ಬೆಂಗಳೂರು: ಸುಮಾರು ಒಂದೂವರೆ ತಿಂಗಳ ಕಾಲ ಇರುವ ಬೇಸಿಗೆ ರಜೆಯಲ್ಲಿ (Summer Holidays) ಸರ್ಕಾರಿ ಶಾಲೆಗಳ (Government School) ಬಡವರ್ಗದ ಮಕ್ಕಳು ಮಧ್ಯಾಹ್ನದ ಊಟದ (Midday Meal) ಸಮಸ್ಯೆಯನ್ನು ಎದುರಿಸುತ್ತಾರೆ. ಇದನ್ನು ಪರಿಹರಿಸಲು ರಾಜ್ಯ ಸರ್ಕಾರ ರಜೆಯಲ್ಲೂ ಬಿಸಿಯೂಟ (Bisiyuta) ಪ್ಲಾನ್‌ಗೆ ಮುಂದಾಗಿದೆ.
ಬರಪೀಡಿತ ತಾಲೂಕುಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಒದಗಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಶಾಲಾ ಮಕ್ಕಳಿಗೆ ಏಪ್ರಿಲ್ 11ರಿಂದ ಬೇಸಿಗೆ ರಜೆ ಆರಂಭವಾಗುತ್ತಿದ್ದು, ರಜೆಯಲ್ಲೂ ಬಿಸಿಯೂಟ ವ್ಯವಸ್ಥೆಗೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಯೋಜನೆ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳಿಗೆ ಸೀಮಿತವಾಗಿದೆ. ಶಾಲೆಗಳನ್ನು ಹಾಗೂ ಮಕ್ಕಳನ್ನು ಗುರುತಿಸುವ ಹೊಣೆಯನ್ನು ಆಯಾ ಕ್ಲಸ್ಟರ್‌ನ ಅಧಿಕಾರಿಗಳಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ.
ರಾಜ್ಯದಲ್ಲಿ 2024-25ನೇ ಸಾಲಿನ ಬೇಸಿಗೆ ರಜೆಯ ಅವಧಿಯು 11-04-2024ರಿಂದ ಆರಂಭವಾಗಲಿದೆ. ದಿನಾಂಕ 28-05-2024ರವರೆಗೆ ಒಟ್ಟು 41 ದಿನಗಳ ಬೇಸಿಗೆ ರಜೆ ಇದೆ. ಈ ಅವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಶಾಲೆಯಲ್ಲಿ ಕೊಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಯ ಜೊತೆಗೆ ಆದೇಶ ಬಂದಿದೆ.
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 31 ಕಂದಾಯ ಜಿಲ್ಲೆಗಳ 223 ಬರ ಪೀಡಿತ ತಾಲೂಕುಗಳನ್ನು ಗುರುತು ಮಾಡಲಾಗಿದೆ. ಇಲ್ಲಿ ಸರ್ಕಾರಿ ಮತ್ತು ಅನುದಾನಿತ 1ರಿಂದ 10ನೇ ತರಗತಿಗಳ ಶಾಲಾ ಮಕ್ಕಳಿಗೆ, ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ಅನುಷ್ಠಾನಗೊಳಿಸುವಂತೆ ಮಾರ್ಗಸೂಚಿ ನೀಡಲಾಗಿದೆ.
ಕೊರೊನಾ ಸಂದರ್ಭದಲ್ಲೂ ಇಲಾಖೆ ಇಂಥದೊಂದು ಜನಪರ ಕಾರ್ಯಕ್ರಮವನ್ನು ರೂಪಿಸಿತ್ತು. ತರಗತಿಗಳು ಆನ್‌ಲೈನ್ ನಡೆಯುತ್ತಿದ್ದರೂ ಬಡವರ್ಗದ ಮಕ್ಕಳಿಗೆ ಬಿಸಿಯೂಟ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೂಲಿ ಸಾಧ್ಯತೆ ಕಳೆದುಕೊಂಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಬಿಸಿಯೂಟ ವಿತರಣೆ ಹೇಗೆ?
ಬರಪೀಡಿತ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದರೆ ಅವುಗಳನ್ನು ಗುರುತು ಮಾಡಬೇಕು. ಹೆಚ್ಚು ಮಕ್ಕಳಿರುವ ಸರಕಾರಿ ಶಾಲೆ ಅಥವಾ ಅನುದಾನಿತ ಶಾಲೆಯನ್ನು ಕೇಂದ್ರ ಶಾಲೆ ಎಂದು ಗುರುತಿಸಬೇಕು. ಕೇಂದ್ರ ಶಾಲೆಗೆ ಸುತ್ತಮುತ್ತಲಿನ ಒಂದು ಅಥವಾ ಎರಡು ಕಿ.ಮೀ. ವ್ಯಾಪ್ತಿಯಲ್ಲಿರುವ ಶಾಲಾ ಮಕ್ಕಳು ಬರಬೇಕು. ಅಲ್ಲಿ ಬಿಸಿಯೂಟ ಒದಗಿಸಬೇಕು ಎಂದು ತಿಳಿಸಲಾಗಿದೆ.
ಬಿಸಿಯೂಟಕ್ಕೆ ಅರ್ಹ ಮಕ್ಕಳನ್ನು ಗುರುತಿಸಿ ಪಟ್ಟಿ ಸಲ್ಲಿಸಲು, ಸೂಕ್ತ ಮೇಲ್ವಿಚಾರಣೆ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಮುಖ್ಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಈ ಯೋಜನೆ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಲು ಶಾಲಾಭಿವೃದ್ಧಿ ಮಂಡಳಿಗಳು ಹಾಗೂ ಶಿಕ್ಷಕ ಸಿಬ್ಬಂದಿಗೆ ಸೂಚಿಸಲಾಗಿದೆ.
ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥ
ಗಂಗಾವತಿ: ಬಿಸಿಯೂಟ (Midday meals) ಸೇವಿಸಿದ ಬಳಿಕ 30ಕ್ಕೂ ಹೆಚ್ಚು ಮಕ್ಕಳು (Food Poison) ಅಸ್ವಸ್ಥಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟ ಸೇವಿಸಿದ 1 ರಿಂದ 5 ತರಗತಿಯ 32 ಮಕ್ಕಳಲ್ಲಿ ವಾಂತಿ, ತಲೆನೋವು ಕಾಣಿಸಿಕೊಂಡಿದೆ. ಒಬ್ಬರ ನಂತರ ಒಬ್ಬರು ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಡಿಎಚ್ಓ ಡಾ. ಲಿಂಗರಾಜ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ನಾಗರಾಜ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತು ಶಾಲೆಯ ಶಿಕ್ಷಕರಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Koppala News: ಬಿಸಿಯೂಟ ಸೇವಿಸಿ ಅಸ್ವಸ್ಥ ಪ್ರಕರಣ: ಇಬ್ಬರು ಅಮಾನತು