ಬೆಂಗಳೂರು: ಹಾಲಿನ ದರ (Milk Price) ಹೆಚ್ಚಾಗಿರುವ ಬಗ್ಗೆ ಗೊತ್ತಿಲ್ಲ. ಅದು ಸರ್ಕಾರ ಮಾಡೋದಿಲ್ಲ. ಕೆಎಂಎಫ್‌ನವರು ಹಾಲಿನ ದರ ಹೆಚ್ಚಳ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಹಾಲಿನ ದರ ಏರಿಕೆಗೆ ವಿಪಕ್ಷಗಳು ಆಕ್ರೋಶ ಹಾಕಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಕೆಎಂಎಫ್ ಜತೆ ದರ ಏರಿಕೆ ಬಗ್ಗೆ ಚರ್ಚೆ ಮಾಡುವೆ. ಬೇರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ದರ ಹೆಚ್ಚಳ ಮಾಡುತ್ತಾರೆ. ಅಲ್ಲಿಗಿಂತ ಕಡಿಮೆ ಇದ್ದರೆ ಜಾಸ್ತಿ ಮಾಡುತ್ತಾರೆ. ನನಗೆ ಗೊತ್ತಿರುವ ಪ್ರಕಾರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಇದೆ ಎಂದು ತಿಳಿಸಿದ್ದಾರೆ.
50 ಮಿ.ಲೀ. ಹೆಚ್ಚಿಗೆ ಹಾಲು ಕೊಟ್ಟು 2 ರೂ. ಜಾಸ್ತಿ ಮಾಡಿದ್ದೇವೆ: ಕೆಎಂಎಫ್ ಅಧ್ಯಕ್ಷ
ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಪ್ರತಿಕ್ರಿಯಿಸಿ, 10 ವರ್ಷದಲ್ಲಿ ರಾಜ್ಯದ ಜನರ ರಕ್ತವನ್ನು ತಿಗಣೆ ರೀತಿಯಲ್ಲಿ ಬಿಜೆಪಿ ಸರ್ಕಾರ ಹೀರಿದೆ. 75 ವರ್ಷದ ಇತಿಹಾಸದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ ಅಂತ ಎಲ್ಲರಿಗೂ ಗೊತ್ತಿದೆ. ಇಷ್ಟು ವರ್ಷ ದರ ಏರಿಕೆ ಆದಾಗ ವಿಜಯೇಂದ್ರ, ಆರ್. ಅಶೋಕ್ ಎಲ್ಲಿ ಹೋಗಿದ್ದರು. ಹತ್ತು ವರ್ಷದಲ್ಲಿ ಬಿಜೆಪಿ ಸರ್ಕಾರ ಏನೇನು ಮಾಡಿದೆ ಗೊತ್ತು, ನಾವು ನಂದಿನಿ ಹಾಳಿನ ದರ ಜಾಸ್ತಿ ಮಾಡಿಲ್ಲ. 50ml ಹೆಚ್ಚಿಗೆ ಹಾಲು ಕೊಟ್ಟು 2 ರೂ. ಜಾಸ್ತಿ ಮಾಡಿದ್ದೇವೆ ಎಂದು ತಿಳಿಸಿದರು.
ಕಳೆದ 15 ವರ್ಷಕ್ಕೆ ಹೋಲಿಸಿದ್ರೆ ಜೂನ್, ಜುಲೈನಲ್ಲಿ ಶೇ.15 ಹಾಲು ಶೇಖರಣೆ ಹೆಚ್ಚಾಗಿದೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ. ಇದಕ್ಕಾಗಿ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ನಂದಿನಿ ಹಾಲಿನ ದರ ಹೆಚ್ಚು ಮಾಡಿಲ್ಲ, 50ml ಹೆಚ್ಚಿಗೆ ಹಾಲು ಕೊಟ್ಟು 2ರೂ ಜಾಸ್ತಿ ಮಾಡಿದ್ದೇವೆ. ಇದನ್ನು ತಿಳಿದುಕೊಂಡು ಮಾತನಾಡಬೇಕು. ದರ ಏರಿಕೆ ವಿರುದ್ಧ ಬಿಜೆಪಿ ಹೋರಾಟ ಮಾಡಲಿ, ಅವರಿಗೆ ಒಳ್ಳೆಯದಾಗಲಿ. ಬಿಜೆಪಿಯವರು ಹೋರಾಟ ಮಾಡೋದಿ ಬಿಟ್ಟರೆ ಬೇರೇನಿಲ್ಲ, ಅವರನ್ನು ಹೋರಾಟ ಮಾಡೋದಕ್ಕೆ ಅಂತಲೇ ಜನ ಬಿಟ್ಟಿರೋದು ಎಂದು ಟೀಕಿಸಿದರು.
ಇದನ್ನೂ ಓದಿ | Milk Price: ನಂದಿನಿ ಹಾಲು ದರ ಏರಿಕೆ ಶಾಕ್; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!
ಬೆಲೆ ಏರಿಕೆ ಸಮರ್ಥಿಸಿದ ಕೆ.ಎಚ್. ಮುನಿಯಪ್ಪ
ಹಾಲಿನ ಬೆಲೆ ಏರಿಕೆಯನ್ನು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸಮರ್ಥಿಸಿಕೊಂಡಿದ್ದಾರೆ. ಬೇರೆ ರಾಜ್ಯಗಳಿಗಿಂದ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ. ಯಾವುದೇ ರಾಜ್ಯಕ್ಕಿಂತ ಜಾಸ್ತಿಯಿಲ್ಲ. ತಮಿಳುನಾಡಿನ ಹಾಗೂ ನಮ್ಮ ರಾಜ್ಯದ್ದು ಒಂದೇ ದರವಿದೆ. ಎಲ್ಲಾ ರಾಜ್ಯಗಳಲ್ಲಿ 5, 6 ,7 ರೂಪಾಯಿ ಜಾಸ್ತಿ ಇದೆ. ಸರ್ಕಾರ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಬೇಕಾದರೆ ಅನಿವಾರ್ಯವಾಗಿ ಇಂತಹ ತೀರ್ಮಾನ ಮಾಡಬೇಕಾಗುತ್ತದೆ. ಗ್ಯಾರಂಟಿಗಳಿಗೂ ಬೆಲೆ ಏರಿಕೆಗೆ ಸಂಬಂಧವಿಲ್ಲ ಎಂದು ಹೇಳಿದರು.