಜಾಗತಿಕ ತಾಪಮಾನದ ಗಂಭೀರ ಪರಿಣಾಮಕ್ಕೆ ಸ್ಪಷ್ಟ ನಿದರ್ಶನ.

ಹಿಮಾಲಯದವರೆಗೂ ಹೋಗುವುದು ಬೇಡ ಎಂದಿದ್ದರೆ ನಮ್ಮಲ್ಲೇ ಏನಾಗುತ್ತಿದೆ ಎಂಬುದನ್ನು ಗಮನಿಸಿಕೊಳ್ಳಬಹುದು. ಈ ವರ್ಷ ಬೇಸಿಗೆಯ ತಾಪಮಾನ ಅತ್ಯಧಿಕವಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಕಂಡಿರದ ಉಷ್ಣತೆಯನ್ನು ಈ ಬೇಸಿಗೆಯಲ್ಲಿ ನಾವು ಅನುಭವಿಸಲಿದ್ದೇವೆ. ಸದಾ ತಂಪಾಗಿರುವ ಬೆಂಗಳೂರು, ಮಲೆನಾಡು ಕೂಡ ಅಗ್ನಿಕುಂಡವಾಗಿದೆ. ಬರ ಪರಿಸ್ಥಿತಿ ಎದುರಾಗಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ವರ್ಷ ನಮ್ಮ ದೇಶದ ಅರಣ್ಯಗಳಲ್ಲಿ ಕಂಡುಬಂದ ಕಾಡ್ಗಿಚ್ಚಿನ ಪ್ರಮಾಣ ಹಿಂದೆ ಎಂದೂ ಕಂಡುಬಂದಿರಲಿಲ್ಲ. ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (ಎಫ್‌ಎಸ್‌ಐ) ಉಪಗ್ರಹ ಆಧಾರಿತ ಕಾಡ್ಗಿಚ್ಚು ಮೇಲ್ವಿಚಾರಣೆಯ ಪ್ರಕಾರ ಮಾರ್ಚ್ 1ರಿಂದ 12ರ ನಡುವೆ ಸುಮಾರು 42,799 ಕಡೆ ಕಾಡ್ಗಿಚ್ಚುಗಳು ಪತ್ತೆಯಾಗಿದ್ದು, ಪ್ರಮಾಣದಲ್ಲಿ 115%ದಷ್ಟು ಹೆಚ್ಚಾಗಿವೆ. ನಿರಂತರವಾಗಿ ನಡೆದಿರುವ ಅರಣ್ಯನಾಶಕ್ಕೆ ಇದು ತುಪ್ಪ ಸುರಿದಿದೆ. ಸಾಕಷ್ಟು ಕುಡಿಯುವ ಹಾಗೂ ದಿನಬಳಕೆಯ ನೀರು ಲಭ್ಯವಿಲ್ಲ. ಆದರೆ ಕಳೆದ ಮಳೆಗಾಲ ಮಾತ್ರ ದೊಡ್ಡ ಹಾವಳಿಯನ್ನೇ ಎಬ್ಬಿಸಿತು. ಅನೇಕ ಕಡೆ ಅತಿವೃಷ್ಟಿಯಿಂದಾಗಿ ಜನ ಬವಣೆ ಅನುಭವಿಸಿದರು; ಬೆಂಗಳೂರು ಕೂಡ ಇದಕ್ಕೆ ಸಾಕ್ಷಿಯಾಯಿತು.

ಇದನ್ನೂ ಓದಿ: Himalayan Glaciers: ಬರಿದಾಗುತ್ತಿದೆ ಹಿಮಾಲಯ, 20 ವರ್ಷದಲ್ಲಿ 57 ಕೋಟಿ ಆನೆ ತೂಕದ ಹಿಮ ಮಾಯ!

ಅಂದರೆ ಮಳೆಗಾಲದಲ್ಲಿ ಅತಿವೃಷ್ಟಿ, ಬೇಸಿಗೆಯಲ್ಲಿ ಅತಿ ಸೆಖೆ, ಎಷ್ಟು ಮಳೆಯಾದರೂ ಕುಡಿಯುವ ನೀರಿನ ಸಂಗ್ರಹ ಇಲ್ಲದಿರುವುದು, ಇವೆಲ್ಲವೂ ತಾಪಮಾನ ಹೆಚ್ಚಳದ ಪರಿಣಾಮಗಳೇ ಆಗಿವೆ. ಇದೆಲ್ಲವೂ ಮತ್ತೆ ಮನುಷ್ಯಕೃತ ಅಪರಾಧದ ಪರಿಣಾಮವೇ ಎಂದು ಬೇರೆ ಹೇಳಬೇಕಿಲ್ಲ. ಕಾರ್ಬನ್‌ ಅನಿಲಗಳನ್ನು ಮಿತಿಯಿಲ್ಲದೆ ಪರಿಸರಕ್ಕೆ ಸೇರಿಸುವುದು, ಜಲಮೂಲಗಳ ನಾಶ, ಪೆಟ್ರೋಲಿಯಂ ಇಂಧನದ ಮಿತಿಮೀರಿದ ಬಳಕೆ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶ- ಇವೆಲ್ಲವೂ ಇದಕ್ಕೆ ಕಾರಣಗಳು. ಸುಸ್ಥಿರವಾದ ಅಭಿವೃದ್ಧಿಯ ಮಾದರಿ ನಮ್ಮ ಮುಂದೆ ಇಲ್ಲದೇ ಹೋದರೆ, ಇದೇ ರೀತಿ ತಾಪಮಾನವನ್ನು ಹೆಚ್ಚಿಸುತ್ತ ಹೋದರೆ ಮನುಷ್ಯಕುಲಕ್ಕೆ ಸದ್ಯದಲ್ಲೇ ಅಪಾಯ ಕಾದಿದೆ ಎಂದು ಹಿಮಾಲಯ ಎಚ್ಚರಿಸಿದೆ. ಪರಿಸರ ಶೃಂಗಸಭೆಗಳಲ್ಲಿ ಕೈಗೊಳ್ಳುತ್ತಿರುವ ನಿರ್ಣಯಗಳನ್ನು ಒಮ್ಮತದಿಂದ ಜಾರಿಗೆ ತರುವುದು ನಮ್ಮ ಧ್ಯೇಯವಾಗಬೇಕು. ಪರಿಸರ ಸಂರಕ್ಷಣೆ ಆದ್ಯ ಮಂತ್ರವಾಗಬೇಕು. ಆಗ ಮಾತ್ರ ಹಸಿರು ಗ್ರಹ ಭೂಮಿ, ಮನುಷ್ಯಕುಲ ಉಳಿದೀತು.

Exit mobile version